ಬೆಂಗ್ಳೂರಲ್ಲಿ ಭಾರೀ ಮಳೆಗೆ ಕುಸಿದ ರಸ್ತೆ, 150 ಮರಗಳು ಧರೆಗೆ..!

By Kannadaprabha NewsFirst Published May 9, 2024, 8:01 AM IST
Highlights

ರಸ್ತೆ ಮಧ್ಯೆಯೇ ಭೂ ಕುಸಿತ ಸೃಷ್ಟಿಯಾಗಿದ ಪರಿಣಾಮ ನಿರ್ಮಾಣ ಹಂತದಲ್ಲಿರುವ ನಿಲ್ದಾಣಕ್ಕೆ ಹೊಂದಿಕೊಂಡ ರಸ್ತೆಯ ಎರಡು ತುದಿಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಬ್ಯಾರಿಕೇಡ್ ಅಳವಡಿಕೆ ಮಾಡಿ ರಸ್ತೆ ಬಂದ್ ಮಾಡಲಾಗಿದೆ. ರಸ್ತೆ ಕುಸಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ 

ಬೆಂಗಳೂರು(ಮೇ.09): ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಪಾಟಂಟೌನ್‌ನಲ್ಲಿ ನಿರ್ಮಾಣ ಹಂತದ ಅಂಡರ್ ಗೌಂಡ್ ಮೆಟ್ರೋ ನಿಲ್ದಾಣದ ಮೇಲ್ಬಾಗದಲ್ಲಿ ಭೂ ಕುಸಿತ ಉಂಟಾಗಿದ್ದು, ಕೆಲ ಹೊತ್ತು ಜನರು ಆತಂಕಕ್ಕೆ ಒಳಗಾದ ಘಟನೆ ನಡೆಯಿತು. 

ರಸ್ತೆ ಮಧ್ಯೆಯೇ ಭೂ ಕುಸಿತ ಸೃಷ್ಟಿಯಾಗಿದ ಪರಿಣಾಮ ನಿರ್ಮಾಣ ಹಂತದಲ್ಲಿರುವ ನಿಲ್ದಾಣಕ್ಕೆ ಹೊಂದಿಕೊಂಡ ರಸ್ತೆಯ ಎರಡು ತುದಿಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಬ್ಯಾರಿಕೇಡ್ ಅಳವಡಿಕೆ ಮಾಡಿ ರಸ್ತೆ ಬಂದ್ ಮಾಡಲಾಗಿದೆ. ರಸ್ತೆ ಕುಸಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂದಿನಿಂದ 5 ದಿನ ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ..!

ಇನ್ನು ಗಾಳಿ ಮಳೆಗೆ ನಗರದಾದ್ಯಂತ 150ಕ್ಕೂ ಅಧಿಕ ಮರ ಹಾಗೂ ಮರದ ಕೊಂಬೆಗಳು ಧರೆ ಗುರುಳಿದ್ದು, ಕಾರು, ಆಟೋ, ಬೈಕ್ ಜಖಂಗೊಂಡ ವರದಿಯಾಗಿದೆ. ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಬುಧವಾರ ಸಂಜೆ 5 ಗಂಟೆಗೆ ಆರಂಭಗೊಂಡ ಗುಡುಗು, ಮಿಂಚು, ಗಾಳಿ ಸಹಿತ ಸುಮಾರು 20 ರಿಂದ 30 ನಿಮಿಷಗಳ ಕಾಲ ಧಾರಾಕಾರವಾಗಿ ಮಳೆ ಸುರಿಯಿತು. ಬೆಂಗಳೂರಿನ ಪೂರ್ವ ಭಾಗ ಹಾಗೂ ರಾಜರಾಜೇಶ್ವರಿ ನಗರ ಭಾಗದಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗಿದೆ. ಗಾಳಿ ಮಳೆಗೆ ಆರ್‌ಆ‌ರ್ ನಗರ ವ್ಯಾಪ್ತಿಯಲ್ಲಿ 70. ಪೂರ್ವ ವಲಯದಲ್ಲಿ 24, ಪಶ್ಚಿಮ ವಲಯದಲ್ಲಿ 30 ಮರ ಮತ್ತು ಮರ ಕೊಂಬೆ ಬಿದ್ದಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ನಗರದಲ್ಲಿ ಸರಾಸರಿ 1.4 ಸೆಂಮೀ ಮಳೆ

