
ಬೆಂಗಳೂರು (ನ.4): ಬರ ಪರಿಹಾರ ಕೋರಿ ನಾನು ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೀಡಿರುವ ಪ್ರತಿಕ್ರಿಯೆ ಹಾಗೂ ಬಳಸಿರುವ ಪದಗಳು ಅಸಹ್ಯ ಹುಟ್ಟಿಸುವಂತಿವೆ. ಅವರ ಈ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಭಾರತವು ರಾಜ್ಯಗಳ ಒಕ್ಕೂಟ. ಇಲ್ಲಿ ಕೇಂದ್ರ ಸರ್ಕಾರ ಯಜಮಾನನೂ ಅಲ್ಲ, ರಾಜ್ಯಗಳು ಕೇಂದ್ರದ ಮುಂದೆ ಕೈಚಾಚಿ ನಿಲ್ಲುವ ಜೀತದಾಳುಗಳೂ ಅಲ್ಲ. ಜನರಿಂದ ಚುನಾಯಿತವಾದ ನಮ್ಮ ರಾಜ್ಯ ಸರ್ಕಾರವು ತನ್ನ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕೇಂದ್ರದಿಂದ ಬರ ಪರಿಹಾರ ಕೇಳುವುದು ನಮ್ಮ ನ್ಯಾಯಸಮ್ಮತ ಹಕ್ಕು. ಅದನ್ನು ಭಿಕ್ಷೆಗೆ ಹೋಲಿಸಿರುವುದು ಆರ್. ಅಶೋಕ್ ಅವರಿಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಎಳ್ಳಷ್ಟೂ ಸಾಮಾನ್ಯ ಜ್ಞಾನವಿಲ್ಲ ಎಂಬುದನ್ನು ತೋರಿಸುತ್ತದೆ. ಇಂತಹ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂರಿಸಿರುವುದು ಬಿಜೆಪಿಯ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.
ಕರ್ನಾಟಕದ ರೈತರು ಭಿಕ್ಷುಕರಲ್ಲ, ದೇಶಕ್ಕೆ ಅನ್ನ ನೀಡುವ ಅನ್ನದಾತರು. ದೇಶದ ಸಮೃದ್ಧಿಗೆ ಕರ್ನಾಟಕ ಕೊಡುಗೆ ನೀಡಿದಾಗ ಅದನ್ನು ಹೆಮ್ಮೆಯಿಂದ ಸ್ವೀಕರಿಸುವ ಕೇಂದ್ರ ಸರ್ಕಾರ, ವಿಪತ್ತಿನ ಸಂದರ್ಭದಲ್ಲಿ ನಮ್ಮ ರೈತರು ನೆರವು ಕೇಳಿದರೆ ಅದನ್ನು ಭಿಕ್ಷೆ ಎಂದು ಬಿಂಬಿಸುವುದು ಯಾವ ರೀತಿಯ ಸಹಕಾರಿ ಒಕ್ಕೂಟ ವ್ಯವಸ್ಥೆ?
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಕೊರತೆಯಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಗ್ರಾಮೀಣ ಜನರು ಕೂಲಿ ಕೆಲಸ ಅರಸಿ ಗುಳೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಕೊರತೆಯೂ ತೀವ್ರವಾಗಿದೆ. ರೈತರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳಿಗೆ ಮುಂದಾಗದಂತೆ ತಡೆಯಲು, ಜಾನುವಾರುಗಳ ಜೀವಹಾನಿ ತಪ್ಪಿಸಲು ನಮ್ಮ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ವಿರೋಧ ಪಕ್ಷದ ನಾಯಕರು ಜನರ ಸಂಕಷ್ಟಕ್ಕೂ ತಮಗೂ ಸಂಬಂಧವಿಲ್ಲವೆಂಬಂತೆ ಹೀನ ರಾಜಕೀಯ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಜವಾಬ್ದಾರಿಯ ಕೊರತೆಯನ್ನು ತೋರಿಸುತ್ತದೆ.
