ನಿರಂತರ ಮಳೆಗೆ ಗುಂಡಿ ಬಿದ್ದ ಬೆಂಗಳೂರಿನ ರಸ್ತೆಗಳು: ವಾಹನ ಸವಾರರ ಪರದಾಟ

By Kannadaprabha News  |  First Published May 13, 2024, 9:27 AM IST

ಕಳೆದ ಮೂರ್ನಾಲ್ಕು ದಿನ ಮಳೆ ಸುರಿಯುತ್ತಿದ್ದಂತೆ ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಾಯ್ದೆರೆದಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. 


ಬೆಂಗಳೂರು (ಮೇ.13): ಕಳೆದ ಮೂರ್ನಾಲ್ಕು ದಿನ ಮಳೆ ಸುರಿಯುತ್ತಿದ್ದಂತೆ ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಾಯ್ದೆರೆದಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಮಳೆಯಾಗುತ್ತಿದಂತೆ ವಿಧಾನಸೌಧದ ಮುಂಭಾಗದಲ್ಲಿರುವ ಕಬ್ಬನ್‌ ಪಾರ್ಕ್, ಕುಮಾರ ಕೃಪ ಈಸ್ಟ್, ಸ್ವಸ್ತಿಕ್‌ ಜಂಕ್ಷನ್‌, ಸಂಪಿಗೆ ರಸ್ತೆ ಸಿಗ್ನಲ್‌, ರಿಂಗ್‌ ರಸ್ತೆ, ಸುಮ್ಮನಹಳ್ಳಿ ಮೇಲ್ಸೇತುವೆ, ನಾಗರಭಾವಿ, ವಿಲ್ಸನ್ ಗಾರ್ಡನ್, ಮೈಸೂರು ರಸ್ತೆ, ಕನಕಪುರ ರಸ್ತೆ, ಲಗ್ಗೆರೆ, ಪೀಣ್ಯ ಕೈಗಾರಿಕಾ ಪ್ರದೇಶ, ಶಿವಾನಂದ ವೃತ್ತ, ಮಲ್ಲೇಶ್ವರ ರೈಲ್ವೆ ಪ್ಯಾರಲಲ್‌ ರಸ್ತೆ, ಯಶವಂತಪುರ, ಕಾರ್ಡ್‌ ರಸ್ತೆ ಸೇರಿದಂತೆ ನಗರದ ಪ್ರಮುಖ ಬಡಾವಣೆಯ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಮುಖ್ಯ ರಸ್ತೆಗಳ ಅಕ್ಕ-ಪಕ್ಕದ ಸರ್ವೀಸ್‌ ರಸ್ತೆಗಳ ಸ್ಥಿತಿ ಅತ್ಯಂತ ಗಂಭೀರವಾಗಿವೆ. ಇನ್ನು ನಗರದ ಹಲವು ವಾರ್ಡ್‌ ರಸ್ತೆಗಳಲ್ಲಿ ಗುಂಡಿಗಳ ಸಂಖ್ಯೆ ಎಣಿಸುವುದಕ್ಕೆ ಸಾಧ್ಯವಾಗದಷ್ಟು ನಿರ್ಮಾಣಗೊಂಡಿವೆ.

ಕಳೆದ ವರ್ಷ ಹೆಚ್ಚಿನ ಪ್ರಮಾಣದ ಮಳೆಯಾಗದ ಹಿನ್ನೆಲೆಯಲ್ಲಿ ನಗರದ ರಸ್ತೆಗಳು ಅಷ್ಟೊಂದು ಗುಂಡಿ ಕಾಣಿಸಲಿಲ್ಲ. ಹೀಗಾಗಿ, ರಸ್ತೆಗಳಿಗೆ ಡಾಂಬರೀಕರಣ ಸಹ ಮಾಡಲಿಲ್ಲ. 2023-24ನೇ ಸಾಲಿನ ಬಿಬಿಎಂಪಿಯ ಬಜೆಟ್‌ನಲ್ಲಿ ಘೋಷಿಸಿದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಅನುಮೋದನೆ ದೊರೆತ್ತಿದೆ, ಈಗ ಕೆಲವು ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುತ್ತಿದೆ. ವೈಟ್ ಟಾಪಿಂಗ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ ರಸ್ತೆಗಳಲ್ಲಿ ಗುಂಡಿಯ ಸಮಸ್ಯೆ ಇಲ್ಲ. ಆದರೆ, ಡಾಂಬರೀಕರಣ ಮಾಡಿದ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯ ಗುಂಡಿಗಳು ಕಂಡು ಬರುತ್ತಿವೆ.

