'ಪ್ರತಿ ಟನ್ ಕಬ್ಬಿಗೆ ₹3600 ದರ ನಿಗದಿ, ರೈತರು ಇದನ್ನು ಒಪ್ಪಿಕೊಳ್ಳಬೇಕು' ಸತೀಶ ಜಾರಕಿಹೊಳಿ ಘೋಷಣೆ

Published : Nov 04, 2026, 09:56 PM IST
Sugarcane farmers protest Satish Jarkiholi

ಸಾರಾಂಶ

ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಪ್ರತಿ ಟನ್ ಕಬ್ಬಿಗೆ 3600 ರೂ. ದರ ನಿಗದಿಪಡಿಸಿ ಘೋಷಣೆ ಮಾಡಿದ್ದಾರೆ. ರೈತರು ಪ್ರತಿಭಟನೆ ಕೈಬಿಟ್ಟು ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ರೈತ ನಾಯಕರ ಮುಂದಿನ ನಡೆ ಏನು ಅನ್ನೋ ಕುತೂಹಲ ಹೆಚ್ಚಾಗಿದೆ.

ಬೆಳಗಾವಿ: ಪ್ರತಿ ಟನ್ ಕಬ್ಬಿಗೆ ದರ ನಿಗದಿ ಆಗಿದೆ, ರೈತ ಮುಖಂಡರು ಇದನ್ನು ಒಪ್ಪಿಕೊಳ್ಳಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ. ರೈತ ಮುಖಂಡರು ಹಾಗೂ ಕಾರ್ಖಾನೆ ಮಾಲೀಕರ ಜೊತೆ ಸತತ ಸಭೆ ಬಳಿಕ ಸತೀಶ ಜಾರಕಿಹೊಳಿ ಈ ಹೇಳಿಕೆ ನೀಡಿದ್ದಾರೆ.

ಸಚಿವರು ಘೋಷಣೆ ಮಾಡಿದ್ದು ಎಷ್ಟು?

ಪ್ರತಿ ಟನ್ ಕಬ್ಬಿಗೆ 3600 ರೂಪಾಯಿ ದರ ನೀಡಲಾಗುವುದು ಎಂದು ಸಚಿವರು ಘೋಷಣೆ ಮಾಡಿದ್ದಾರೆ. 3600 ರೂಪಾಯಿಗೆ ಕಾರ್ಖಾನೆ ಮಾಲೀಕರು ಒಪ್ಪಿದ್ದಾರೆ. ಇದಕ್ಕೆ ರೈತ ಮುಖಂಡರು ಒಪ್ಪಿಕೊಳ್ಳಬೇಕು. ನಾಳೆಯಿಂದ ಕಾರ್ಖಾನೆ ಆರಂಭಿಸಲು ಎಲ್ಲರೂ ಸಹಕರಿಸಬೇಕು. ಚೂನಪ್ಪ ಪೂಜಾರಿ, ‌ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಪ್ರತಿಭಟನೆ ಕೈ ಬಿಡಬೇಕು. ಕಾರ್ಖಾನೆ ಆರಂಭವಾದ ಬಳಿಕ ಸರ್ಕಾರದ ಬಳಿ ಪ್ರತ್ಯೇಕ ಬೇಡಿಕೆ ಇಡಲಿ. ಕೂಡಲೇ ರೈತ ನಾಯಕರು ಜೈಲು ಬರೋ ಚಳವಳಿ ಕೈ ಬಿಡಬೇಕು ಎಂದು ಮನವಿ ಮಾಡಿದರು. ಮಾತು ಮುಂದುವರಿಸಿ.. ಎಂಎಸ್ ಪಿ ಹೆಚ್ಚಳವಾದ್ರೆ ಅದರ ಲಾಭ ರೈತರಿಗೆ ಕೊಡಲಾಗುವುದು. ರೈತರಿಗೆ ತೊಂದರೆ ಆಗಬಾರದು, ಅಂದರೆ ಕಾರ್ಖಾನೆ ಆರಂಭಿಸಬೇಕು. ಎಸ್ ಎ ಪಿ ಜಾರಿಗೆ ಆಗ್ರಹಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು. ಸರ್ಕಾರ ಬೆಲೆ ಘೋಷಣೆ ಬೆನ್ನಲ್ಲೇ ರೈತರ ನಾಯಕರ ಮುಂದಿನ ನಡೆ ಏನು ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಪ್ರಸ್ತುತ 3300 ದರ ಇದೆ. ಇದರಲ್ಲಿ ಕಾರ್ಖಾನೆಗಳಿಂದ 3250 ರೂಪಾಯಿ ಹಾಗೂ ಸರ್ಕಾರ 50 ರೂಪಾಯಿ ಸಬ್ಸಿಡಿ ನೀಡುತ್ತಿತ್ತು.

