ಶಕ್ತಿ ಯೋಜನೆಯಡಿ BMTC ಕಂಡಕ್ಟರ್‌ನಿಂದ ಯುಪಿಐ ಟಿಕೆಟ್ ವ್ಯವಸ್ಥೆ ದುರ್ಬಳಕೆ?; ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್!

Published : Jun 10, 2026, 06:19 PM IST
BMTC

ಸಾರಾಂಶ

ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್‌ವೊಬ್ಬರು ಸತತವಾಗಿ ಟಿಕೆಟ್‌ಗಳನ್ನು ಪ್ರಿಂಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು 'ಶಕ್ತಿ ಯೋಜನೆ'ಯ ದುರ್ಬಳಕೆ ಎಂಬ ಆರೋಪಕ್ಕೆ ಕಾರಣವಾಗಿದ್ದು, ಸಾರ್ವಜನಿಕರು ಮತ್ತು ನೆಟ್ಟಿಗರ ನಡುವೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. 

ಬೆಂಗಳೂರು (ಜೂ.10): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುಪಿಐ (UPI) ಆಧಾರಿತ ಟಿಕೆಟ್ ವ್ಯವಸ್ಥೆಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಕಂಡಕ್ಟರ್‌ 'ಶಕ್ತಿ ಯೋಜನೆ'ಯಡಿ (Shakti Scheme) ಟಿಕೆಟ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾದ ಆಘಾತಕಾರಿ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ಕ್ಲಿಪ್‌ನಲ್ಲಿ, ಬಿಎಂಟಿಸಿ ಕಂಡಕ್ಟರ್‌ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರವನ್ನು (ETM) ಸತತವಾಗಿ ಆಪರೇಟ್ ಮಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ಯಂತ್ರದಿಂದ ಸಾಲು ಸಾಲಾಗಿ ಹತ್ತಾರು 'ಟಿಕೆಟ್‌ಗಳು' ಪ್ರಿಂಟ್ ಆಗಿ ಹೊರಬರುತ್ತಿರುತ್ತವೆ. ಆದರೆ, ಆ ಟಿಕೆಟ್‌ಗಳನ್ನು ಬಸ್‌ನಲ್ಲಿರುವ ಯಾವುದೇ ಪ್ರಯಾಣಿಕರಿಗೆ ನೀಡದೆ, ನಿರ್ವಾಹಕರೇ ತಮ್ಮ ಬಳಿ ಇಟ್ಟುಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಟ್ವಿಟರ್‌ನಲ್ಲಿ ಸಾರ್ವಜನಿಕರ ದೂರು!

ಈ ವಿಡಿಯೋವನ್ನು 'ಬೆಂಗಳೂರು ಸಿವಿಕ್' (Bengaluru Civic) ಎಂಬ ಹೆಸರಿನ ಎಕ್ಸ್ ಯೂಸರ್ ಹಂಚಿಕೊಂಡಿದ್ದು, BMTC ಸಂಸ್ಥೆಯನ್ನು ಟ್ಯಾಗ್ ಮಾಡಿದ್ದಾರೆ. 'ಇಂದು ಕಂಡಕ್ಟರ್ ಒಬ್ಬರು ಸಾರಾಸಗಟಾಗಿ ರಾಂಡಮ್‌ ಟಿಕೆಟ್‌ಗಳನ್ನು ಜನರೇಟ್ ಮಾಡುತ್ತಿದ್ದ ಅನುಮಾನಾಸ್ಪದ ನಡವಳಿಕೆಯನ್ನು ನಾನು ಗಮನಿಸಿದ್ದೇನೆ... @BMTC_BENGALURU ಈ ವಿಷಯದ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸಿ ಪರಿಶೀಲಿಸಬೇಕು" ಎಂದು ಅವರು ಬರೆದುಕೊಂಡಿದ್ದಾರೆ.

ಟ್ವೀಟ್ ಮಾಡಿರುವ ವ್ಯಕ್ತಿಯ ಪ್ರಕಾರ, ಈ ಘಟನೆಯು ದಕ್ಷಿಣ ಬೆಂಗಳೂರಿನ ಕಾಮಾಕ್ಯ (Kamakya) ಬಳಿ ಬೆಳಗ್ಗೆ ಸುಮಾರು 10 ಗಂಟೆಗೆ ನಡೆದಿದೆ. ಅಲ್ಲದೆ, 'ಇದು ಬಹುತೇಕ ಎಲ್ಲಾ ಬಸ್‌ಗಳಲ್ಲೂ ನಡೆಯುತ್ತದೆ. ಈ ಬಸ್‌ನ ಸಂಖ್ಯೆ 410FG ಆಗಿದೆ. ಬಸ್ ತನ್ನ ನಿಗದಿತ ಆರಂಭಿಕ ಪಾಯಿಂಟ್ ಅನ್ನು ಸ್ಕಿಪ್ ಮಾಡಿದಾಗ ಇಂತಹ ಕೆಲಸಗಳು ನಡೆಯುತ್ತವೆ" ಎಂದೂ ಅವರು ಆರೋಪಿಸಿದ್ದಾರೆ.

