
ಬೆಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ರಸ್ತೆ ಮೇಲಿನ ಅಶಾಂತಿ, ಅಸಭ್ಯ ವರ್ತನೆ ಮತ್ತು ರೋಡ್ ರೇಜ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸಂಚಾರ ಶಿಸ್ತು ಉಲ್ಲಂಘನೆ, ಅಹಂಕಾರ ಪ್ರದರ್ಶನ ಹಾಗೂ ಸಣ್ಣ ಕಾರಣಗಳಿಗೂ ಜಗಳಕ್ಕೆ ಇಳಿಯುವ ಪ್ರವೃತ್ತಿ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಸಾಕ್ಷಿಯಾಗಿ ನಗರದಲ್ಲಿ ನಡೆದ ಎರಡು ವಿಭಿನ್ನ ಘಟನೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.
ಮೊದಲ ಘಟನೆ ಬೆಂಗಳೂರು ನಗರದ ಹೊಸಕೆರೆಹಳ್ಳಿ ಫ್ಲೈಓವರ್ ಬಳಿ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ನಡೆದಿದೆ. ಚಲಿಸುತ್ತಿದ್ದ ಬೈಕ್ ಮೇಲೆ ಅತಿಯಾದ ಅಜಾಗರೂಕತೆ ತೋರಿದ ಬೈಕ್ ಸವಾರ, ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ವರ್ತಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೈಕ್ ಸವಾರನು ಚಲಿಸುವ ವಾಹನದಲ್ಲೇ ನಿಂತು ಡ್ಯಾನ್ಸ್ ಮಾಡುವಂತೆ ವರ್ತಿಸಿ, ಹಿಂಬದಿಯಿಂದ ಬರುತ್ತಿದ್ದ ಕಾರಿಗೆ ಸೈಡ್ ನೀಡದೇ ಮೊಂಡಾಟ ತೋರಿಸಿದ್ದಾನೆ. ಇದಲ್ಲದೆ, ಕಾರು ಚಾಲಕನತ್ತ ಅಸಭ್ಯ ಸನ್ನೆ ಮಾಡಿ ಉದ್ದೇಶಪೂರ್ವಕವಾಗಿ ಕಿರಿಕ್ ಮಾಡಿರುವ ದೃಶ್ಯಗಳು ಕಂಡುಬಂದಿವೆ. ಇಂತಹ ಅಜಾಗರೂಕ ಹಾಗೂ ಅಪಾಯಕಾರಿ ವರ್ತನೆ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದಾಗಿತ್ತು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೊಂದು ಪ್ರಕರಣ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಸಮೀಪ, ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿ ನಡೆದ ಘಟನೆ ಸಂಪೂರ್ಣವಾಗಿ ವಿಭಿನ್ನ ಸಂದೇಶ ನೀಡುತ್ತಿದೆ.
ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಕೆಲಸ ಮುಗಿಸಿ ತಮ್ಮ ಬೈಕ್‌ನಲ್ಲಿ ಮನೆ ಕಡೆ ತೆರಳುತ್ತಿದ್ದ ವೇಳೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಸಂದರ್ಭ ಕ್ಷುಲಕ ಕಾರಣಕ್ಕೆ ಕಾರು ಚಾಲಕನೊಬ್ಬ ಬೈಕ್ ಸವಾರನ ಮೇಲೆ ಕೋಪಗೊಂಡು ಕಿರುಚಾಡಲು ಆರಂಭಿಸಿದ್ದಾನೆ. ಕಾರು ಚಾಲಕ ಅವಾಚ್ಯ ಶಬ್ದಗಳನ್ನು ಬಳಸಿಕೊಂಡು, ಗದ್ದಲ ಸೃಷ್ಟಿಸಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದರೂ, ಬೈಕ್ ಸವಾರ ಸಂಪೂರ್ಣ ಸಂಯಮ ತಾಳಿದ್ದಾನೆ. ಎಷ್ಟೇ ಕೂಗಾಟ, ಚೀಟಾಟ ನಡೆದರೂ ಪ್ರತಿಕ್ರಿಯಿಸದೆ ಮೌನವಾಗಿಯೇ ಇದ್ದು, ಕೇವಲ ಘಟನೆಯ ವಿಡಿಯೋವನ್ನು ದಾಖಲಿಸಿಕೊಂಡು ಅಲ್ಲಿಂದ ಮುಂದುವರಿದಿದ್ದಾನೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೈಕ್ ಸವಾರನ ಸಂಯಮ ಮತ್ತು ಶಾಂತ ಪ್ರತಿಕ್ರಿಯೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ಕಿರಿಕ್ ಮಾಡಿದಾಗ ಮೌನವಾಗಿರುವುದೇ ಉತ್ತಮ ಪರಿಹಾರ”, “ರೋಡ್ ರೇಜ್‌ಗೆ ಉತ್ತರ ಸಂಯಮವೇ” ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಎರಡು ಘಟನೆಗಳು ರಸ್ತೆ ಮೇಲಿನ ವರ್ತನೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸುತ್ತವೆ. ಅಜಾಗರೂಕತೆ ಮತ್ತು ಅಹಂಕಾರ ಜೀವಕ್ಕೆ ಅಪಾಯ ತಂದೊಡ್ಡಬಹುದಾದರೆ, ಸಂಯಮ ಮತ್ತು ಶಾಂತತೆ ದೊಡ್ಡ ಸಮಸ್ಯೆಯನ್ನೂ ಸುಲಭವಾಗಿ ತಪ್ಪಿಸಬಹುದು ಎಂಬುದಕ್ಕೆ ಈ ಘಟನೆಗಳು ಜೀವಂತ ಉದಾಹರಣೆಗಳಾಗಿವೆ. ಪೊಲೀಸರು ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಬೇಕು, ರೋಡ್ ರೇಜ್‌ಗೆ ಇಳಿಯದೆ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಬೆಂಗಳೂರು ನಗರದ ರಸ್ತೆಗಳಲ್ಲಿ ಸುರಕ್ಷತೆ ಮತ್ತು ಸಂಯಮವೇ ಅತ್ಯಂತ ಅಗತ್ಯ.