Gruhalakshmi Scheme: ಗೃಹಲಕ್ಷ್ಮಿ ಯೋಜನೆಯ ₹2,660 ಕೋಟಿ ಹಣ ಮಹಿಳಾ ನಿಗಮಕ್ಕೆ ವರ್ಗ; ತನಿಖೆಗೆ ನಿಖಿಲ್ ಕುಮಾರಸ್ವಾಮಿ ಆಗ್ರಹ

Published : Nov 05, 2026, 11:51 AM IST
Nikhil Kumaraswamy

ಸಾರಾಂಶ

ಗೃಹಲಕ್ಷ್ಮಿ ಯೋಜನೆಗೆ ಮೀಸಲಿಟ್ಟಿದ್ದ 2,660.26 ಕೋಟಿ ರೂ.ಗಳನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಖಾತೆಗೆ ವರ್ಗಾಯಿಸಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಹಣದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು, ಕೂಡಲೇ ಸ್ವತಂತ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಮೀಸಲಿರಿಸಿದ್ದ ಗೃಹಲಕ್ಷ್ಮಿ ಯೋಜನೆಯ 2,660.26 ಕೋಟಿ ರು. ಅನುದಾನವನ್ನು ರಾಜ್ಯ ಖಜಾನೆಯಿಂದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಗಂಭೀರವಾಗಿ ಆಪಾದಿಸಿದ್ದಾರೆ. ಮುಂದೆ ಈ ಹಣ ಏನಾಯಿತು ಎಂಬುದೇ ಗೊತ್ತಿಲ್ಲ. ಈ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಮಹಿಳಾ ಅಭಿವೃದ್ಧಿ ನಿಗಮಕ್ಕೆ ಗೃಹಲಕ್ಷ್ಮಿ ಹಣ ಜಮೆ: ನಿಖಿಲ್‌

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೆಡೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಆಕ್ಷೇಪಣಾ ಹೇಳಿಕೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಕಂತುಗಳ ಪಾವತಿಸಲು ಆರ್ಥಿಕ ಮುಗ್ಗಟ್ಟು ಎದುರಾಗಿದೆ ಎಂದು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಮತ್ತೊಂದೆಡೆ ಗೃಹಲಕ್ಷ್ಮಿ ಯೋಜನೆಯ 2,660.26 ಕೋಟಿ ರು. ಅನುದಾನವನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗೆ ವರ್ಗಾಯಿಸಿದೆ. ಇದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ ಎಂದು ಹಣ ವರ್ಗಾವಣೆಗೆ ಸಂಬಂಧಿಸಿದ ಸರ್ಕಾರಿ ದಾಖಲೆಗಳನ್ನು ಪ್ರದರ್ಶಿಸಿದರು.

₹2,660 ಕೋಟಿ ವರ್ಗಾವಣೆ: ಗಂಭೀರ ಆರೋಪ

ಕಳೆದ 2025ರ ಫೆಬ್ರವರಿ ಮತ್ತು ಮಾರ್ಚ್‌ಗಳ ಗೃಹಲಕ್ಷ್ಮಿ ಯೋಜನೆಯ ಕಂತುಗಳಿಗೆ ಆರ್ಥಿಕ ಮುಗ್ಗಟ್ಟಿನಿಂದ ಅನುದಾನ ಬಿಡುಗಡೆ ಮಾಡಲಾಗಿಲ್ಲ ಎಂದು ಈ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದ ಆಕ್ಷೇಪಣಾ ಹೇಳಿಕೆಯಲ್ಲಿ ತಿಳಿಸಿದೆ. ಸುಮಾರು 1.26 ಕೋಟಿ ಮಹಿಳೆಯರಿಗೆ ಎರಡು ತಿಂಗಳ ಕಂತು ಸುಮಾರು 5 ಸಾವಿರ ಕೋಟಿ ರು. ಪಾವತಿ ಬಾಕಿ ಇದೆ. ಮಹಿಳೆಯರಿಗೆ ಹಣ ನೀಡಲಾಗದ ಮಟ್ಟಕ್ಕೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆಯೇ ಎಂದು ಪ್ರಶ್ನಿಸಿದರು.

