ಬೀದರ್ ವಿಮಾನ ಸಂಚಾರಕ್ಕೆ ಸಂಕಷ್ಟದ ಭೀತಿ, ಸಿಎಂ ಡಿಕೆಶಿಗೆ ಪತ್ರ ಬರೆದ ಸಚಿವ ಈಶ್ವರ್ ಖಂಡ್ರೆ

Published : Jun 10, 2026, 07:20 PM IST
Bengaluru Bidar flight timings

ಸಾರಾಂಶ

ಸ್ಟಾರ್ ಏರ್ ಸಂಸ್ಥೆಯು ಬೆಂಗಳೂರು-ಬೀದರ್ ವಿಮಾನದ ಸಮಯವನ್ನು ಮುಂಜಾನೆಯಿಂದ ಮಧ್ಯಾಹ್ನಕ್ಕೆ ಬದಲಾಯಿಸಿದೆ. ಈ ಹೊಸ ವೇಳಾಪಟ್ಟಿಯು ಪ್ರಯಾಣಿಕರಿಗೆ ಅನಾನುಕೂಲಕರವಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ಹಳೆಯ ವೇಳಾಪಟ್ಟಿಯನ್ನೇ ಮರುಸ್ಥಾಪಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. 

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಬೀದರ್ ನಡುವಿನ ವಿಮಾನ ಸೇವೆಯ ವೇಳಾಪಟ್ಟಿ ಬದಲಾವಣೆಯಿಂದ ಸಾರ್ವಜನಿಕರಿಗೆ ಭಾರಿ ಅನಾನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ವಿಮಾನಯಾನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ, ಹಳೆಯ ವೇಳಾಪಟ್ಟಿಯಂತೆಯೇ ಮುಂಜಾನೆಯ ಸೇವೆಯನ್ನು ಮುಂದುವರಿಸಲು ಸೂಚಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಈಶ್ವರ್ ಖಂಡ್ರೆ ಪತ್ರ ಬರೆದಿದ್ದಾರೆ.

ಸ್ಟಾರ್ ಏರ್ ಖಾಸಗಿ ವಿಮಾನಯಾನ ಸಂಸ್ಥೆ

ಖಾಸಗಿ ವಿಮಾನಯಾನ ಸಂಸ್ಥೆಯಾದ ‘ಸ್ಟಾರ್ ಏರ್’ ಜೂನ್ 1ರಿಂದ ಬೆಂಗಳೂರು-ಬೀದರ್-ಬೆಂಗಳೂರು ನಡುವೆ ತನ್ನ ನೂತನ ವಿಮಾನ ಸೇವೆಯನ್ನು ಆರಂಭಿಸಿದೆ. ಆರಂಭಿಕ ವೇಳಾಪಟ್ಟಿಯ ಪ್ರಕಾರ, ಈ ವಿಮಾನವು ಮುಂಜಾನೆ 6:30ಕ್ಕೆ ಬೆಂಗಳೂರಿನಿಂದ ಹೊರಟು 7:45ಕ್ಕೆ ಬೀದರ್ ತಲುಪುತ್ತಿತ್ತು. ಅದೇ ರೀತಿ, ಬೆಳಗ್ಗೆ 8:15ಕ್ಕೆ ಬೀದರ್‌ನಿಂದ ಜಿಗಿದು 9:30ಕ್ಕೆ ಬೆಂಗಳೂರಿಗೆ ಹಿಂತಿರುಗುತ್ತಿತ್ತು. ಈ ಮುಂಜಾನೆಯ ಸಮಯವು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮತ್ತು ಉದ್ಯಮಿಗಳಿಗೆ ಬೆಂಗಳೂರಿನ ಅಧಿಕೃತ ಕೆಲಸಗಳಿಗಾಗಿ ಒಂದೇ ದಿನದಲ್ಲಿ ಬಂದು ಹೋಗಲು ಅತ್ಯಂತ ಅನುಕೂಲಕರವಾಗಿತ್ತು.

ಹೊಸ ವೇಳಾಪಟ್ಟಿಯಿಂದ ಪ್ರಯಾಣಿಕರ ಸಂಖ್ಯೆ ಇಳಿಕೆ ಭೀತಿ 

ಆದರೆ, ವಿಮಾನಯಾನ ಸಂಸ್ಥೆಯು ಜೂನ್ 10ರಿಂದ ಜಾರಿಗೆ ಬರುವಂತೆ ವಿಮಾನದ ಸಮಯವನ್ನು ಮಧ್ಯಾಹ್ನಕ್ಕೆ ಬದಲಾಯಿಸಿದೆ. ಹೊಸ ವೇಳಾಪಟ್ಟಿಯಂತೆ, ಮಧ್ಯಾಹ್ನ 12:30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 1:45ಕ್ಕೆ ಬೀದರ್ ತಲುಪಲಿದೆ. ತದನಂತರ ಮಧ್ಯಾಹ್ನ 2:30ಕ್ಕೆ ಬೀದರ್‌ನಿಂದ ಹೊರಟು 3:30ಕ್ಕೆ ಬೆಂಗಳೂರಿಗೆ ಬರಲಿದೆ.

 ಹೊಸದಾಗಿ ನಿಗದಿಪಡಿಸಲಾಗಿರುವ ಮಧ್ಯಾಹ್ನದ ವೇಳಾಪಟ್ಟಿಯಿಂದಾಗಿ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಈ ಸಮಯ ಬದಲಾವಣೆಯಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಇದು ವಿಮಾನಯಾನದ ಮೂಲ ಉದ್ದೇಶವನ್ನೇ ಹಳಿ ತಪ್ಪಿಸುತ್ತದೆ ಎಂಬುದು ಸಚಿವ ಈಶ್ವರ್ ಖಂಡ್ರೆ ಅವರ ವಾದವಾಗಿದೆ.

ಹೀಗಾಗಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯನ್ನೂ ಹೊಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಕ್ಷಣವೇ ಮಧ್ಯಪ್ರವೇಶಿಸಬೇಕು. ಸ್ಟಾರ್ ಏರ್ ಸಂಸ್ಥೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಮೊದಲಿನ ಮುಂಜಾನೆಯ ವೇಳಾಪಟ್ಟಿಯನ್ನೇ ಮರುಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಬರೀ 16 ವರ್ಷಕ್ಕೆ ಇನ್ನೊಂದು ಜಲಾಶಯಕ್ಕೆ ಬಲಿಯಾದ ಅದ್ಬುತ ಹಿರೇಭಾಸ್ಕರ ಡ್ಯಾಮ್‌, ವರ್ಷಕ್ಕೆ ಒಮ್ಮೆ ಮಾತ್ರ ಕಾಣುವ ಸೋಜಿಗ!
ಲಂಚದ ಹಣದೊಂದಿಗೆ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಸರ್ವೇಯರ್; ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಹೈಡ್ರಾಮಾ!