ರಾಜ್ಯದ ಜನರು ಬಿಜೆಪಿಯವರನ್ನೂ ಶಾಸಕರಾಗಿ, ಸಂಸದರಾಗಿ ಆಯ್ಕೆ ಮಾಡಿದ್ದಾರೆ. ತಮ್ಮನ್ನು ಆಯ್ಕೆ ಮಾಡಿದ ಜನರು ಬರದಿಂದ ತತ್ತರಿಸಿರುವಾಗ ಅವರ ನೆರವಿಗೆ ನಿಲ್ಲಬೇಕಾದ ಹೊಣೆಗಾರಿಕೆ ಬಿಜೆಪಿ ಜನಪ್ರತಿನಿಧಿಗಳಿಗೆ ಇಲ್ಲವೇ? ಕೇಂದ್ರ ಸರ್ಕಾರವನ್ನು ಪರಿಹಾರಕ್ಕಾಗಿ ಒತ್ತಾಯಿಸಿದರೆ ಇವರಿಗೆ ಕೋಪವೇಕೆ? ನಾವು ಕೇಳುತ್ತಿರುವುದು ಬಿಜೆಪಿ ಪಕ್ಷದ ನಿಧಿಯನ್ನಲ್ಲ. ಕರ್ನಾಟಕದ ಜನರು ಬೆವರು ಸುರಿಸಿ ಪಾವತಿಸಿರುವ ತೆರಿಗೆ ಹಣದಲ್ಲಿ ನ್ಯಾಯಯುತವಾಗಿ ದೊರೆಯಬೇಕಾದ ಪರಿಹಾರವನ್ನು. ಬರ ಪರಿಹಾರ ರಾಜ್ಯದ ಜನರ ಹಕ್ಕು. ಅದನ್ನು ನಿರಾಕರಿಸಲು ಆರ್. ಅಶೋಕ್ ಯಾರು?
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿ (SDRF) ವಿಪತ್ತು ನಿರ್ವಹಣಾ ಕಾಯ್ದೆ–2005 ಮತ್ತು ಹಣಕಾಸು ಆಯೋಗಗಳ ಶಿಫಾರಸುಗಳ ಆಧಾರದ ಮೇಲೆ ಸ್ಥಾಪಿಸಲಾದ ವ್ಯವಸ್ಥೆಗಳಾಗಿವೆ. ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ರಾಜ್ಯಗಳಿಗೆ ನೆರವು ಒದಗಿಸುವುದೇ ಇವುಗಳ ಉದ್ದೇಶ. ಈ ವ್ಯವಸ್ಥೆಗಳಡಿ ನೆರವು ಕೇಳುವುದೇ ಭಿಕ್ಷೆಯಾದರೆ, ಸಂಸತ್ತು ಇವುಗಳನ್ನು ಏಕೆ ಸ್ಥಾಪಿಸಿತು ಎಂಬುದನ್ನು ಆರ್. ಅಶೋಕ್ ವಿವರಿಸಬೇಕು ಎಂದು ಬರೆದಿದ್ದಾರೆ.
16ನೇ ಹಣಕಾಸು ಆಯೋಗವು 2026–31ರ ಅವಧಿಗೆ ರಾಜ್ಯಗಳ ವಿಪತ್ತು ನಿರ್ವಹಣೆ ಮತ್ತು ವಿಪತ್ತು ಪರಿಣಾಮ ತಗ್ಗಿಸುವ ನಿಧಿಗಳಿಗೆ ₹2,04,401 ಕೋಟಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗಳಿಗೆ ₹79,406 ಕೋಟಿ ಶಿಫಾರಸು ಮಾಡಿದೆ. ಕರ್ನಾಟಕದಂತಹ ರಾಜ್ಯಗಳ SDRFಗೆ ಕೇಂದ್ರ ಸರ್ಕಾರ ಶೇ.75ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.25ರಷ್ಟು ಅನುದಾನ ಒದಗಿಸುತ್ತವೆ. ಇದು ಕೇಂದ್ರದ ದಾನವಲ್ಲ, ವಿಪತ್ತು ನಿರ್ವಹಣೆಗಾಗಿ ರೂಪಿಸಿರುವ ಸಾಂಸ್ಥಿಕ ವ್ಯವಸ್ಥೆ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.
