
ಬೆಳಗಾವಿ: ಚೋರ್ಲಾ ಘಾಟ್‌ನಲ್ಲಿ ನಡೆದ ₹400 ಕೋಟಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಪ್ರಕರಣದ ದೂರುದಾರ ಸಂದೀಪ್ ಪಾಟೀಲ್ ಬೆಳಗಾವಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಅವರಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರ ಎಸ್ಐಟಿ ಪೊಲೀಸರಿಂದ ಪಾರದರ್ಶಕ ತನಿಖೆ ನಡೆಯುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಪಾಟೀಲ್, ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಆಡಿಯೋ ದಾಖಲೆಗಳು ತಮ್ಮ ಬಳಿ ಇದ್ದು, ಇವುಗಳ ಆಧಾರದ ಮೇಲೆ ಬೆಳಗಾವಿಯಲ್ಲಿ ಎಫ್ಐಆರ್ ದಾಖಲಿಸಿ ಸ್ವತಂತ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಮಹಾರಾಷ್ಟ್ರ ಎಸ್ಐಟಿ ಈಗಾಗಲೇ ಎಂಟು ಆರೋಪಿಗಳನ್ನು ಬಂಧಿಸಿದೆ. ಆದರೆ, ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನವನ್ನು ಪಾಟೀಲ್ ವ್ಯಕ್ತಪಡಿಸಿದ್ದಾರೆ.
ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ನಾಪತ್ತೆಯಾದ ಪ್ರಕರಣದ ಬಗ್ಗೆ ಎಲ್ಲರಿಗಿಂತ ಮೊದಲೇ (ಜ.25) ‘ಕನ್ನಡಪ್ರಭ’ ವರದಿ ಮಾಡಿತ್ತು.
ಈ ಕುರಿತಂತೆ ಅವರು ಈಗಾಗಲೇ ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರು ಹಾಗೂ ಬಾಂಬೆ ಹೈಕೋರ್ಟ್‌ಗೂ ದೂರು ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಎಸ್ಐಟಿ ತಂಡದ ವಿರುದ್ಧವೇ ದೂರು ನೀಡಿರುವ ಪಾಟೀಲ್, ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
ಗೋವಾದಿಂದ ಮಹಾರಾಷ್ಟ್ರಕ್ಕೆ ₹400 ಕೋಟಿ ನಗದು ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳನ್ನೇ ಹೈಜಾಕ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. 2 ಕಂಟೇನರ್‌ಗಳಲ್ಲಿ ಈ ಹಣವನ್ನು ಸಾಗಿಸುತ್ತಿದ್ದಾಗ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟನಲ್ಲಿ ಹೈಜಾಕ್ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ₹400 ಕೋಟಿ ದರೋಡೆಗೆ ಚೋರ್ಲಾ ಘಾಟ್ ಆಯ್ಕೆ ಮಾಡಿಕೊಂಡಿದ್ಯಾಕೆ? 15-20 ಕಿಮೀ ನಡುವೆಯೇ ದಾಳಿ?
2025ರ ಅಕ್ಟೋಬರ್ 16ರಂದು ಪ್ರಕರಣ ನಡೆದಿತ್ತು. ಆದರೆ, ತಡವಾಗಿ ಬೆಳಕಿಗೆ ಬಂದಿತ್ತು. ಮಾತ್ರವಲ್ಲ, ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಹಕರಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಅವರು ಬೆಳಗಾವಿ ಎಸ್ಪಿ ಅವರಿಗೆ ಪತ್ರ ಬರೆದು ಮನವಿ ಕೂಡ ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದೆ.
ಇದನ್ನೂ ಓದಿ: ದೇಶದ ಅತಿದೊಡ್ಡ ದರೋಡೆ: ₹400 ಕೋಟಿ ಇದ್ದ 2 ಕಂಟೇನರ್ ಲಾರಿಗಳೇ ಬೆಳಗಾವಿಯಲ್ಲಿ ನಾಪತ್ತೆ!