
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಜು.20): ಎರಡನೇ ಬಾರಿಗೆ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಪಡೆದ ಬೆಂಗಳೂರು ಮೂಲದ ರಿಕ್ಕಿ ಕೇಜ್ ತಂಡದಲ್ಲಿ ಗುರುತಿಸಿಕೊಂಡಿದ್ದ ಮಂಗಳೂರು ಮೂಲದ ಸಂಗೀತ ನಿರ್ದೇಶಕರೊಬ್ಬರಿಗೆ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಲಭ್ಯವಾಗಿದ್ದು, ಕೆಲ ದಿನಗಳ ಹಿಂದಷ್ಟೇ ಈ ಅವಾರ್ಡ್ ಅವರನ್ನು ತಲುಪಿದೆ. ರಿಕ್ಕಿ ಕೇಜ್ ಗ್ರ್ಯಾಮಿ ಅವಾರ್ಡ್ ಪಡೆದ 'ಡಿವೈನ್ ಟೈಡ್ಸ್' ಆಲ್ಬಂಗೆ ಮಂಗಳೂರು ಮೂಲದ ವನಿಲ್ ವೇಗಸ್ ಇಂಜಿನೀಯರಿಂಗ್ ಮತ್ತು ಮಿಕ್ಸಿಂಗ್ ವಿಭಾಗದಲ್ಲಿ ಕೆಲಸ ನಿರ್ವಹಿಸಿದ ಕಾರಣಕ್ಕೆ ಪ್ರತಿಷ್ಟಿತ ಗ್ರ್ಯಾಮಿ ಪ್ರಶಸ್ತಿ ಸಂದಾಯವಾಗಿದೆ.
ಈ ಮೂಲಕ ಮಂಗಳೂರು(Mangalore) ಮೂಲದ ಸಂಗೀತ ನಿರ್ದೇಶಕ(Music Director) ವನಿಲ್ ವೇಗಸ್ ರವರು ಸಂಗೀತ ಕ್ಷೇತ್ರದ ಅತ್ಯುನ್ನತ ಗ್ರ್ಯಾಮಿ ಪ್ರಶಸ್ತಿ(Grammy award)ಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Ricky Kej: ಗ್ರ್ಯಾಮಿ ವಿಜೇತ ರಿಕ್ಕಿ ಕೇಜ್ ಕನ್ನಡದ ಹೆಮ್ಮೆ: ಸಿಎಂ ಬೊಮ್ಮಾಯಿ
ಬೆಂಗಳೂರಿನ ರಿಕ್ಕಿ ಕೇಜ್(Ricky Kej) ತಂಡದ ಸದಸ್ಯರಾಗಿರುವ ವನಿಲ್, ರಿಕ್ಕಿ ಕೇಜ್- ಸ್ಟೂವರ್ಟ್ ಕೋಪ್ಲಾಂಡ್ ನಿರ್ಮಿತ "ಡಿವೈನ್ ಟೈಡ್ಸ್"(Divine Tides) ಆಲ್ಬಂಗೆ ಇಂಜಿನೀಯರಿಂಗ್ ಮತ್ತು ಮಿಕ್ಸಿಂಗ್ ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದರು. ಅದೇ ವಿಭಾಗದಲ್ಲಿ ಈಗ ಜಗತ್ತಿನಲ್ಲಿಯೇ ಸಂಗೀತ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದು ಕರ್ನಾಟಕ(Karnataka)ದ ಎರಡನೇ ಗ್ರ್ಯಾಮಿ ವಿಜೇತರೆಂಬ ಖ್ಯಾತಿಯನ್ನು ಪಡೆದಿದ್ದಾರೆ.
ಅರವತ್ತ ನಾಲ್ಕು ವರ್ಷಗಳ ಗ್ರ್ಯಾಮಿ ಇತಿಹಾಸದಲ್ಲಿ ಮಂಗಳೂರಿಗೆ ಇದು ಮೊತ್ತ ಮೊದಲನೆಯ ಗ್ರ್ಯಾಮಿ ಪ್ರಶಸ್ತಿಯಾಗಿದೆ.
