ಬೆಂಗಳೂರಿನ ಕೇಂದ್ರ ಭಾಗದಲ್ಲಿ ಭಾರೀ ಮಳೆಯಾಗಿದೆ. ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ನಗರದ ವಿವಿಧ ಭಾಗದಲ್ಲಿ ಸಂಚಾರ ದಟ್ಟಣೆಯಾಯಿತು. ನಾಗವಾರ ಜಂಕ್ಷನ್‌ನಲ್ಲಿ ಭಾರೀ ಪ್ರಮಾಣ ನೀರು ನಿಂತುಕೊಂಡ ಪರಿಣಾಮ ಟ್ಯಾನರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಬೆಂಗಳೂರು(ಆ.01): ನಗರದಲ್ಲಿ ಬುಧವಾರ ಸಂಜೆಯಿಂದ ಬಹಳ ಹೊತ್ತು ಧಾರಾಕಾರವಾಗಿ ಸುರಿದ ಮಳೆಯಿಂದ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ಹರಿದ ಪರಿಣಾಮ ವಿವಿಧ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಪರದಾಡಿದರು.
ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಇತ್ತು. ಆದರೆ, ಸಂಜೆಯಾಗುತ್ತಿದಂತೆ ನಗರಾದ್ಯಂತ ಧಾರಾಕಾರವಾಗಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿಯಿತು. ಅದರಲ್ಲೂ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಭಾರೀ ಮಳೆಯಾಗಿದೆ. ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ಹರಿದ ಪರಿ ಣಾಮ ನಗರದ ವಿವಿಧ ಭಾಗದಲ್ಲಿ ಸಂಚಾರ ದಟ್ಟಣೆಯಾಯಿತು. ನಾಗವಾರ ಜಂಕ್ಷನ್‌ನಲ್ಲಿ ಭಾರೀ ಪ್ರಮಾಣ ನೀರು ನಿಂತುಕೊಂಡ ಪರಿಣಾಮ ಟ್ಯಾನರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಕರ್ನಾಟಕದಲ್ಲಿ 3 ದಿನ ಬಿರುಗಾಳಿ ಸಹಿತ ಮಳೆ ಅಲರ್ಟ್, ಕೆಲ ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ!
ಕಸ್ತೂರಿನಗರ ರಿಂಗ್ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ನಿಂತು ಹೆಬ್ಬಾಳ ಕಡೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಅದೇ ರೀತಿ, ಸ್ಟೀನ್ಸ್ ಜಂಕ್ಷನ್, ವೀರಣ್ಣಪಾಳ್ಯ, ಜಯಮಹಲ್ ರಸ್ತೆ, ಕಸ್ತೂರಿನಗರ ಡೌನ್ ರ್ಯಾಂಪ್, ಸಂಜಯನಗರ ಕ್ರಾಸ್, ಹೆಬ್ಬಾಳ ಪೊಲೀಸ್ ಠಾಣೆ ಮುಂಭಾಗ ಸೇರಿದಂತೆ ನಗರದ ವಿವಿಧ ರಸ್ತೆ ಮತ್ತು ಜಂಕ್ಷನ್‌ನಲ್ಲಿ ಭಾರೀ ಪ್ರಮಾಣ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಆಟೋ, ಕಾರು ಜಖಂ
ಮಳೆಯಿಂದ ಅಲಿ ಆಸ್ಕರ್ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ಬಿದ್ದು ಆಟೋ ಹಾಗೂ ಎರಡು ಕಾರು ಜಖಂಗೊಂಡಿವೆ. ಕೂದಲೆಳೆ ಅಂತರದಲ್ಲಿ ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿ.ವಿ.ರಾಮನ್‌ನಗರ, ಪುಲಕೇಶಿನಗರ, ಕೆ.ಆರ್. ಪುರದಲ್ಲಿ ತಲಾ ಎರಡು ಮರ ಧರೆಗುರುಳಿವೆ. ಮಹದೇವಪುರ, ಶಾಂತಿನಗರ, ಬ್ಯಾಟರಾಯನಪುರ, ಹೆಬ್ಬಾಳ ಹಾಗೂ ದಾಸರಹಳ್ಳಿಯಲ್ಲಿ ತಲಾ ಒಂದು ಮರ ಸಂಪೂರ್ಣವಾಗಿ ಧರೆಗುರುಳಿವೆ. ಉಳಿದಂತೆ ವಿವಿಧ ಕಡೆ 40ಕ್ಕೂ ಅಧಿಕ ಕಡೆ ಮರ ಕೊಂಬೆ ಧರೆಗುರುಳಿದೆ.
ಕೊಡಿಗೇಹಳ್ಳಿಯಲ್ಲಿ 4.4 ಸೆಂ.ಮೀ. ಮಳೆ
ನಗರದಲ್ಲಿ ಬುಧವಾರ ಸರಾಸರಿ 1.8 ಸೆಂ.ಮೀ. ಮಳೆಯಾಗಿದ್ದು, ಅತಿ ಹೆಚ್ಚು 4.4 ಸಂ. ಮೀ ಕೊಡಿಗೇಹಳ್ಳಿಯಲ್ಲಿ ಸುರಿದಿದೆ. ಉಳಿದಂತೆ ಬಸವೇಶ್ವರ ನಗರದಲ್ಲಿ 3.9. ಯಲಹಂಕ 3.6, ಚೌಡೇಶ್ವರಿ 3.5. ನಂದಿನಿ ಲೇಔಟ್ ಹಾಗೂ ವಿ. ನಾಗೇನಹಳ್ಳಿಯಲ್ಲಿ ತಲಾ 3.2, ದೊಡ್ಡಾನೆಕುಂದಿ 3.1, ಕೋನೇನ ಆಗ್ರಹಾರ 3, ವನ್ನಾರ್ ಪೇಟೆ, ಪಶ್ಚಿಮ ಬಾಣಸವಾಡಿಯಲ್ಲಿ ತಲಾ 2.9 ಸೆಂ.ಮೀ ಮಳೆಯಾಗಿದೆ. ನಗರದ 56 ಪ್ರದೇಶದಲ್ಲಿ 1 ಸೆಂ.ಮೀಗೂ ಅಧಿಕ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.