ವಿವಿಧ ತೆರಿಗೆಗಳು, ಸೆಸ್‌ಗಳು ಮತ್ತು ಹೆಚ್ಚುವರಿ ತೆರಿಗೆಗಳ ಮೂಲಕ ಕರ್ನಾಟಕವು ವಾರ್ಷಿಕವಾಗಿ ಸುಮಾರು ₹5 ಲಕ್ಷ ಕೋಟಿ ಕೇಂದ್ರಕ್ಕೆ ನೀಡುತ್ತಿದೆ. ಆದರೆ ಪ್ರತಿ ರೂಪಾಯಿ ಕೊಡುಗೆಗೆ ಪ್ರತಿಯಾಗಿ ತೆರಿಗೆ ಹಂಚಿಕೆ ಮತ್ತು ಅನುದಾನಗಳ ರೂಪದಲ್ಲಿ ಕೇವಲ 13 ಪೈಸೆ ಮಾತ್ರ ಮರಳಿ ಬರುತ್ತಿದೆ ಎಂಬುದು ನಮ್ಮ ವಾದ. 14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕದ ಪಾಲು ಶೇ.4.713ರಷ್ಟಿದ್ದು, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.3.647ಕ್ಕೆ ಕುಸಿದಿತ್ತು. 16ನೇ ಹಣಕಾಸು ಆಯೋಗವು ಶೇ.4.131ಕ್ಕೆ ಹೆಚ್ಚಿಸಿದ್ದರೂ ಹಿಂದಿನ ಮಟ್ಟ ತಲುಪಿಲ್ಲ. ಕೇಂದ್ರದ ನಿರಂತರ ಹಣಕಾಸು ಅನ್ಯಾಯಗಳಿಂದ ಕರ್ನಾಟಕಕ್ಕೆ ₹2.5 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ ಎಂಬುದು ನಮ್ಮ ಆರೋಪವಾಗಿದೆ.
ಹಿಂದುಳಿದ ರಾಜ್ಯಗಳಿಗೆ ನೆರವು ನೀಡುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ ರಾಷ್ಟ್ರೀಯ ಐಕ್ಯತೆ ಏಕಮುಖವಾಗಿರಲು ಸಾಧ್ಯವಿಲ್ಲ. ಕರ್ನಾಟಕದ ತೆರಿಗೆ ಹಣ ದೇಶದ ಅಭಿವೃದ್ಧಿಗೆ ಬೇಕಾದರೆ, ಸಂಕಷ್ಟದಲ್ಲಿರುವ ಕರ್ನಾಟಕದ ರೈತರ ರಕ್ಷಣೆಯೂ ದೇಶದ ಜವಾಬ್ದಾರಿಯಾಗಬೇಕು.
ಕೇಂದ್ರದ ನೆರವಿಗೆ ಕಾಯದೆ ನಮ್ಮ ರಾಜ್ಯ ಸರ್ಕಾರ ಮೊದಲ ಕಂತಿನ ಮಧ್ಯಂತರ ಪರಿಹಾರವಾಗಿ ₹1,250 ಕೋಟಿ ಘೋಷಿಸಿದ್ದು, ಪ್ರತಿ ಅರ್ಹ ರೈತರಿಗೆ ₹2,500 ನೆರವು ಒದಗಿಸಲು ಕ್ರಮ ಕೈಗೊಂಡಿದ್ದೇವೆ. ಕುಡಿಯುವ ನೀರಿಗಾಗಿ ₹306 ಕೋಟಿ ವೆಚ್ಚ ಮಾಡಿದ್ದೇವೆ. ತುರ್ತು ಕ್ರಮಗಳಿಗೆ ಜಿಲ್ಲಾಧಿಕಾರಿಗಳ ಬಳಿ ₹329 ಕೋಟಿ ಹಾಗೂ ಮೇವು ನಿರ್ವಹಣೆಗೆ ₹25 ಕೋಟಿ ಒದಗಿಸಿದ್ದೇವೆ. ₹2,500 ನೀಡಿರುವುದರಿಂದಲೇ ರೈತನ ಸಂಪೂರ್ಣ ಬೆಳೆನಷ್ಟ ಭರಿಸಲಾಗುವುದಿಲ್ಲ ಎಂಬುದು ನಮಗೂ ಗೊತ್ತಿದೆ. ಅದಕ್ಕಾಗಿಯೇ ಕೇಂದ್ರದಿಂದ ಪೂರ್ಣ ಪ್ರಮಾಣದ ನೆರವು ಕೇಳುತ್ತಿದ್ದೇವೆ.