ಬೆಸ್ಟ್ ನ್ಯೂ ಏಜ್(Best new age) ವಿಭಾಗದಲ್ಲಿ ಡಿವೈನ್ ಟೈಡ್ಸ್ ಆಲ್ಬಂಗೆ ಈ ಪ್ರಶಸ್ತಿಯನ್ನು 2022 ಏಪ್ರಿಲ್ 4 ರಂದು ಅಮೆರಿಕಾದ ಲಾಸ್ ವೇಗಸ್(Las Vegas) ನಲ್ಲಿ ನೀಡಲಾಯಿತು. ಆಲ್ಬಮ್ ನಿರ್ಮಾಪಕರಾದ ರಿಕ್ಕಿ ಕೀಜ್, ಸ್ಟೂವರ್ಟ್ ಕೋಪ್ಲಾಂಡ್, ಲೋನಿ ಪಾರ್ಕ್, ತಾಂತ್ರಿಕ ವಿಭಾಗದಲ್ಲಿ ಮಂಗಳೂರಿನ ವನಿಲ್ ವೇಗಸ್ ಹಾಗೂ ಮುಂಬೈ ಮೂಲದ ಪಿ ಎ ದೀಪಕ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಖ್ಯಾತ ನಾಟಕ ಹಾಗೂ ಸಿನೆಮಾ ಕಲಾವಿದ 'ನೆಲ್ಲು ಪೆರ್ಮನ್ನೂರು'ರವರ ತಮ್ಮನಾದ ವನಿಲ್ ರವರು ಮಂಗಳೂರಿನ ಉಳ್ಳಾಲದಲ್ಲಿ ಹುಟ್ಟಿ ಬೆಳೆದವರು. ಸರಿ ಸುಮಾರು 2000ನೇ ಇಸವಿಯಲ್ಲಿ ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿದ್ದು, ಮಂಗಳೂರಿನ ಬಹುತೇಕ ಸಂಗೀತ ತಂಡಗಳೊಂದಿಗೆ ಕೀಬೋರ್ಡ್ ವಾದಕರಾಗಿ ಕೆಲಸ ನಿರ್ವಹಿಸಿದ್ದರು. 2007 ನೇ ಇಸವಿಯಲ್ಲಿ ಹೊಟ್ಟೆಪಾಡಿಗಾಗಿ ಬೆಂಗಳೂರು ಸೇರಿದ್ದ ವನಿಲ್, ರಿಕ್ಕಿ ಕೇಜ್ ತಂಡವನ್ನು ಸೇರಿದ್ದು, ಬಹಳಷ್ಟು ಸಿನೆಮಾ ಹಾಡುಗಳು, 3000 ಕ್ಕೂ ಹೆಚ್ಚು ಜಾಹೀರಾತುಗಳು, 16 ಸ್ಟುಡಿಯೋ ಆಲ್ಬಂಗಳಲ್ಲಿ ಕೆಲಸ ಮಾಡಿದ್ದಾರೆ. ಇದರಲ್ಲಿ 3 ಗ್ರ್ಯಾಮಿ ಪ್ರಶಸ್ತಿ ವಿಜೇತ ಆಲ್ಬಂಗಳೂ ಸೇರಿವೆ.
ಪ್ರಧಾನಿ ಮೋದಿ ಭೇಟಿಯಾಗಿ ಸಂತಸ ಹಂಚಿಕೊಂಡ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್
ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಕರ್ನಾಟಕದ ವನ್ಯಜೀವಿ ಆಧಾರಿತ ಸಾಕ್ಷಾಚಿತ್ರ "ವೈಲ್ಡ್ ಕರ್ನಾಟಕ" ಇದರ ಹಿನ್ನೆಲೆ ಸಂಗೀತದಲ್ಲಿ ವನಿಲ್ ಪ್ರಮುಖ ಪಾತ್ರ ವಹಿಸಿದ್ದರು.
