RSS: ಇಷ್ಟು ವರ್ಷ ಸಂಘದ ನೋಂದಣಿ ಏಕೆ ಪ್ರಶ್ನಿಸಲಿಲ್ಲ: ಪ್ರಿಯಾಂಕ್ ಖರ್ಗೆ ವಿರುದ್ಧ ಈಶ್ವರಪ್ಪ ವಾಗ್ದಾಳಿ

Published : Jun 23, 2026, 10:52 PM IST
KS Eshwarappa

ಸಾರಾಂಶ

RSS Registration Controversy: ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿತವಾದ ಆರ್‌ಎಸ್‌ಎಸ್‌ ಸಂಘದ ನೋಂದಣಿ ಬಗ್ಗೆ ಈಗ ಪ್ರಶ್ನಿಸುತ್ತಿರುವವರು ಇಷ್ಟು ವರ್ಷ ಏಕೆ ಸುಮ್ಮನಿದ್ದರು ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನೆ ಮಾಡಿದರು.

ಶಿವಮೊಗ್ಗ (ಜೂ.23): ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿತವಾದ ಆರ್‌ಎಸ್‌ಎಸ್‌ ಸಂಘದ ನೋಂದಣಿ ಬಗ್ಗೆ ಈಗ ಪ್ರಶ್ನಿಸುತ್ತಿರುವವರು ಇಷ್ಟು ವರ್ಷ ಏಕೆ ಸುಮ್ಮನಿದ್ದರು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರಶ್ನೆ ಮಾಡಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪದೇ ಪದೇ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಿರುವ ರಾಜ್ಯ ಗೃಹಮಂತ್ರಿ ಪ್ರಿಯಾಂಕ್ ಖರ್ಗೆಯವರಿಗೆ ಸಂವಿಧಾನದ ಬಗ್ಗೆ ಅರಿವೇ ಇಲ್ಲ. ಆರ್‌ಎಸ್‌ಎಸ್ ಸಂಘದ ನೋಂದಣಿ ವಿಷಯವಾಗಿ ಪ್ರಿಯಾಂಕ್ ಖರ್ಗೆ ಸಂಘದ ಸರಸಂಘ ಸಂಚಾಲಕ ಮೋಹನ್ ಭಾಗವತ್ ಅವರಿಗೆ ಬರೆದಿರುವ ಪತ್ರ ಮತ್ತು ಕೇಳಿರುವ ಪ್ರಶ್ನೆಗಳು ಪ್ರಿಯಾಂಕ್ ಖರ್ಗೆ ಅವರದ್ದೋ ಅಥವಾ ಕಾಂಗ್ರೆಸ್ ಪಕ್ಷದ್ದೋ ಎಂದು ಪ್ರಶ್ನಿಸಿದರು.

ಅಷ್ಟಕ್ಕೂ ಯಾವುದೇ ಸಂಘಗಳ ಅಥವಾ ಸಂಸ್ಥೆಗಳನ್ನು ನೋಂದಣಿ ಮಾಡಿಸುವುದು-ಬಿಡುವುದು ಆಯಾ ಸಂಸ್ಥೆಗೆ ಸೇರಿದ್ದಾಗಿದೆ. ಒಂದು ಸ್ವಯಂಪ್ರೇರಿತ ವ್ಯಕ್ತಿಗಳ ಸಮೂಹ ಸಂವಿಧಾನದ ಅನುಚ್ಛೇದ 19 (1) (ಸಿ) ಪ್ರಕಾರ ದೇಶದ ಯಾವುದೇ ವ್ಯಕ್ತಿ ಸಂಘ-ಸಂಸ್ಥೆಗಳನ್ನು ರಚಿಸುವ ಮೂಲಭೂತ ಹಕ್ಕನ್ನು ಹೊಂದಿರುತ್ತದೆ. ನೋಂದಣಿ ಮಾಡಿಸಲೇಬೇಕೆಂಬ ನಿಯಮವೂ ಇಲ್ಲ. 1982ರ ಸಂಘಗಳ ನೋಂದಣಿ ಕಾರ್ಯಕೂಡ ಇದನ್ನೇ ಹೇಳುತ್ತದೆ. ಸರ್ಕಾರದಿಂದ ಅನುದಾನ ಪಡೆಯಲು ಅಥವಾ ಪ್ರತ್ಯೇಕ ಕಾನೂನುಬದ್ಧ ಘಟಕವಾಗಿ ಕಾರ್ಯನಿರ್ವಹಿಸಲು ಬಯಸಿದಾಗ ಮಾತ್ರ ನೋಂದಣಿ ಬೇಕಾಗುತ್ತದೆ. ಆರ್‌ಎಸ್‌ಎಸ್ ವ್ಯಕ್ತಿಗಳ ಸಮೂಹವಾಗಿದ್ದು, ಅದು ಯಾವುದೇ ಆಸ್ತಿ ಅನುದಾನವನ್ನು ಬಯಸುವುದಿಲ್ಲ. ಆದ್ದರಿಂದ ಸಂಘದ ನೋಂದಣಿ ಕಡ್ಡಾಯವಲ್ಲ. ಇದು ಪ್ರಿಯಾಂಕ್ ಖರ್ಗೆಯವರಿಗೆ ಗೊತ್ತಿರಬೇಕು ಎಂದು ಟೀಕಿಸಿದರು.