Tap to resize

Latest Videos

ಗುಂಡಿ ಮುಕ್ತವಾಗದ ನಗರ: ಬಿಬಿಎಂಪಿ ಅಧಿಕಾರಿಗಳು ಮಳೆ ಬಂದಾಗ ಮತ್ತು ರಸ್ತೆ ಗುಂಡಿಯಿಂದ ಅಪಘಾತ ಉಂಟಾದಾಗ ಮಾತ್ರ, ರಸ್ತೆ ಗುಂಡಿ ಮುಚ್ಚುತ್ತೇವೆ. ಸರಿಪಡಿಸಿ ಗುಂಡಿ ಮುಕ್ತ ಮಾಡುತ್ತೇವೆ ಎನ್ನುತ್ತಾರೆ. ಮಳೆ ಕಡಿಮೆ ಆಗುತ್ತಿದಂತೆ ರಸ್ತೆ ಗುಂಡಿ ಮುಚ್ಚುವುದನ್ನು ಮರೆತು ಬಿಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳಪೆ ಕಾಮಗಾರಿಯಿಂದ ಮಳೆ ಬಂದಾಗ ರಸ್ತೆ ಗುಂಡಿಗಳು ಕಾಣಿಸಿಕೊಳ್ಳುತ್ತವೆ. ಕಳಪೆ ಕಾಮಗಾರಿ ಆಗದಂತೆ ಬಿಬಿಎಂಪಿ ಅಧಿಕಾರಿಗಳು ನಿಗಾ ವಹಿಸುವುದಿಲ್ಲ. ಪ್ರತಿ ವರ್ಷ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಕೋಟ್ಯಂತರ ರುಪಾಯಿ ವೆಚ್ಚ ಮಾಡಲಾಗುತ್ತದೆ. ಮುಚ್ಚಿದ ರಸ್ತೆ ಗುಂಡಿಗಳು ಕೆಲವೇ ದಿನಗಳಲ್ಲಿ ಬಾಯ್ದರೆದುಕೊಳ್ಳುತ್ತವೆ ಎಂದು ವಾಹನ ಸವಾರರು ದೂರಿದ್ದಾರೆ.

ಮೆಟ್ರೋ ನಿಲ್ದಾಣದಲ್ಲಿ ಟೈಂ ಪಾಸ್ ಮಾಡೋ ಮುನ್ನ ಎಚ್ಚರ: ಈ ನಿಯಮ ಪಾಲಿಸದಿದ್ರೆ ದಂಡ ಫಿಕ್ಸ್‌!

ಮಳೆ ಮುಂದುವರೆ ಮತ್ತಷ್ಟು ಗುಂಡಿ: ನಗರದಲ್ಲಿ ಇನ್ನೊಂದು ವಾರ ಇದೇ ರೀತಿ ಮಳೆ ಮುಂದುವರೆಗೆ ಇನ್ನಷ್ಟು ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಬಿಬಿಎಂಪಿಯ ಅಧಿಕಾರಿಗಳು ಮಳೆಗಾಲದಲ್ಲಿ ರಸ್ತೆ ಗುಂಡಿ ಮುಚ್ಚುವುದಕ್ಕೆ ಇನ್ನೂ ಯಾವುದೇ ತಯಾರಿ ಮಾಡಿಕೊಂಡಂತೆ ಕಂಡು ಬಂದಿಲ್ಲ.

click me!