ಅದು ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರ ಕಾಲದ ಪ್ರತಿಷ್ಟಿತ ಕ್ಲಬ್. ಅದರ ನಿರ್ವಹಣೆಗೆ ಚುನಾವಣೆ ಮೂಲಕ ಆಯ್ಕೆಯಾದ ಕಮಿಟಿಯ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಕ್ಲಬ್ ನಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆಂದು ಆರೋಪಿಸಿ ಸಿಟಿ ಇನ್ಸ್ ಟ್ಯೂಟ್ ಸದಸ್ಯರು ನ್ಯಾಯಕ್ಕಾಗಿ ಹೋರಾಟಕ್ಕೆ ಮುಂದಾಗಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜು.31): ಅದು ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರ ಕಾಲದ ಪ್ರತಿಷ್ಟಿತ ಕ್ಲಬ್. ಅದರ ನಿರ್ವಹಣೆಗೆ ಚುನಾವಣೆ ಮೂಲಕ ಆಯ್ಕೆಯಾದ ಕಮಿಟಿಯ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಕ್ಲಬ್ ನಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆಂದು ಆರೋಪಿಸಿ ಸಿಟಿ ಇನ್ಸ್ ಟ್ಯೂಟ್ ಸದಸ್ಯರು ನ್ಯಾಯಕ್ಕಾಗಿ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಕುರಿತು ವರದಿ ಇಲ್ಲಿದೆ. ಇದು ಚಿತ್ರದುರ್ಗ ನಗರದ ಎಲ್ಲಾ ಗಣ್ಯ ವ್ಯಕ್ತಿಗಳು ಸದಸ್ಯತ್ವ ಹೊಂದಿರುವ ಐಶಾರಾಮಿ ಟೌನ್ ಕ್ಲಬ್. ಇಲ್ಲಿ ಸದಸ್ಯತ್ವ ಪಡೆಯಲು ನಾ ಮುಂದು, ತಾ ಮುಂದು ಅಂತ ಗಣ್ಯ ವ್ಯಕ್ತಿಗಳು ಮುಗಿ ಬೀಳ್ತಾರೆ.
ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಈ ಕ್ಲಬ್ ಗೆ ಮೊದಲ ಕಾರ್ಯದರ್ಶಿ ಆಗಿದ್ದರು. ಅಂದಿನಿಂದಲೂ ಉತ್ತಮ ಲಾಭದಲ್ಲಿರುವ ಕ್ಲಬ್ ಸಮಿತಿಗೆ 2020 ರಲ್ಲಿ ಆಯ್ಕೆಯಾದ ಕಾರ್ಯದರ್ಶಿ ಚಿತ್ರಲಿಂಗಪ್ಪ, ಉಪಾಧ್ಯಕ್ಷ ಸೇತುರಾಂ ಹಾಗು ಖಜಾಂಚಿ ಅಜಿತ್ ಕುಮಾರ್ ಸೇರಿದಂತೆ 7 ಜನ ಪದಾಧಿಕಾರಿಗಳು ಕ್ಲಬ್ ನ ಸದಸ್ಯತ್ವ ನೀಡುವಾಗ ನಿಯಮ ಉಲ್ಲಂಘಿಸಿದ್ದು,177 ಜನರ ಸದಸ್ಯತ್ವ ಶುಲ್ಕ ಹಾಗು ದೈನಂದಿನ ಕಲೆಕ್ಷನ್ ಆಗಿರುವ 3 ಕೋಟಿಗೂ ಅಧಿಕ ಹಣವನ್ನು ಬ್ಯಾಂಕಿಗೆ ಜಮಾ ಮಾಡದೇ ಲಪಟಾಯಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಅಲ್ದೇ ಈ ಆರೋಪದ ಬಗ್ಗೆ ಕರ್ನಾಟಕ ಸಹಕಾರ ಸಂಘಗಳ ನೊಂದಣಿ ಕಾಯ್ದೆ 1960 ಕಾಲಂ25 ರ ಅನ್ವಯ ಜಿಲ್ಲಾ ನೊಂದಣಾಧಿಕಾರಿಗಳು ವಿಚಾರಣೆ ನಡೆಸಿದ್ದು, ಅವ್ಯವಹಾರದ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಈ ಸಂಬಂಧ ಲೋಕಾಯುಕ್ತ ಇಲಾಖೆಗೆ ಸಹ ಸದಸ್ಯರು ದೂರು ನೀಡಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದ್ದಾರೆ. ಇನ್ನು ಈ ಕ್ಲಬ್ ನ ಕಾರ್ಯಕಾರಿ ಸಮಿತಿ ಅಧಿಕಾರಾವಧಿ ಮುಕ್ತಾಯವಾಗಿದ್ರು ಸಹ ಕ್ಲಬ್ ವಹಿವಾಟಿನಲ್ಲಿ ಕಮಿಟಿಯ ಪದಾಧಿಕಾರಿಗಳು ಹಸ್ತಕ್ಷೇಪ ಮಾಡಿದ್ದು,ಮನಬಂದಂತೆ ಬೈಲಾ ತಿದ್ದುಪಡಿ ಮಾಡಿಕೊಂಡು ಸದಸ್ಯತ್ವ ನೀಡಲಾಗಿದೆ.
ಚಿಕ್ಕಮಗಳೂರಿನಲ್ಲಿ ಮಳೆ ಬಿಡುವು: ನದಿ ಪಾತ್ರದ ಜನರಲ್ಲಿ ಸದ್ಯಕ್ಕೆ ನೆರೆ ಭೀತಿ ದೂರ!
ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಐತಿಹಾಸಿಕ ಹಿನ್ನೆಲೆ ಇರುವ ಈ ಕ್ಲಬ್ ಗೆ ಯಾವುದೇ ಕಳಂಕ ಬರದ ರೀತಿ ಉನ್ನತ ಮಟ್ಟದ ಅಧಿಕಾರಿಗಳು ಇತ್ತ ಗಮನ ಹರಿಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಈ ಕ್ಲಬ್ ನ ಘನತೆ ಎತ್ತಿ ಹಿಡಿಯಬೇಕು ಎಂದು ಕ್ಲಬ್ ನಾ ಮಾಜಿ ಕಾರ್ಯದರ್ಶಿಗಳು ಒತ್ತಾಯಿಸಿದ್ದಾರೆ. ಒಟ್ಟಾರೆ ಸಿಟಿ ಕ್ಲಬ್ ಕಾರ್ಯಕಾರಿ ಸಮಿತಿ ವಿರುದ್ಧ ಅವ್ಯವಹಾರ ಆರೋಪದಿಂದಾಗಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಹೀಗಾಗಿ ಕ್ಲಬ್ ನ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.