ಯಾಕೆ ರೈತರ ಪ್ರತಿಭಟನೆ?

ಕಬ್ಬಿಗೆ ಸೂಕ್ತ ದರ ನಿಗದಿಪಡಿಸಿ, ಕೂಡಲೇ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬೇಕು. ಕಾರ್ಖಾನೆ ಮಾಲೀಕರು ಪ್ರತಿ ಟನ್‌ಗೆ ₹4,500 ಹಾಗೂ ರಾಜ್ಯ ಸರ್ಕಾರ ₹1,000 ಪ್ರೋತ್ಸಾಹಧನ ನೀಡಬೇಕು ಎಂದು ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ನಿವಾಸದ ಮುಂದೆ ಒಕ್ಕೊರಲಿನಿಂದ ಆಗ್ರಹಿಸಿದ್ದರು.

ಇನ್ನು ನವೆಂಬರ್ 3 ರಂದು ಬೆಳಗಾವಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ ಶಿಂಧೆ ನೇತೃತ್ವದಲ್ಲಿ ಸಭೆ ನಡೆಸಿದ್ದರು. ಈ ವೇಳೆ ಸುಮಾರು 300 ರೈತರು, ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಎಸ್‌ಎಪಿ, ಎಂಆರ್‌ಪಿ, ಎಂಎಸ್‌ಪಿ ಸೇರಿದಂತೆ ಕಬ್ಬಿನ ಬೆಲೆ ನಿಗದಿಯ ವಿವಿಧ ಆಯಾಮಗಳನ್ನು ಪ್ರಸ್ತಾಪಿಸಿದರು. ಸಕ್ಕರೆ ಮಾರಾಟದಿಂದ ಮಾತ್ರವಲ್ಲದೆ ಮೊಲಾಸಿಸ್, ಎಥೆನಾಲ್, ಬಗಾಸ್ ಸೇರಿದಂತೆ ಉಪ ಉತ್ಪನ್ನಗಳಿಂದಲೂ ಕಾರ್ಖಾನೆಗಳಿಗೆ ಆದಾಯ ಬರುತ್ತಿದೆ. ಆದರೆ, ಅದರ ಲಾಭದಲ್ಲಿ ರೈತರಿಗೆ ನ್ಯಾಯಯುತ ಪಾಲು ಸಿಗುತ್ತಿಲ್ಲ. ಕಬ್ಬಿನ ಇಳುವರಿ ಕುಸಿಯುತ್ತಿದೆ. ವಿದ್ಯುತ್ ತಂತಿಗಳಿಂದ ಬೆಳೆ ಹಾನಿಯಾಗುತ್ತಿದೆ. ನೀರಿನ ಸಮಸ್ಯೆಯೂ ಕಾಡುತ್ತಿದೆ. ಹೀಗಿರುವಾಗ ರೈತರನ್ನು ಉಳಿಸುವ ಜವಾಬ್ದಾರಿ ಸರ್ಕಾರ ಮತ್ತು ಕಾರ್ಖಾನೆಗಳ ಮೇಲಿದೆ ಎಂದು ಒತ್ತಾಯಿಸಿದ್ದರು.

PREV
Read more Articles on
click me!

Recommended Stories

ಬರ ಪರಿಹಾರ ಕೇಳುವುದು ಭಿಕ್ಷೆಯಲ್ಲ, ಸಾಂವಿಧಾನಿಕ ಹಕ್ಕು; ಕೇಂದ್ರ ಯಜಮಾನನಲ್ಲ, ರಾಜ್ಯ ಜೀತದಾಳುಗಳಲ್ಲ: ಡಾ.ಜಿ.ಪರಮೇಶ್ವರ
ಬೆಂಗಳೂರು ಬಿಎಂಟಿಸಿ ಕನಿಷ್ಠ ದರ ಬರೋಬ್ಬರಿ ಶೇ. 67 ರಷ್ಟು ಏರಿಕೆ: ನಮ್ಮ ಮೆಟ್ರೋ ದರಕ್ಕೆ ಸಮನಾಯ್ತು ಸಿಟಿ ಬಸ್‌ ಟಿಕೆಟ್!