ಡಿವೈನ್ ಟೈಡ್ಸ್ ಆಲ್ಬಂಗಾಗಿ ರಿಕ್ಕಿ ಕೇಜ್ - ಸ್ಟೂವರ್ಟ್ ಕೋಪ್ಲಾಂಡ್ ಜೊತೆ ವನಿಲ್ ಬಹಳಷ್ಟು ಶ್ರಮ ವಹಿಸಿದ್ದರು. ಇದರ ಫಲವಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಮಂಗಳೂರಿನಲ್ಲಿ ಮನೆಮಾತಾಗಿದ್ದಾರೆ.
'ನಾನೀಗ ಅಧಿಕೃತ ಗ್ರ್ಯಾಮಿ ವಿಜೇತ'
ನಾನು ಈಗ ಅಧಿಕೃತ ಗ್ರ್ಯಾಮಿ ಪ್ರಶಸ್ತಿ ವಿಜೇತ ಎಂದು ನಂಬಲು ನನಗೆ ಇನ್ನೂ ಕಷ್ಟವಾಗುತ್ತಿದೆ, ಅದ್ಭುತ. ಟ್ರೋಫಿ ಈಗಷ್ಟೇ ಬಂದಿದೆ ಎಂದು ವನಿಲ್ ವೇಗಸ್ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾನು ಈ ಟ್ರೋಫಿಯನ್ನು ನನ್ನ ಇಡೀ ಕುಟುಂಬಕ್ಕೆ ಅರ್ಪಿಸುತ್ತೇನೆ. ಈ ಕ್ಷಣವನ್ನು ನನ್ನೊಂದಿಗೆ ಹಂಚಿಕೊಳ್ಳಲು ನನ್ನ ತಂದೆ ಇಲ್ಲಿದ್ದರೆಂದು ನಾನು ಬಯಸುತ್ತೇನೆ, ಏಕೆಂದರೆ ನಾನು ಸಂಗೀತಗಾರನಾಗಲು ಅವರೇ ಕಾರಣ.
ವಿಶ್ವಸಂಸ್ಥೆಯಲ್ಲಿ ಕನ್ನಡ ಹಾಡು ಹಾಡಿದ ರಿಕ್ಕಿಕೇಜ್!
ಅವರು ಗಿಟಾರ್ ವಾದಕರಾಗಿದ್ದರು ಮತ್ತು ಅವರು ನನಗೆ ನನ್ನ ಮೊದಲ ಕೀಬೋರ್ಡ್ ಅನ್ನು ಉಡುಗೊರೆಯಾಗಿ ನೀಡಿದರು. ನಾನು ನನ್ನ ಚರ್ಚ್‌ಗಾಗಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ ಮತ್ತು ನನ್ನ ಸಂಗೀತದ ಅಡಿಪಾಯವನ್ನು ನನಗೆ ನೀಡಿದ್ದಕ್ಕಾಗಿ ನಾನು ದೇವರಿಗೆ ಮತ್ತು ಚರ್ಚ್‌ನ ನನ್ನ ಸ್ನೇಹಿತರಿಗೆ ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಬೆಂಬಲದ ಆಧಾರ ಸ್ತಂಭವಾಗಿರುವ ನನ್ನ ತಾಯಿ, ನನ್ನ ಪತ್ನಿ ಡಯಾನಾ ಮತ್ತು ನನ್ನ ಮಗಳು ಅಲೀನ್ ಅವರೊಂದಿಗೆ ಈ ಕ್ಷಣವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ನನ್ನ ಜೀವನ ಮತ್ತು ವೃತ್ತಿಜೀವನದ ದೊಡ್ಡ ಮೈಲಿಗಲ್ಲು 2007 ರಲ್ಲಿ, ನನ್ನ ಸ್ನೇಹಿತರಾದ ಜೆರೋಮ್ ಕೊಯೆಲ್ಹೋ ಮತ್ತು ರಾಬರ್ಟ್ ಡಿಸೋಜಾ ನನ್ನನ್ನು ರಿಕಿ ಕೇಜ್‌ಗೆ ಪರಿಚಯಿಸಿದರು. ನಾನು ಮಂಗಳೂರಿನಿಂದ ಬಸ್ಸಿನಲ್ಲಿ ನನ್ನ ಕೀಬೋರ್ಡ್ ಮತ್ತು ರೂಡಿಮೆಂಟರಿ ಕಂಪ್ಯೂಟರ್ನೊಂದಿಗೆ ಅವರನ್ನು ಭೇಟಿಯಾದೆ. ಇದಾದ ನಂತರ ಹಿಂತಿರುಗಿ ನೋಡಲೇ ಇಲ್ಲ.
