
ಸಂಪತ್ ತರೀಕೆರೆ
ಬೆಂಗಳೂರು(ನ.01): ರಾಜಧಾನಿ ಬೆಂಗಳೂರಿನ ಬಟ್ಟೆಗಳು ಖರೀದಿಗೆ ಹೆಚ್ಚು ಖ್ಯಾತಿ ಗಳಿಸಿದ ಚಿಕ್ಕಪೇಟೆ, ಬಿಟಿಎಂ ಲೇಔಟ್ ಸೇರಿದಂತೆ ಬಿಬಿಎಂಪಿ ದಕ್ಷಿಣ ವಲಯದ ಹಲವು ರಸ್ತೆಗಳಲ್ಲಿ ನೂರಾರು ಗುಂಡಿಗಳು ವಾಹನ ಸವಾರರ ನಿದ್ದೆಗೆಡಿಸಿವೆ. ಬಿಬಿಎಂಪಿಯ ಎಂಟು ವಲಯಗಳ ಪೈಕಿ ದಕ್ಷಿಣ ವಲಯ ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೊಡ್ಡ ವಲಯವಾಗಿದ್ದು, ವಾರ್ಡ್‌ಗಳ ಮರು ವಿಂಗಡಣೆ ನಂತರ 44 ಇದ್ದ ವಾರ್ಡ್‌ಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.
ದಕ್ಷಿಣ ವಲಯ ವ್ಯಾಪ್ತಿಯ ಚಿಕ್ಕಪೇಟೆ ಪ್ರಮುಖ ಜವಳಿ ವಹಿವಾಟಿನ ಕೇಂದ್ರವಾಗಿದೆ. ಇಲ್ಲಿನ ಬಹುತೇಕ ರಸ್ತೆಗಳು ಇಕ್ಕಟ್ಟಿನಿಂದ ಕೂಡಿದ್ದು ದಿನಕ್ಕೆ ಲಕ್ಷಾಂತರ ಜನರು ಓಡಾಡುವ, ಸಾವಿರಾರು ವಾಹನಗಳು ಸಂಚರಿಸುವ ಪ್ರದೇಶ.
ಕಬ್ಬನ್‌ಪೇಟೆ, ಬಿ.ವಿ.ಕೆ.ಅಯ್ಯಂಗಾರ್ ರಸ್ತೆ ಸೇರಿದಂತೆ ಹಲವೆಡೆ ಓಣಿಯಾಕಾರದ ಈ ರಸ್ತೆಗಳಲ್ಲಿ ನೂರಾರು ಗುಂಡಿಗಳು ಇದ್ದು, ಮಳೆ ಸುರಿದರಂತೂ ರಸ್ತೆ ಕೆಸರಿನಿಂದ ತುಂಬಿಕೊಂಡು ಚರಂಡಿಗಳಲ್ಲಿ ಓಡಾಡಿದಂತಾಗಿ ಕಿರಿಕಿರಿ ಅನುಭವವಾಗುತ್ತದೆ. ಇಲ್ಲಿನ ಬಟ್ಟೆಅಂಗಡಿಗಳಿಗೆ ಬಟ್ಟೆಗಳ ಲೋಡ್ ಹೊತ್ತು ನೂರಾರು ಸರಕು ಸಾಗಣೆ ವಾಹನಗಳು ಬಂದು ಇನ್ನಷ್ಟು ಗುಂಡಿಗಳನ್ನು ಸೃಷ್ಟಿಸುತ್ತಿವೆ.
Bengaluru: ಮಹದೇವಪುರದಲ್ಲೀಗ ರಸ್ತೆ ಗುಂಡಿ ಗಂಡಾಂತರ!
