ಕೊರೋನಾದಿಂದ ಮೃತಪಟ್ಟವರ ಕುಟುಂಬಸ್ಥರು ಕೋವಿಡ್ ಪರಿಹಾರಕ್ಕಾಗಿ ಇಂದಿಗೂ ಕಚೇರಿಗಳಿಗೆ ಅಲೆದಾಡುತ್ತಿರುವ ಪ್ರಸಂಗ ಕೊಡಗಿನಲ್ಲಿ ಕಂಡುಬಂದಿದೆ. ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು.
ಮೋಹನ್ ರಾಜ್
ಮಡಿಕೇರಿ (ಜು.17): ಕೊರೋನಾದಿಂದ ಮೃತಪಟ್ಟವರ ಕುಟುಂಬಸ್ಥರು ಕೋವಿಡ್ ಪರಿಹಾರಕ್ಕಾಗಿ ಇಂದಿಗೂ ಕಚೇರಿಗಳಿಗೆ ಅಲೆದಾಡುತ್ತಿರುವ ಪ್ರಸಂಗ ಕೊಡಗಿನಲ್ಲಿ ಕಂಡುಬಂದಿದೆ. ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಆದರೆ, ಈ ಪರಿಹಾರ ಪಡೆಯಲು ಜಿಲ್ಲೆಯ ಹಲವು ಕುಟುಂಬಗಳು ಇಂದಿಗೂ ಪರದಾಡುವಂತಾಗಿದೆ.
ಪರಿಹಾರಕ್ಕಾಗಿ ಕಳೆದ ಹಲವಾರು ತಿಂಗಳುಗಳಿಂದ ನಿರಂತರವಾಗಿ ಕಚೇರಿಗಳಿಗೆ ಹೋಗಿ ಬರುತ್ತಿದ್ದರೂ ಈವರೆಗೂ ಪೂರ್ಣಪ್ರಮಾಣದಲ್ಲಿ ಪರಿಹಾರ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮೃತರ ಸಂಬಂಧಿಕರು, ಇದಕ್ಕೆಲ್ಲ ಅಧಿಕಾರಿಗಳ ವಿಳಂಬ ಧೋರಣೆಯೇ ಕಾರಣ ಎಂದು ಆರೋಪಿಸಿದ್ದು, ಸಂಬಂಧಪಟ್ಟಅಧಿಕಾರಿಗಳು ಸರ್ಕಾರದಿಂದ ಸಿಗಬೇಕಾಗಿರುವ ಪರಿಹಾರವನ್ನು ಶೀಘ್ರದಲ್ಲಿ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.
Corona Crisis: ಒಂದೇ ದಿನ ಕೋವಿಡ್‌ಗೆ 3 ಬಲಿ: 4 ತಿಂಗಳಲ್ಲೇ ಮೊದಲು
ಕೊಡಗಿನಲ್ಲಿ 451 ಮಂದಿ ಕೊರೋನಾದಿಂದಾಗಿ ಮೃತಪಟ್ಟಿದ್ದಾರೆ. ಇದರಲ್ಲಿ ಬಹುತೇಕರು ತೀರಾ ಬಡವರು. ಮೃತಪಟ್ಟು ವರ್ಷವೇ ಕಳೆದಿದೆಯಾದರೂ ಇನ್ನೂ ಸರ್ಕಾರ ಘೋಷಣೆ ಮಾಡಿದ ಪರಿಹಾರ ಮಾತ್ರ ಮೃತರ ಕುಟುಂಬದ ಕೈ ಸೇರಿಲ್ಲ. ಕೋವಿಡ್‌ನಿಂದ ಮೃತಪಟ್ಟರೆ ಕೇಂದ್ರ ಸರ್ಕಾರ 50 ಸಾವಿರ ರು. ಹಾಗೂ ರಾಜ್ಯ ಸರ್ಕಾರ 1 ಲಕ್ಷ ರು. ಪರಿಹಾರ ಘೋಷಿಸಿದೆ. ಆದರೆ, ಸರ್ಕಾರದ ದಿವ್ಯ ನಿರ್ಲಕ್ಷಕ್ಕೆ ಈ ಕುಟುಂಬಸ್ಥರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾಹಿತಿಗಳ ಪ್ರಕಾರ ಜಿಲ್ಲೆಯ ಸುಮಾರು 100ಕ್ಕೂ ಹೆಚ್ಚು ಮಂದಿಯ ಕುಟುಂಬಗಳಿಗೆ ಕೋವಿಡ್ ಪರಿಹಾರ ಸಿಗಬೇಕಿದೆ. ಈಗಾಗಲೇ ಪರಿಹಾರಕ್ಕಾಗಿ ಅಗತ್ಯ ದಾಖಲೆಗಳ ಸಮೇತ ಕುಟುಂಬಸ್ಥರು ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ಕಚೇರಿಗಳಿಗೆ ತಿಂಗಳುಗಳಿಂದ ಅಲೆಯುತ್ತಿದ್ದರೂ ಪರಿಹಾರ ದೊರೆತಿಲ್ಲ. ಒಂದೆಡೆ ಮನೆಯ ಮುಖ್ಯಸ್ಥರನ್ನ ಕಳೆದುಕೊಂಡ ದುಃಖ, ಮತ್ತೊಂದೆಡೆ ಚಿಕಿತ್ಸೆಗಾಗಿ ಮಾಡಿದ ಸಾಲದ ಹೊರೆ ಕಾಡುತ್ತಿದೆ. ಇವೆಲ್ಲದ ನಡುವೆ ಪರಿಹಾರವೂ ಸಿಗದೆ ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ಸರ್ಕಾರದ ವಿಳಂಬ ಧೋರಣೆಯಿಂದ ಈ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಇನ್ನಾದರೂ ಆಡಳಿತ ಯಂತ್ರ ಚುರುಕುಗೊಂಡು ಮೃತರ ಕುಟುಂಬದವರಿಗೆ ಸಿಗಬೇಕಾದ ಪರಿಹಾರ ಸಕಾಲದಲ್ಲಿ ನೀಡಲು ಕ್ರಮ ಕೈಗೊಳ್ಳಬೇಕಿದೆ.