ರಾಜ್ಯದ 226 ಬರಪೀಡಿತ ತಾಲ್ಲೂಕುಗಳಲ್ಲಿ 57.93 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಳಗಾಗಿದ್ದು, ಅಂದಾಜು ₹62,481.88 ಕೋಟಿ ಆರ್ಥಿಕ ನಷ್ಟ ಸಂಭವಿಸಿದೆ. ಅಕ್ಟೋಬರ್ 26ರ ಪರಿಷ್ಕೃತ SDRF/NDRF ಮಾನದಂಡಗಳ ಪ್ರಕಾರ ಇನ್‌ಪುಟ್ ಸಬ್ಸಿಡಿ ಅಗತ್ಯ ₹7,943.55 ಕೋಟಿಗೆ ಏರಿದ್ದು, ಒಟ್ಟು ಸಂಚಿತ ಪರಿಹಾರದ ಅಗತ್ಯವು ₹22,400.58 ಕೋಟಿಯಾಗಿದೆ.
ಅಕ್ಟೋಬರ್ 7ರಂದು ಆರ್. ಅಶೋಕ್ ಅವರೇ ಕೇಂದ್ರ ಬರ ಅಧ್ಯಯನ ತಂಡವನ್ನು ಭೇಟಿ ಮಾಡಿ ಹೆಚ್ಚಿನ ಪರಿಹಾರ ಶಿಫಾರಸು ಮಾಡುವಂತೆ ಮನವಿ ಮಾಡಿದ್ದರು. ಆರ್. ಅಶೋಕ್ ಪರಿಹಾರ ಕೇಳಿದರೆ ಅದು ರೈತರ ಪರವಾದ ಹೋರಾಟ. ಚುನಾಯಿತವಾದ ನಮ್ಮ ರಾಜ್ಯ ಸರ್ಕಾರ ಅದೇ ಬೇಡಿಕೆಯನ್ನು ಮುಂದಿಟ್ಟರೆ ಅದು ಭಿಕ್ಷೆಯಾಗುತ್ತದೆಯೇ? ಬದಲಾಗಿರುವುದು ರೈತರ ಸಂಕಷ್ಟವಲ್ಲ, ಬಿಜೆಪಿಯ ರಾಜಕೀಯ ನಿಲುವು ಮಾತ್ರ.
2023–24ರ ಬರಗಾಲದಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುದ್ದು ಭೇಟಿಯಾಗಿ ಪರಿಹಾರ ಕೋರಿದ್ದರು. ಕೇಂದ್ರ ಗೃಹ ಹಾಗೂ ಕೃಷಿ ಸಚಿವರಿಗೂ ನಾವು ಹಲವು ಬಾರಿ ಪತ್ರ ಬರೆದಿದ್ದೆವು. ಆದರೂ ಸಕಾಲದಲ್ಲಿ ನೆರವು ದೊರೆಯದೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಸುಮಾರು ₹18,174 ಕೋಟಿ ಕೋರಿದ್ದ ನಮ್ಮ ರಾಜ್ಯಕ್ಕೆ ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ ₹3,454.22 ಕೋಟಿ ಬಿಡುಗಡೆಯಾಯಿತು.
ಕೇಂದ್ರದಲ್ಲಿರುವುದು ರಾಜ್ಯದ ನ್ಯಾಯಯುತ ಬೇಡಿಕೆಗಳಿಗೂ ಸ್ಪಂದಿಸದ ದಪ್ಪ ಚರ್ಮದ ಸರ್ಕಾರ ಎಂಬ ಕಾರಣಕ್ಕಾಗಿಯೇ ನಾವು ಮೇಲಿಂದ ಮೇಲೆ ಪತ್ರ ಬರೆಯುತ್ತಿದ್ದೇವೆ. ಇದು ನಾವು ಅನುಭವದಿಂದ ಕಲಿತ ಪಾಠ. ರೈತರ ಹಿತಕ್ಕಾಗಿ ಎಷ್ಟು ಬಾರಿ ಪತ್ರ ಬರೆಯಬೇಕಾದರೂ ಬರೆಯುತ್ತೇವೆ.