ಇನ್ನು ಮೆಟ್ರೋ ಕಾಮಗಾರಿಗಳು ನಡೆಯುತ್ತಿರುವ ರಸ್ತೆಗಳಾದ ಸಿಲ್‌್ಕ ಬೋರ್ಡ್ ಜಂಕ್ಷನ್ ಹಾಗೂ ಬನ್ನೇರುಘಟ್ಟಮುಖ್ಯ ರಸ್ತೆ ಉದ್ದಕ್ಕೂ ರಸ್ತೆಗುಂಡಿಗಳದ್ದೇ ಕಾರುಬಾರು. ಕೆಲ ವಾರಗಳ ಹಿಂದೆ ಸುರಿದ ಮಳೆಯಿಂದಾಗಿ ಬಿಟಿಎಂ ಲೇಔಟ್ 29ನೇ ಮುಖ್ಯರಸ್ತೆ ರಸ್ತೆಗುಂಡಿಗಳಿಂದ ಸಂಪೂರ್ಣವಾಗಿ ಹದಗೆಟ್ಟಿದೆ. ಬಿಎಂಆರ್‌ಸಿಎಲ್ ಆಗಲೀ ಬಿಬಿಎಂಪಿ ಆಗಲೀ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇಲ್ಲಿನ ನಿವಾಸಿಗಳು ಅನೇಕ ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ದೀಪಾವಳಿ ಸಂದರ್ಭದಲ್ಲಿ ರಸ್ತೆಗುಂಡಿಗಳಲ್ಲಿ ಹೂಕುಂಡ, ನೆಲಚಕ್ರ ಪಟಾಕಿಗಳನ್ನು ಸಿಡಿಸಿ ಆಕ್ರೋಶ ವ್ಯಕ್ತಪಡಿಸಿದ ನಂತರವೂ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತು ಕೆಲಸ ಮಾಡಲೇ ಇಲ್ಲ.
ಹಾಗೆಯೇ ಬಿಬಿಎಂಪಿ ಪಕ್ಕದ ಲಾಲ್‌ಬಾಗ್ ರಸ್ತೆ, ದೊಡ್ಡಮಾವಳ್ಳಿ ರಸ್ತೆ, ಜಯನಗರ 24ನೇ ಮುಖ್ಯ ರಸ್ತೆಗಳಲ್ಲೂ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಿಲ್ಲ. ಪುಟ್ಟೇನಹಳ್ಳಿ ಮುಖ್ಯರಸ್ತೆ, ಕೋಣನಕುಂಟೆ ಮುಖ್ಯ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಗುಣಮಟ್ಟದ ರಸ್ತೆ ಕಾಮಗಾರಿ ನಡೆಯದೆ ರಸ್ತೆ ಗುಂಡಿಗಳಾಗಿದ್ದು, ವಾಹನ ಸವಾರರು ಪರದಾಡು ಸ್ಥಿತಿ ಇದೆ.
ಅವೈಜ್ಞಾನಿಕ ಡಾಂಬರೀಕರಣ!
ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಿದ ಗುತ್ತಿಗೆದಾರರೇ ಮೂರು ವರ್ಷ ನಿರ್ವಹಣೆ ಮಾಡಬೇಕೆಂಬ ನಿಯಮವಿದೆ. 40 ಮಿ.ಮೀ.ಗಿಂತ ದಪ್ಪವಿರುವ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ನಿರ್ವಹಣಾ ಅವಧಿ ಮೂರು ವರ್ಷವಿದೆ. ಆ ಅವಧಿಯಲ್ಲಿ ರಸ್ತೆ ಹಾಳಾದರೆ ಅದರ ಸಂಪೂರ್ಣ ಜವಾಬ್ದಾರಿ ಗುತ್ತಿಗೆದಾರರದ್ದೇ ಆಗಿರುತ್ತದೆ. ಟೆಂಡರ್ ಮೊತ್ತದ ಒಟ್ಟು ಶೇ.15ರಷ್ಟುಎಫ್‌ಎಸ್‌ಡಿ (ಸೇಫ್ಟಿಡೆಪಾಸಿಟ್) ಪಾಲಿಕೆಯಲ್ಲಿಯೇ ಇರುತ್ತದೆ. ಮೂರು ವರ್ಷ ನಿರ್ವಹಣಾ ಅವಧಿ ಮುಗಿದ ನಂತರ ಗುತ್ತಿಗೆದಾರರಿಗೆ ಅದನ್ನು ಕೊಡುವುದು ನಿಯಮ. ಅದರಲ್ಲೇ ಹಾಳಾದ ರಸ್ತೆಗಳನ್ನು ದುರಸ್ತಿ ಪಡಿಸುವ ಕೆಲಸವನ್ನು ಪಾಲಿಕೆ ಮಾಡಬೇಕು. ಆದರೆ ಅದನ್ನು ಬಿಟ್ಟು ಪಾಲಿಕೆ ಖಜಾನೆಯಿಂದ ಹಣ ಖರ್ಚು ಮಾಡುತ್ತಿದ್ದಾರೆ. ವೈಜ್ಞಾನಿಕವಾಗಿ ರಸ್ತೆಗಳ ನಿರ್ಮಾಣದಲ್ಲಿ ಅನುಸರಿಸಬೇಕಾದ ವಿಧಾನಗಳನ್ನು ಅನುಸರಿಸದಿರುವುದು ಇಂದಿನ ಅವ್ಯವಸ್ಥೆಗೆ ಕಾರಣ ಎಂಬುದು ಪಾಲಿಕೆ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಆರೋಪ.
