
ಚಿಕ್ಕಮಗಳೂರು (ಫೆ.15) ತಾಯಿ ಬೈಗಳು ಜೊತೆ ಬುದ್ದಿ ಮಾತು ಹೇಳಿದ ಕಾರಣಕ್ಕೆ ಮಗಳು ದುರಂತ ಅಂತ್ಯ ಕಂಡ ಘಟನೆ ಕಾಫಿನಾಡು ಚಿಕ್ಕಮಗಳೂರಲ್ಲಿ ನಡೆದಿದೆ. ಕೊಪ್ಪ ತಾಲೂಕಿನ ಜಯಪುರ ಗ್ರಾಮದ ದುರಂತ ಘಟನೆ ಹಲವರನ್ನು ಭಾವುಕರನ್ನಾಗಿ ಮಾಡಿದೆ. ಊಟ ಮಾಡುವಾಗ 13 ವರ್ಷದ ಮಗಳ ಕೈಯಿಂದ ತಟ್ಟೆ ಬಿದ್ದಿದೆ. ಅನ್ನ ನೆಲದ ಮೇಲೆ ಚೆಲ್ಲಿದೆ. ಅನ್ನ ಚೆಲ್ಲಿದ ಕಾರಣಕ್ಕೆ ತಾಯಿ ಬೈದಿದ್ದಾರೆ. ಗಮನ ಇಲ್ಲ, ಬರೀ ಟಿವಿ ನೋಡು ಎಂದೆಲ್ಲಾ ಬೈದಿದ್ದಾರೆ. ಚೆಲ್ಲಿದ ಅನ್ನ ಕ್ಲೀನ್ ಮಾಡಲು ಹೇಳಿದ್ದಾರೆ. ಆದರೆ ತಾಯಿ ಬೈಗಳು ಮಗಳಿಗೆ ಸಹಿಸಲು ಸಾಧ್ಯವಾಗಿಲ್ಲ. ಪರಿಣಾಮ 7ನೇ ತರಗತಿ ವಿದ್ಯಾರ್ಥಿನಿ ಬದುಕು ಅಂತ್ಯಗೊಳಿಸಿದ್ದಾಳೆ.
ಸುಪ್ರೀತಾ (13) ಮೃತ ದುರ್ದೈವಿ. ತಟ್ಟೆ ಬಿದ್ದು ಅನ್ನ ಚೆಲ್ಲಿದ ಕಾರಣ ಸಹಜವಾಗಿ ತಾಯಿ ಬೈದಿದ್ದಾರೆ. ಯಾವುದರ ಕಡೆ ಗಮನ ಇಲ್ಲ, ಕೇವಲ ಟಿವಿ ಮಾತ್ರ ನೋಡುತ್ತಿರು, ಓದಬೇಡು ಎಂದಿದ್ದಾರೆ. ಬಿದ್ದ ಅನ್ನ ಎಲ್ಲವನ್ನೂ ಕ್ಲೀನ್ ಮಾಡಲು ಸೂಚಿಸಿದ್ದಾರೆ. ತೀವ್ರ ನೋವಿನಿಂದ ಚೆಲ್ಲಿದ ಅನ್ನ ತೆಗೆದು ಕ್ಲೀನ್ ಮಾಡಿದ್ದಾಳೆ. ಬಳಿಕ ತಾಯಿ ಜೊತೆ ಮಗಳು ಸುಪ್ರೀತಾ ಮಾತನಾಡಲೇ ಇಲ್ಲ.
ಮಗಳಿಗೆ ಬುದ್ದಿ ಮಾತು ಹೇಳಿದ ತಾಯಿ ಕೆಲಸಕ್ಕೆ ಹೊರಟಿದ್ದಾರೆ. ಆದರೆ ತಾಯಿ ಬೈಗುಳ, ಬುದ್ದಿ ಮಾತು ಏನೇ ಹೇಳಿದರೂ ಮಗಳು ಸುಪ್ರೀತಾ ಒಂದು ಮಾತು ಆಡಲಿಲ್ಲ. ಅಷ್ಟರಲ್ಲೇ ಗಟ್ಟಿ ನಿರ್ಧಾರ ಮಾಡಿದ್ದಳು. ತಾಯಿ ಮನೆಯಿಂದ ಹೊರಗೆ ಹೋದ ಕೆಲ ಹೊತ್ತಲ್ಲೇ ಬದುಕು ಅಂತ್ಯಗೊಳಿಸಿದ್ದಾಳೆ.
ಕೆಲಸ ಮುಗಿಸಿ ಮನೆಗೆ ಮರಳುವವರೆಗೂ ತಾಯಿಗೂ ಮಗಳಿಗೆ ಏನಾಗಿದೆ ಅನ್ನೋದು ಗೊತ್ತೆ ಇಲ್ಲ. ಮನೆಗೆ ಮರಳಿದಾಗ ಮಗಳ ಸ್ಥಿತಿ ಕಂಡು ತಾಯಿ ಗೋಳಾಡಿದ್ದಾಳೆ. ಮಗಳ ದುಡುಕಿನ ನಿರ್ಧಾರದಿಂದ ತಾಯಿ ಎಲ್ಲವನ್ನೂ ಕಳೆದುಕೊಂಡಿದ್ದಾಳೆ. ಪ್ರೀತಿಯಿಂದ ಬೆಳೆಸಿದ್ದ ಮಗಳಿಗೆ ಬುದ್ದಿವಾದ ಹೇಳಿದ್ದೇ ತಪ್ಪಾಗಿತ್ತು. ತಾಯಿಯ ಬೈಗುಳ ಮಗಳ ಮೇಲೆ ಈ ರೀತಿ ಪರಿಣಾಮ ಬೀರಲಿದೆ ಅನ್ನೋ ಸಣ್ಣ ಕಲ್ಪನೆ ತಾಯಿಗೆ ಇರಲಿಲ್ಲ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗಳ ಅಪ್ಪಿ ಹಿಡಿದು ತಾಯಿ ರೋಧಿಸುತ್ತಿದ್ದಾರೆ. ತನ್ನೆಲ್ಲಾ ಸರ್ವಸ್ವ ಆಗಿದ್ದ ಮಗಳೇ ಬಿಟ್ಟು ಹೋಗಿದ್ದಾಳೆ ಎಂದು ಗೋಳಾಡಿದ್ದಾರೆ. ಕುಟುಂಬಸ್ಥರು, ಆಪ್ತರು, ಸ್ಥಳೀಯರು ಆಗಮಿಸಿ ತಾಯಿಯನ್ನು ಸಮಾಧಾನಿಸುವ ಪ್ರಯತ್ನ ಮಾಡಿದ್ದಾರೆ. ತಾಯಿ ಪರಿಸ್ಥಿತಿ, ಮಗಳ ನಿರ್ಧಾರ ನೋಡಿ ಹಲವರು ಭಾವುಕರಾಗಿದ್ದಾರೆ.