ಹೆಚ್ಚುತ್ತಿರುವ ಕೃಷಿ ವೆಚ್ಚಕ್ಕೆ ಅನುಗುಣವಾಗಿ ವಿಪತ್ತು ಪರಿಹಾರ ಮಾನದಂಡಗಳನ್ನು ಪರಿಷ್ಕರಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ವೈಜ್ಞಾನಿಕ ಜಲ ನಿರ್ವಹಣೆ, ಹವಾಮಾನ ವೈಪರೀತ್ಯಗಳನ್ನು ಎದುರಿಸುವ ಕೃಷಿ ಪದ್ಧತಿ, ಪರಿಣಾಮಕಾರಿ ಬೆಳೆ ವಿಮೆ ಹಾಗೂ FRUITS ವ್ಯವಸ್ಥೆಯಂತಹ ರೈತರ ದತ್ತಾಂಶ ಆಧಾರಿತ ಪರಿಹಾರ ವಿತರಣೆಯನ್ನು ಬಲಪಡಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ಒಂದು ಮುಂಗಾರು ವೈಫಲ್ಯದಿಂದ ರೈತ ಕುಟುಂಬದ ವರ್ಷಗಳ ಪರಿಶ್ರಮ ನಾಶವಾಗಿ, ಮುಂದಿನ ಪೀಳಿಗೆಯೂ ಸಾಲದ ಸುಳಿಗೆ ಸಿಲುಕುವಂತಹ ಪರಿಸ್ಥಿತಿಯಲ್ಲಿ ವಿಕಸಿತ ಭಾರತದ ಕನಸು ನನಸಾಗದು.
ಕರ್ನಾಟಕದ ಬಿಜೆಪಿ ಸಂಸದರು ಹಾಗೂ ಶಾಸಕರು ಪಕ್ಷ ರಾಜಕಾರಣ ಮರೆತು ರೈತರ ಪರ ನಿಲ್ಲಬೇಕು ಎಂದು ನಾನು ಆಗ್ರಹಿಸುತ್ತೇನೆ. ₹2,500 ಪರಿಹಾರ ಕಡಿಮೆ ಎನಿಸಿದರೆ ಹೆಚ್ಚಿನ ನೆರವಿಗಾಗಿ ನಮ್ಮ ರಾಜ್ಯ ಸರ್ಕಾರದೊಂದಿಗೆ ಧ್ವನಿಗೂಡಿಸಬೇಕು. ನಮ್ಮ ರೈತರು ಭಿಕ್ಷುಕರಲ್ಲ. ಅವರು ದೇಶದ ಅನ್ನದಾತರು. ಕರ್ನಾಟಕ ಭಿಕ್ಷೆ ಬೇಡುತ್ತಿಲ್ಲ, ತನ್ನ ಹಕ್ಕನ್ನು ಪ್ರತಿಪಾದಿಸುತ್ತಿದೆ. ರೈತರಿಗಾಗಿ ಕೇಂದ್ರದಿಂದ ನ್ಯಾಯಯುತವಾಗಿ ದೊರೆಯಬೇಕಾದ ಪ್ರತಿಯೊಂದು ರೂಪಾಯಿಯನ್ನೂ ಪಡೆಯಲು ನಾವು ಹೋರಾಡುತ್ತೇವೆ. ಮಳೆ ಕೈಕೊಟ್ಟರೂ ನಮ್ಮ ಸರ್ಕಾರ ರೈತರ ಕೈಬಿಡುವುದಿಲ್ಲ. ಇದು ಕಾಂಗ್ರೆಸ್–ಬಿಜೆಪಿ ನಡುವಿನ ಸಂಘರ್ಷವಲ್ಲ. ಪಕ್ಷ ರಾಜಕಾರಣಕ್ಕಿಂತ ರೈತರ ಹಿತಾಸಕ್ತಿ ದೊಡ್ಡದು. ನಮ್ಮ ರಾಜ್ಯ ಸರ್ಕಾರ ರೈತರ ಹಿತವನ್ನು ಆಯ್ಕೆ ಮಾಡಿಕೊಂಡಿದೆ. ರಾಜ್ಯದ ಬಿಜೆಪಿ ನಾಯಕರು ರಾಜ್ಯದ ರೈತರ ಪರ ನಿಲ್ಲುತ್ತಾರೋ ಅಥವಾ ತಮ್ಮ ಪಕ್ಷದ ಪರ ನಿಲ್ಲುತ್ತಾರೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದಿ ಬರೆದಿದ್ದಾರೆ.