ಮಳೆಯ ಕಾರಣದಿಂದ ರಸ್ತೆ ಕಾಮಗಾರಿ ವಿಳಂಬ: ಕೆ.ಜಿ. ಬೋಪಯ್ಯ

By Kannadaprabha NewsFirst Published Nov 19, 2022, 2:26 PM IST
Highlights
  • ಮಳೆಯ ಕಾರಣದಿಂದ ರಸ್ತೆ ಕಾಮಗಾರಿ ವಿಳಂಬ: ಕೆ.ಜಿ. ಬೋಪಯ್ಯ
  • 1 ಕೋಟಿ ರುಪಾಯಿ ವೆಚ್ಚದ ರುದ್ರಗುಪ್ಪೆ - ವಿ. ಬಾಡಗ ರಸ್ತೆ ಕಾಮಗಾರಿಗೆ ಚಾಲನೆ

ಪೊನ್ನಂಪೇಟೆ (ನ.19) : ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ವಿಳಂಬಕ್ಕೆ ಕಾರಣವಾಗಿದೆ. ಮಳೆ ಸಂಪೂರ್ಣ ನಿಂತ ಕೂಡಲೇ ದುಸ್ಥಿತಿಯಲ್ಲಿರುವ ಎಲ್ಲ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಲೋಕೋಪಯೋಗಿ ಇಲಾಖೆಯ ವತಿಯಿಂದ 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿರುವ ರುದ್ರಗುಪ್ಪೆ- ವಿ. ಬಾಡಗ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಳೆ ಬಿಡುವು ನೀಡದ ಕಾರಣ ಕಾಮಗಾರಿ ಆರಂಭಗೊಳಿಸಲು ಸಾಧ್ಯವಾಗಲಿಲ್ಲವೇ ಹೊರತು ಸರ್ಕಾರದ ಅನುದಾನದ ಕೊರತೆಯಿಂದಲ್ಲ ಎಂದು ಸ್ಪಷ್ಟಪಡಿಸಿದರು.

ಅಸ್ಸಾಂ, ಬಾಂಗ್ಲಾ ನಿವಾಸಿಗಳ ಮೇಲೆ ಕ್ರಮಕೈಗೊಳ್ಳಿ: ಹಿಂಜಾವೇ ಮನವಿ

ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ 7 ಜಿ.ಪಂ. ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯ ರಸ್ತೆಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದೀಗ ಜಿಲ್ಲೆಗೆ 250 ಕೋಟಿಗೂ ಹೆಚ್ಚಿನ ಅನುದಾನ ಬಂದಿದ್ದು, ರಸ್ತೆ ಕಾಮಗಾರಿಗಾಗಿ ಯಾವುದೇ ಅನುದಾನದ ಕೊರತೆಯಿಲ್ಲ. ಕಳೆದ ಬುಧವಾರದಂದು ಬೆಂಗಳೂರಿನಲ್ಲಿ ಮತ್ತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜಿಲ್ಲೆಯ ರಸ್ತೆ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆಗೆ ಮತ್ತಷ್ಟುಅನುದಾನ ನೀಡುವಂತೆ ಕೋರಲಾಗಿದೆ. ಶೀಘ್ರದಲ್ಲೇ ಅನುದಾನ ಬಿಡುಗಡೆಗೊಳಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಈ ಅನುದಾನ ಬಂದ ಬಳಿಕ ಮತ್ತಷ್ಟುರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬೋಪಯ್ಯ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇನ್ನೂ ಮಳೆ ಪೂರ್ಣವಾಗಿ ನಿಂತಿಲ್ಲ. ಈ ಕಾರಣದಿಂದ ನಷ್ಟದ ಭೀತಿಯಲ್ಲಿ ಯಾವುದೇ ಡಾಂಬರು ಘಟಕ ಕಾರ್ಯಾರಂಭ ಮಾಡುತ್ತಿಲ್ಲ ಎಂದು ತಿಳಿಸಿದ ಕೆ.ಜಿ. ಬೋಪಯ್ಯ ಅವರು, ಯಾವುದೇ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ರಸ್ತೆಯನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಎರಡು ಬದಿಯ ಜಾಗದ ಮಾಲಕರು ಹೆಚ್ಚಿನ ಸಹಕಾರ ನೀಡಬೇಕು. ಅಲ್ಲದೆ, ತೋಟದ ಮಾಲಕರು ರಸ್ತೆ ಬದಿಯಲ್ಲಿರುವ ಮರದ ಕೊಂಬೆಗಳನ್ನು ಕಡಿದು ಮಳೆಗಾಲದ ಸಮಸ್ಯೆಯನ್ನು ನೀಗಿಸಬೇಕು ಎಂದು ಶಾಸಕರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ರೀತಿಯಾಗಿ ಕೊಂಬೆಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಅಗತ್ಯವಿಲ್ಲ ಎಂದರು.