ಕುಟುಂಬಕ್ಕೆ ಆಸರೆಯಾಗಿದ್ದ ನನ್ನ ಪತಿ ಒಂದು ವರ್ಷದ ಹಿಂದೆ ಕೊರೋನಾದಿಂದ ಮೃತಪಟ್ಟಿದ್ದು, ಮೂರು ಮಕ್ಕಳನ್ನು ಹೊಂದಿರುವ ನನಗೆ ಮನೆಗೆ ಆಧಾರವಾಗಿದ್ದ ಪತಿಯನ್ನು ಕಳೆದುಕೊಂಡು ಈಗ ದಿಕ್ಕೇ ತೋಚದಂತಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಕಷ್ಟಸಾಧ್ಯವಾಗಿದೆ. ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ನಮಗೆ ಸರ್ಕಾರದ ಪರಿಹಾರ ಸಿಕ್ಕಿದ್ರೆ ತುಂಬಾ ಸಹಾಯವಾಗುತ್ತಿತ್ತು. ಸಂಬಂಧಪಟ್ಟಕಚೇರಿಗೆ ದಾಖಲೆಗಳನ್ನು ಸಲ್ಲಿಸಿ ಹಲವು ತಿಂಗಳುಗಳೇ ಕಳೆದಿವೆ. ಕೂಡಲೇ ನಮಗೆ ಪರಿಹಾರ ಕೊಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
-ಜಯಂತಿ, ಮಡಿಕೇರಿ ನಿವಾಸಿ
ತಂತ್ರಾಂಶಗಳಲ್ಲಿ ದಾಖಲಾಗಿರುವ 451 ಮಂದಿ ಸೇರಿ ಹೊರ ಜಿಲ್ಲೆ ಹಾಗೂ ಮನೆಗಳಲ್ಲೇ ಕೋವಿಡ್‌ನಿಂದ ಮೃತಪಟ್ಟಿರುವ ಸುಮಾರು 641 ಕುಟುಂಬಗಳಿಗೆ ಕೋವಿಡ್ ಪರಿಹಾರ ನೀಡಲಾಗಿದೆ. ಮಾಹಿತಿಗಳ ಪ್ರಕಾರ ಜಿಲ್ಲೆಯಲ್ಲಿ ಇನ್ನು ಯಾವುದೇ ಕೋವಿಡ್ ಪ್ರಕರಣಗಳಿಗೆ ಪರಿಹಾರ ನೀಡಲು ಬಾಕಿ ಇಲ್ಲ
-ನಂಜುಂಡೇಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ, ಕೊಡಗು ಜಿಲ್ಲೆ
Free Booster Dose: ಇಂದಿನಿಂದ ರಾಜ್ಯದಲ್ಲಿ ಉಚಿತ 3ನೇ ಡೋಸ್ ಕೋವಿಡ್ ಲಸಿಕೆ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್‌ನಿಂದ ಮೃತಪಟ್ಟವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಕೆಲವರಿಗೆ ಪರಿಹಾರವನ್ನು ನೀಡಲಾಗಿದೆ. ನನ್ನ ಅಮ್ಮ ಕೋವಿಡ್‌ನಿಂದಾಗಿ ಕಳೆದ ವರ್ಷ ಮೃತಪಟ್ಟಿದ್ದಾರೆ. ಈ ಕುರಿತ ದಾಖಲೆಗಳನ್ನು ಕಚೇರಿಗಳಿಗೆ ಸಲ್ಲಿಸಲಾಗಿದ್ದರೂ ಕೇವಲ 50 ಸಾವಿರ ಪರಿಹಾರ ಮಾತ್ರ ನೀಡಲಾಗಿದೆ. ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ 1 ಲಕ್ಷ ರುಪಾಯಿ ಪರಿಹಾರ ಪೂರ್ತಿ ದೊರೆತಿಲ್ಲ. ನಮಗೂ ಕಚೇರಿಗೆ ಅಲೆದಾಡಿ ಸಾಕಾಗಿದೆ. ಸರ್ಕಾರ ಕೂಲಿ ಕಾರ್ಮಿಕರನ್ನು ಅಲೆದಾಡಿಸುವುದು ಸರಿಯಲ್ಲ. ಸಂಬಂಧಪಟ್ಟಇಲಾಖೆಯವರು ಆದಷ್ಟುಬೇಗ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು
-ಶಶಿಕುಮಾರ್, ಪಾಲಿಬೆಟ್ಟ ನಿವಾಸಿ