ರಿಕಿ ತುಂಬಾ ಪ್ರೋತ್ಸಾಹಿಸುತ್ತಿದ್ದರು, ನನಗೆ ಸಂಗೀತ ನಿರ್ಮಾಣ, ಸಂಯೋಜನೆ, ವ್ಯವಸ್ಥೆಗಳನ್ನು ಕಲಿಸಿದರು ಮತ್ತು ಸಂಗೀತ ಶೈಲಿಗಳು, ಪ್ರಕಾರಗಳು ಮತ್ತು ಸಂಗೀತಗಾರರಿಗೆ ನನ್ನ ಮನಸ್ಸನ್ನು ತೆರೆದರು. 15 ವರ್ಷಗಳ ಕಾಲ ನಿಕಟವಾಗಿ ಕೆಲಸ ಮಾಡಿದ ನಂತರ, ರಿಕಿ ಮತ್ತು ನಾನು ಲಿವಿಂಗ್ ಲೆಜೆಂಡ್ ಸ್ಟೀವರ್ಟ್ ಕೋಪ್‌ಲ್ಯಾಂಡ್‌ನೊಂದಿಗೆ ಮಹಾಕಾವ್ಯ "ಡಿವೈನ್ ಟೈಡ್ಸ್" ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ ಮತ್ತು ಈ ಆಲ್ಬಂ ಮೂಲಕ ನಾನು ನನ್ನ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದೇನೆ. ಡಿವೈನ್ ಟೈಡ್ಸ್ ಬಹಳಷ್ಟು ಕಠಿಣ ಕೆಲಸವಾಗಿತ್ತು, ವಿಶೇಷವಾಗಿ ಹೃದಯವಿದ್ರಾವಕ ಸಾಂಕ್ರಾಮಿಕದ ಮೂಲಕ ಪ್ರಪಂಚವು ಅನುಭವಿಸುತ್ತಿರುವ ಎಲ್ಲಾ ನೋವು ಮತ್ತು ಕಲಹಗಳ ಮೂಲಕ ನಾವು ಪ್ರಪಂಚದಾದ್ಯಂತದ ಸಂಗೀತಗಾರರೊಂದಿಗೆ ಕೆಲಸ ಮಾಡಿದ್ದೇವೆ ಮತ್ತು ಅಂತಹ ಸುಂದರವಾದ ಆಲ್ಬಂನೊಂದಿಗೆ ಬಂದಿದ್ದೇವೆ. ನನ್ನ ಜೊತೆಗೆ ಟ್ರೋಫಿ ಗೆದ್ದ ಪಿ.ಎ ದೀಪಕ್ ಅವರಿಗೆ ಅಭಿನಂದನೆಗಳು. ನಿಮ್ಮೊಂದಿಗೆ ಕೆಲಸ ಮಾಡುವುದು ಯಾವಾಗಲೂ ಸ್ಫೂರ್ತಿದಾಯಕವಾಗಿದೆ.
ನನ್ನನ್ನು ನಂಬಿದ ಎಲ್ಲರಿಗೂ ಧನ್ಯವಾದಗಳು, ಮತ್ತು ನನ್ನ ಆತ್ಮೀಯ ಸ್ನೇಹಿತ ರಿಕಿಯೊಂದಿಗಿನ ನನ್ನ ಕೆಲಸ ಮತ್ತು ಸಹಯೋಗವು ಇದೀಗ ಪ್ರಾರಂಭವಾಗಿದೆ ಎಂದಿದ್ದಾರೆ.