ಮುಂದೆ ಈ ಹಣ ಎಲ್ಲಿ ಹೋಯಿತು ತನಿಖೆ ಆಗಲಿ: ಒತ್ತಾಯ

2025ರ ಮಾರ್ಚ್ 31ರಂದು ಗೃಹಲಕ್ಷ್ಮಿ ಯೋಜನೆಯ 2,660.26 ಕೋಟಿ ಅನುದಾನವನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸರ್ಕಾರ ಆದೇಶಿಸಿದೆ. ಅದೇ ದಿನ ಆನೇಕಲ್ ತಾಲೂಕು ಪಂಚಾಯಿತಿ ಮೂಲಕ ಹೆಚ್ಚುವರಿ 1,111.03 ಕೋಟಿ ರು. ವರ್ಗಾವಣೆಗೆ ಪ್ರತ್ಯೇಕ ಅನುಮೋದನೆ ನೀಡಲಾಗಿದೆ ಎಂದು ನಿಖಿಲ್‌ ಮಾಹಿತಿ ನೀಡಿದರು.

ಒಂದೆಡೆ ಮಹಿಳೆಯರಿಗೆ ಹಣ ನೀಡಲು ಆರ್ಥಿಕ ಮುಗ್ಗಟ್ಟು ಎನ್ನುತ್ತಾರೆ. ಮತ್ತೊಂದೆಡೆ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಖಜಾನೆಯಿಂದ ನಿಗಮದ ಖಾತೆಗೆ ವರ್ಗಾಯಿಸುತ್ತಾರೆ. ಈ ಹಣ ಎಲ್ಲಿದೆ? ಎಷ್ಟು ಹಣ ಫಲಾನುಭವಿಗಳಿಗೆ ತಲುಪಿದೆ? ಉಳಿದ ಹಣದ ಲೆಕ್ಕವೇನು? ಈ ಹಣವನ್ನು ಹಿರಿಯೂರು ಉಪಚುನಾವಣೆಗೆ ಬಳಸುತ್ತಾರೋ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಾಕಿ ಪಾವತಿ ವಿಳಂಬಕ್ಕೆ ಅಸಲಿ ಕಾರಣವೇನು?

ಗೃಹಲಕ್ಷ್ಮಿ ಕಂತುಗಳ ಪಾವತಿ ವಿಳಂಬಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನೀಡಿದ್ದ ಮಾಹಿತಿಯಲ್ಲಿನ ತಪ್ಪನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಂತರ ಒಪ್ಪಿಕೊಂಡಿದ್ದರು. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿದ ಆಕ್ಷೇಪಣಾ ಹೇಳಿಕೆಯಲ್ಲಿ ಸರ್ಕಾರ ಆರ್ಥಿಕ ಮುಗ್ಗಟ್ಟನ್ನು ಕಾರಣವಾಗಿ ಉಲ್ಲೇಖಿಸಿದೆ. ಹಾಗಾದರೆ ಪಾವತಿ ವಿಳಂಬಕ್ಕೆ ನಿಜವಾದ ಕಾರಣವೇನು? ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸರ್ಕಾರ ಏನನ್ನು ಮರೆಮಾಚುತ್ತಿದೆ ಎಂದು ಕೇಳಿದರು.

ಗೃಹಲಕ್ಷ್ಮಿ ಅನುದಾನ ವರ್ಗಾವಣೆಯ ಸಂಪೂರ್ಣ ಲೆಕ್ಕವನ್ನು ಬಹಿರಂಗಪಡಿಸಿ, ಸ್ವತಂತ್ರ ತನಿಖೆ ನಡೆಸಬೇಕು. ಅರ್ಹ ಮಹಿಳೆಯರಿಗೆ ಬಾಕಿ ಇರುವ ಕಂತುಗಳನ್ನು ತಕ್ಷಣ ಪಾವತಿಸಬೇಕು. ಮಹಿಳೆಯರಿಗೆ ನ್ಯಾಯ ಸಿಗುವವರೆಗೂ ಜೆಡಿಎಸ್ ಹೋರಾಟ ಮುಂದುವರಿಸಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದರು.

PREV
Read more Articles on
click me!

Recommended Stories

ನಮ್ಮ ಮೆಟ್ರೋ ನೀಲಿ ಮಾರ್ಗದ ನಿಲ್ದಾಣಕ್ಕೆ ಹೊಸ ಹೆಸರು; 'ಇನ್‌ಮೊಬಿ ಇಬ್ಬಲೂರು ಮೆಟ್ರೋ ನಿಲ್ದಾಣ' ₹65 ಕೋಟಿ ಒಪ್ಪಂದ!
ಕೊಪ್ಪಳದಲ್ಲಿ SECI ಸಂಸ್ಥೆಗಾಗಿ 300 ಮೆಗಾವ್ಯಾಟ್‌ ಸೋಲಾರ್‌ ಪ್ರಾಜೆಕ್ಟ್‌ ಪೂರ್ಣಗೊಳಿಸಿದ ಟಾಟಾ ಪವರ್‌, ಗದಗದಲ್ಲಿ ಸಬ್‌ಸ್ಟೇಷನ್‌