ಈಗಾಗಲೇ ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಕಾನೂನು ತಜ್ಞರು ಉತ್ತರ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ, ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ.ಆಚಾರ್‍ಯ ಹೇಳಿಕೆ ನೀಡಿ, ಪ್ರಿಯಾಂಕ್‌ ಖರ್ಗೆ ಅವರಿಗೆ ಸಂಘಕ್ಕೆ ಪತ್ರ ಅಥವಾ ನೋಟೀಸ್ ಕೊಡುವ ಯಾವ ಅಧಿಕಾರವೂ ಇಲ್ಲ ಎಂದಿದ್ದಾರೆ. ಹಾಗೆಯೇ ಹೈಕೋರ್ಟಿನ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರು ಕೂಡ ಖರ್ಗೆಯವರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದಿದ್ದಾರೆ. ಇದನ್ನು ಪ್ರಿಯಾಂಕ್ ಖರ್ಗೆ ಅರ್ಥಮಾಡಿಕೊಳ್ಳಬೇಕು ಎಂದು ಕುಟುಕಿದರು.

ಅಲ್ಲದೆ, ವಕೀಲರು, ಮಾಜಿ ಅಡ್ವೋಕೇಟ್ ಜನರಲ್‌ಗಳು, ಸುಪ್ರೀಂಕೋರ್ಟ್ ನ್ಯಾಯಾಧೀಶರು, ನಿವೃತ್ತ ನ್ಯಾಯಮೂರ್ತಿಗಳು ತಮ್ಮ ಅರಿವಿನ ಮತ್ತು ಜ್ಞಾನದಿಂದ ನೀಡಿದ ಹೇಳಿಕೆಗಳನ್ನು ಪ್ರಿಯಾಂಕ್ ಖರ್ಗೆ ಧಿಕ್ಕರಿಸಿ ಇಂತಹ ವ್ಯಕ್ತಿಗಳನ್ನು ಗುಲಾಮರು ಎಂದು ಕರೆಯುವ ಮೂಲಕ ತಮ್ಮ ಸಂಸ್ಕೃತಿಯನ್ನು ಬಹಿರಂಗಪಡಿಸಿದ್ದಾರೆ. ಪ್ರಿಯಾಂಕ್‌ ಅವರ ಹೇಳಿಕೆ ಅವರ ವಿದ್ಯೆ, ಜ್ಞಾನ ಮತ್ತು ಅರ್ಹತೆ ನಿರ್ಧರಿಸುತ್ತದೆ ಎಂದು ವ್ಯಂಗ್ಯವಾಡಿದರು. ಹೊಸದಾಗಿ ಅಧಿಕಾರದ ಸ್ವೀಕರಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಈ ಇಬ್ಬರು ಒಂದು ರೀತಿಯಲ್ಲಿ ಅರ್ಬನ್ ನಕ್ಸಲರು ಎಂದು ಜರಿದ ಅವರು, ಈ ಇಬ್ಬರೂ ಹಿರಣ್ಯ-ಕಶ್ಯಪು ಇದ್ದಂತೆ. ಇವರನ್ನು ನಾಶಮಾಡಲು ಭಕ್ತಪ್ರಹ್ಲಾದನ ರೀತಿಯಲ್ಲಿ ನಾವಿದ್ದೇವೆ ಎಂದು ಪೌರಾಣಿಕೆ ಹಿನ್ನಲೆಯೊಂದಿಗೆ ಟೀಕಿಸಿದರು.

ಕವಡೆ ಕಾಸಿನ ಕಿಮ್ಮತ್ತಿಲ್ಲ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆಣೆ-ಪ್ರಮಾಣದ ವಿರುದ್ಧ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ಅವರು, ಕೋಟ್ಯಂತರ ಜನರ ಆರಾಧ್ಯ ದೈವವಾಗಿರುವ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಭಕ್ತಿಯನ್ನು ವಿಜಯೇಂದ್ರ ಓರೆಗೆ ಹಚ್ಚಬಾರದು. ಮೊದಲು ಅವರು ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಅಡ್ಡ ಮತದಾನ ಮಾಡಿದವರು ಮಂಜುನಾಥನ ಮುಂದೆ ಆಣೆ ಮಾಡಿ, ಅಣ್ಣಪ್ಪ ಸ್ವಾಮಿ ಮುಂದೆ ಕ್ಷಮೆ ಕೇಳಿದರೆ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿರುವುದಿಲ್ಲ. ಹೀಗೆ ಶಿವಮೊಗ್ಗದ ವಾರ್ಡ್ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬ ಸಿಗಂದೂರು ಚೌಡೇಶ್ವರಿ ದೇವಿಯ ಫೋಟೊ ಹಾಗೂ 5 ರುಪಾಯಿ ಕೊಟ್ಟು ಆಣೆ ಮಾಡಿಸಿದ್ದ. ಮರುದಿನ ಮತ್ತೊಬ್ಬ ಅಭ್ಯರ್ಥಿ ಮಾರಮ್ಮನ ಫೋಟೊ ಜತೆ 10 ರೂಪಾಯಿ ಕೊಟ್ಟು ಆಣೆ ಮಾಡಿಸಿದ. ಕೊನೆಗೆ ಹತ್ತು ರುಪಾಯಿ ಕೊಟ್ಟವನೇ ಚುನಾವಣೆಯಲ್ಲಿ ಗೆದ್ದ ಎಂದು ಲೇವಡಿ ಮಾಡಿದರು.

PREV
Read more Articles on
click me!

Recommended Stories

Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
Bengaluru Landlord: ಮನೆ ಖಾಲಿ ಮಾಡ್ತೀನಿ ಎಂದ ಯುವತಿಗೆ ಓನರ್ ಕೊಟ್ಟ ರಿಪ್ಲೈ ವೈರಲ್! ನೀವೂ ಓದಿ