ವಿರಾಜಪೇಟೆ ತಾಲೂಕು ಬಿಜೆಪಿ ಕಾರ್ಯದರ್ಶಿ ಅಮ್ಮುಣಿಚಂಡ ರಂಜಿ ಪೂಣಚ್ಚ ಮಾತನಾಡಿ, ಶಾಸಕರ ಪ್ರಯತ್ನದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಬಿಟ್ಟಂಗಾಲ ಗ್ರಾ. ಪಂ. ವ್ಯಾಪ್ತಿಗೆ ಸಾಕಷ್ಟುಅನುದಾನ ಬಿಡುಗಡೆಯಾಗಿದೆ. ಈ ಪೈಕಿ ಬಿಟ್ಟಂಗಾಲ- ನಾಂಗಾಲ- ವಿ. ಬಾಡಗ ರಸ್ತೆಯನ್ನು ಗ್ರಾಮ ಸಡಕ್‌ ಯೋಜನೆಯಡಿ 7.10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ಹಾಗೆ ಬಿಟ್ಟಂಗಾಲ- ಕಂಡಂಗಾಲ- ಕೂಟಿಯಾಲ ರಸ್ತೆ ಅಭಿವೃದ್ಧಿಗೆ 2.16 ಕೋಟಿ ರು., ಕಂಡಂಗಾಲದ ಕಬ್ಬೆಮಾನಿ ಹೊಳೆಗೆ ಸೇತುವೆ ಮತ್ತು ಚೆಕ್‌ ಡ್ಯಾಮ್‌ ನಿರ್ಮಾಣಕ್ಕೆ 2.16 ಕೋಟಿ, ಕುಪ್ಪಂಡ ಐನ್‌ಮನೆ ಹೊಳೆಗೆ ಸೇತುವೆ ಮತ್ತು ಚೆಕ್‌ ಡ್ಯಾಮ್‌ ನಿರ್ಮಾಣಕ್ಕೆ 1.50 ಕೋಟಿ ರು. ಅನುದಾನ ಒದಗಿಸಿ ಸ್ಥಳೀಯ ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯೋಜನೆಯ ಗುತ್ತಿಗೆದಾರರಲ್ಲೊಬ್ಬರಾದ ಸವಿತಾ ನಾಣಯ್ಯ ಮಾತನಾಡಿ, 1 ಕೋಟಿ ಅನುದಾನದಲ್ಲಿ ಉದ್ದೇಶಿಸಲಾಗಿರುವ 2 ಕಿ.ಮೀ. ದೂರದ ರಸ್ತೆಯನ್ನು 3.75 ಮೀಟರ್‌ ಅಗಲದಲ್ಲಿ ಅಭಿವೃದ್ಧಿಪಡಿಸಲಾಗುವುದು. ಕಾಮಗಾರಿಯನ್ನು ನಿಗದಿತ ಅವಧಿಗೆ ಮುಂಚಿತವಾಗಿಯೇ ಪೂರ್ಣಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಕೊಡಗು: ಹದಗೆಟ್ಟ ರಸ್ತೆ, ಶಾಸಕರನ್ನು ತರಾಟೆಗೆ ತೆಗೆದುಕೊಂಡು ಜನರ ಆಕ್ರೋಶ

ಕಾರ್ಯಕ್ರಮದಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯ, ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅಪ್ಪಂಡೇರಂಡ ಭವ್ಯ ಚಿಟ್ಯಣ್ಣ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಿದ್ದೇಗೌಡ, ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್‌ ಅಪ್ಪಂಡೇರಂಡ ದಿನೇಶ್‌ (ದಿನು), ಸಹ ಪ್ರಮುಖ್‌ ಕುಪ್ಪಂಡ ದಿಲನ್‌ ಬೋಪಣ್ಣ, ಬಿಜೆಪಿ ಮುಖಂಡರಾದ ಕಂಜಿತಂಡ ಕೆ. ಮಂದಣ್ಣ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕೃಷಿ ಮೋರ್ಚಾದ ಅಧ್ಯಕ್ಷ ಮಚ್ಚಾರಂಡ ಪ್ರವೀಣ್‌, ವಿ. ಬಾಡಗ ಬಿಜೆಪಿ ಬೂತ್‌ ಸಮಿತಿ ಅಧ್ಯಕ್ಷರಾದ ಕುಪ್ಪಂಡ ಮೋಹನ್‌ ಮೊಣ್ಣಪ್ಪ, ಕಾರ್ಯದರ್ಶಿ ತೀತಿಮಾಡ ಬೋಪಣ್ಣ, ಯೋಜನೆಯ ಪ್ರಮುಖ ಗುತ್ತಿಗೆದಾರರಾದ ಹರೀಶ್‌ ಗೌಡ, ಶಾಸಕರ ಆಪ್ತ ಕಾರ್ಯದರ್ಶಿ, ಮಲ್ಲಂಡ ಮಧು ದೇವಯ್ಯ ಸೇರಿದಂತೆ ಸ್ಥಳೀಯ ಗ್ರಾ.ಪಂ. ಪ್ರತಿನಿಧಿಗಳು, ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು, ಗ್ರಾಮದ ಪ್ರಮುಖರು, ಪಕ್ಷದ ಕಾರ್ಯಕರ್ತರು ಹಾಜರಿದ್ದರು. ಬಿಟ್ಟಂಗಾಲ ಗ್ರಾ.ಪಂ. ಸದಸ್ಯರಾದ ಮೂಕಚಂಡ ಸುಬ್ಬಯ್ಯ ವಂದಿಸಿದರು.

click me!