ದಕ್ಷಿಣ ವಲಯದಲ್ಲಿ 10,768 ವಾರ್ಡ್ ರಸ್ತೆಗಳಿದ್ದು ಸಬ್ ಆರ್ಟಿರಿಯಲ್, ವಾರ್ಡ್ ಮಟ್ಟದ ರಸ್ತೆಗಳು ಸೇರಿದಂತೆ 1,529 ಕಿ.ಮೀ. ಉದ್ದದ ರಸ್ತೆಯಿದೆ. ಈ ಪೈಕಿ 425 ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಿದ್ದು 401 ರಸ್ತೆ ಗುಂಡಿ ಮಾತ್ರ ಮುಚ್ಚಲು ಬಾಕಿ ಇದೆ. ನ.5ರೊಳಗೆ ತ್ವರಿತವಾಗಿ ಗುಂಡಿ ಮುಚ್ಚುತ್ತೇವೆ ಅಂತ ಬಿಬಿಎಂಪಿ ಮುಖ್ಯ ಅಭಿಯಂತರ ಮೋಹನ ಕೃಷ್ಣ ತಿಳಿಸಿದ್ದಾರೆ.
ಕೆಟ್ಟರಸ್ತೆಗೆ ಟಾರ್ ಹಾಕೋವರೆಗೂ ಈ ಸಚಿವ ಚಪ್ಪಲಿ ಹಾಕಲ್ಲ!
ವೈಜ್ಞಾನಿಕತೆ ಇಲ್ಲದೇ ರಸ್ತೆ ನಿರ್ಮಾಣ ಮಾಡಲಾಗಿದ್ದು, ಈಗ ಗುಂಡಿಗಳಿಗೆ ತೇಪೆ ಹಾಕಲಾಗುತ್ತಿದೆ. ಇದರಿಂದ ರಸ್ತೆಗಳಲ್ಲಿ ಏರು-ತಗ್ಗು ಉಂಟಾಗಿದ್ದು, ವಾಹನ ಸವಾರರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪಾಲಿಕೆ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಅಂತ ಸ್ಥಳೀಯ ನಿವಾಸಿ ಸಾಮುವೇಲ್ ಪ್ರಭಾಕರ್ ಹೇಳಿದ್ದಾರೆ.
ವಲಯ ಒಟ್ಟು ಗುಂಡಿಗಳು ಭರ್ತಿ ಬಾಕಿ
ದಕ್ಷಿಣ ವಲಯ 1915 1514 401
ಪ್ರತಿಕ್ರಿಯಿಸದ ಅಧಿಕಾರಿ
ದಕ್ಷಿಣ ವಲಯದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆ ಗುಂಡಿಗಳ ಕುರಿತು ಮಾಹಿತಿಗಾಗಿ ಎಂಜಿನಿಯರ್ ಸಾವಿತ್ರಿ ಅವರಿಗೆ ಹಲವು ಬಾರಿ ಕರೆ ಮಾಡಿ, ಸಂದೇಶ ಕಳುಹಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.