ಬುಧವಾರ ನಗರದಲ್ಲಿ ಸರಾಸರಿ 1.4 ಸೆಂ.ಮೀ ಮಳೆಯಾಗಿದೆ. ದೊಡ್ಡ ಬಿದರಕಲ್ಲಿನಲ್ಲಿ ಅತಿ ಹೆಚ್ಚು 6.6 ಸೆಂ.ಮೀ ಮಳೆಯಾಗಿದೆ. ನಾಯಂಡನಹಳ್ಳಿ, ಆರ್.ಆರ್.ನಗರದಲ್ಲಿ ತಲಾ 5.1, ಮಾರುತಿ ಮಂದಿರದಲ್ಲಿ 4.2. ಪುಲಕೇಶಿನಗರದಲ್ಲಿ 3.8. ವಿದ್ಯಾಪೀಠದಲ್ಲಿ 3.7. ನಾಗೇನಗಳ್ಳಿಯಲ್ಲಿ 1, ಗೊಟ್ಟಿಗೇರೆಯಲ್ಲಿ 2.2. ಕೊಟ್ಟಿಗೆಪಾಳ್ಯ, ಉತ್ತರಹಳ್ಳಿಯಲ್ಲಿ ತಲಾ 2.1. ಅಂಜನಾಪುರ ಹಾಗೂ ಸಂಪಗಿ ರಾಮನಗರದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ ಎಂದು ಕೆಎಎನ್‌ಡಿಎಂಸಿ ತಿಳಿಸಿದೆ.

ವಸಂತನಗರದಲ್ಲಿ ಮರದೊಂದಿಗೆ ವಿದ್ಯುತ್ ಕಂಬ ಆಟೋದ ಮೇಲೆ ಬಿದ್ದು, ಆಟೋ ಸಂಪೂರ್ಣವಾಗಿ ಜುಂಗೊಂಡಿದೆ. ಆಟೋ ಚಾಲಕ ಅದೃಷ್ಟವಶಾತ್ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿದೆ. ಭಾರೀ ಸಂಖ್ಯೆ ಮರ ಮತ್ತು ಮರದ ಕೊಂಬೆ ಬಿದ್ದ ಪರಿಣಾಮ ಕಾರು ಮತ್ತು ಬೈಕ್ ಹಾನಿಗೆ ಒಳಗಾಗಿದೆ. ಭಾರೀ ಸಂಚಾರ ದಟ್ಟಣೆ ಮಳೆಯಿಂದ ನಗರದ ರಸ್ತೆ, ಅಂಡರ್ ಪಾಸ್, ಪ್ರೈಓವರ್ ಮೇಲೆ ಭಾರಿ ಪ್ರಮಾಣ ನೀರು ಹರಿದ ಪರಿಣಾಮ ನಗರದ ಹಲವು ರಸ್ತೆಯಲ್ಲಿ ವಾಹನ ಸವಾರರು ಪರದಾಡಿದರು. 

ಮಂಡ್ಯದಲ್ಲಿ ಬಿರುಗಾಳಿ ಸಹಿತ ಮಳೆ ಮರ ಬಿದ್ದು ಯುವಕ ಸಾವು

ಬುಧವಾರದ ಮಳೆಗೆ ಮರ ಮತ್ತು ಕೊಂಬೆ ಬಿದ್ದ ವಿವರ

ವಲಯ ಮರ/ಕೊಂಬೆ

ಪಶ್ಚಿಮ 30
ದಕ್ಷಿಣ 16
ಪೂರ್ವ 24
ಆರ್‌.ಅರ್‌.ನಗರ 70
ಬೊಮ್ಮನಹಳ್ಳಿ 2
ಮಹದೇವಪುರ 0
ಯಲಹಂಕ 7
ದಾಸರಹಳ್ಳಿ 3
ಒಟ್ಟು 152

ದೂರುಗಳ ಸುರಿಮಳೆ

ಮಳೆ ಹಿನ್ನೆಲೆಯಲ್ಲಿ ಪಾಲಿಕೆ ಸಹಾಯವಾಣಿ ಸಂಖ್ಯೆಗೆ ದೂರುಗಳ ಸುರಿಮಳೆಯಾಗಿದ್ದು, ಬುಧವಾರ 200ಕ್ಕೂ ಅಧಿಕ ದೂರು ಬಂದಿವೆ. ಪ್ರಮುಖವಾಗಿ ಮರ ಬಿದ್ದಿರುವುದು, ರಸ್ತೇಲಿ ನೀರು ನಿಂತಿದ್ದಕ್ಕೆ ದೂರು ಬಂದಿವೆ.

click me!