
ಉತ್ತರ ಕನ್ನಡ (ಜ.17): ಉತ್ತರ ಕನ್ನಡ ಜಿಲ್ಲೆಯ ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಯುವತಿ ರಿಶೆಲ್ ಡಿಸೋಜಾ ಆತ್ಮಹ*ತ್ಯೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಜೆಡಿಎಸ್ ನಾಯಕಿಯೊಬ್ಬರ ಪುತ್ರನ ಕಿರುಕುಳದಿಂದ ಬೇಸತ್ತು ರಿಶೆಲ್ ಆತ್ಮಹ*ತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪದ ನಡುವೆಯೇ, ಈಗ ಆಕೆಯ ಮೃತದೇಹದ ಮರು ಮರಣೋತ್ತರ ಪರೀಕ್ಷೆ (Re-Postmortem) ನಡೆಸುವಂತೆ ಪೋಷಕರು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ ಜನವರಿ 9, 2026ರಂದು ರಿಶೆಲ್ ಕ್ರಿಸ್ತೋದ್ ಡಿಸೋಜಾ ತನ್ನ ನಿವಾಸದಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಆಕೆಯ ತಂದೆ ಕಿಸ್ತೋದ್ ಫ್ರಾನ್ಸಿಸ್ ಡಿಸೋಜಾ ಅವರು ನೀಡಿದ ದೂರಿನ ಮೇರೆಗೆ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜನವರಿ 10ರಂದು ಕದ್ರಾದ ಸೇಂಟ್ ಅಂಥೋನಿ ಚರ್ಚ್ ಎದುರಿನ ಸ್ಮಶಾನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ಕೂಡ ನೆರವೇರಿಸಲಾಗಿತ್ತು.
ಆರಂಭದಲ್ಲಿ ಇದೊಂದು ಸಾಮಾನ್ಯ ಆತ್ಮಹ*ತ್ಯೆ ಪ್ರಕರಣ ಎನ್ನಲಾಗಿದ್ದರೂ, ಈಗ ಪೋಷಕರು ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಮೃತ ರಿಶೆಲ್ ತಾಯಿ ರೀನಾ ಕ್ರಿಸ್ತೋದ್ ಡಿಸೋಜಾ ಅವರು ಪೊಲೀಸರಿಗೆ ನೀಡಿರುವ ಮನವಿ ಪತ್ರದಲ್ಲಿ, 'ಮಗಳ ಮೃತದೇಹದ ಮೇಲೆ ಹಲವು ಗಾಯದ ಗುರುತುಗಳು ಕಂಡುಬಂದಿವೆ. ಆಕೆಯ ಮೇಲೆ ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ನಡೆದಿರುವ ಬಲವಾದ ಸಂಶಯ ನಮಗಿದೆ' ಎಂದು ಉಲ್ಲೇಖಿಸಿದ್ದಾರೆ.
ಈಗಾಗಲೇ ಒಮ್ಮೆ ಮರಣೋತ್ತರ ಪರೀಕ್ಷೆ ನಡೆದಿದ್ದರೂ, ಸತ್ಯಾಸತ್ಯತೆ ಹೊರಬರಲು ಮತ್ತು ನ್ಯಾಯ ಸಿಗಲು ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ ಎಂದು ಕುಟುಂಬಸ್ಥರು ಅಭಿಪ್ರಾಯಪಟ್ಟಿದ್ದಾರೆ. 'ಮಗಳನ್ನು ಸಮಾಧಿಯಿಂದ ಹೊರತೆಗೆದು ಮರು ಪರೀಕ್ಷೆ ನಡೆಸಲು ಕುಟುಂಬದ ಎಲ್ಲ ಸದಸ್ಯರ ಒಪ್ಪಿಗೆಯಿದೆ' ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಜೆಡಿಎಸ್ ನಾಯಕಿಯೊಬ್ಬರ ಪುತ್ರನ ಹೆಸರಿರುವುದು ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಭಾವಿ ವ್ಯಕ್ತಿಗಳ ಶಾಮೀಲಾತಿ ಇರುವುದರಿಂದ ತನಿಖೆ ಹಾದಿ ತಪ್ಪಬಾರದು ಎಂಬುದು ಸಂತ್ರಸ್ತ ಕುಟುಂಬದ ಆತಂಕವಾಗಿದೆ. ಪೊಲೀಸರು ಈ ಮನವಿಯನ್ನು ಆಧರಿಸಿ ಮುಂದಿನ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.