ವಿವರ ಕೇಳಿದ ಬಿಎಂಟಿಸಿ; ಪುರಾವೆ ಒದಗಿಸಿದ ಯೂಸರ್

ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬಿಎಂಟಿಸಿ (BMTC) ಸಂಸ್ಥೆಯು ಅದಕ್ಕೆ ಅಧಿಕೃತವಾಗಿ ಪ್ರತಿಕ್ರಿಯಿಸಿದೆ. ಅಗತ್ಯ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಘಟನೆ ನಡೆದ ದಿನಾಂಕ, ಸಮಯ, ಟಿಕೆಟ್ ವಿವರ ಅಥವಾ ವಾಹನದ ಸಂಖ್ಯೆಯನ್ನು ಹಂಚಿಕೊಳ್ಳುವಂತೆ ದೂರುದಾರರಿಗೆ ಸೂಚಿಸಿದೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ದೂರುದಾರ, ತಾವು ಅದೇ ಬಸ್‌ನಲ್ಲಿ ಪ್ರಯಾಣಿಸಿದ ಟಿಕೆಟ್‌ನ ಪ್ರತಿಯನ್ನು ಪೋಸ್ಟ್ ಮಾಡಿದ್ದಾರೆ. ಆ ಟಿಕೆಟ್ ಕತ್ರಿಗುಪ್ಪೆಯಿಂದ ಬನಶಂಕರಿಗೆ ಪ್ರಯಾಣಿಸಲು ವಿತರಿಸಲಾಗಿತ್ತು. ತಮಗೆ ಟಿಕೆಟ್ ನೀಡುವ ಮುನ್ನವೇ ಕಂಡಕ್ಟರ್‌ ಸಾಲು ಸಾಲಾಗಿ ಇಂತಹ "ನಕಲಿ ಟಿಕೆಟ್‌ಗಳನ್ನು" ಯಂತ್ರದಿಂದ ಹೊರತೆಗೆದಿದ್ದರು ಎಂದು ಅವರು ತಮ್ಮ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ.

ಕಂಡಕ್ಟರ್‌ ಬೆಂಬಲಕ್ಕೆ ನಿಂತ ನೆಟ್ಟಿಗರು: ಅಸಲಿ ಕಾರಣವೇನು?

ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆ, ಅನೇಕ ಯೂಸರ್‌ಗಳು ಕಂಡಕ್ಟರ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣುತ್ತಿರುವುದು ಅಕ್ರಮವಲ್ಲ, ಅದಕ್ಕಿರುವ ತಾಂತ್ರಿಕ ಕಾರಣಗಳನ್ನು ಅವರು ವಿವರಿಸಿದ್ದಾರೆ. "ಕಂಡಕ್ಟ್‌ ಇದನ್ನು ಯಾಕೆ ಮಾಡುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ಖಂಡಿತ ಬೇರೆ ಇರಬೇಕು. ಒಂದು ವೇಳೆ ಸುಮ್ಮನೆ ಟಿಕೆಟ್ ತೆಗೆದರೆ, ದಿನದ ಕೊನೆಯಲ್ಲಿ ಟಿಕೆಟ್ ಬೆಲೆಗೆ ತಕ್ಕ ಹಣವನ್ನು ಕಂಡಕ್ಟರ್ ತಮ್ಮ ಸ್ವಂತ ಜೇಬಿನಿಂದ ತುಂಬಬೇಕಾಗುತ್ತದೆಯಲ್ಲವೇ?" ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ದೂರುದಾರ, "ಇದು ಮಹಿಳೆಯರ ಉಚಿತ ಪ್ರಯಾಣದ (ಶಕ್ತಿ ಯೋಜನೆ) ಅಡಿಯಲ್ಲಿದೆ.. ಹಾಗಾಗಿ ಕಂಡಕ್ಟರ್ ಹಣ ಪಾವತಿಸಬೇಕಾಗಿಲ್ಲ. ಆದರೆ ಈ ಮೂಲಕ ಸರ್ಕಾರಕ್ಕೆ ಯೋಜನೆಯ ಯಶಸ್ಸನ್ನು ತೋರಿಸಲು ದೊಡ್ಡ ಮಟ್ಟದ ಅಂಕಿ-ಅಂಶಗಳು ಸಿಗುತ್ತವೆ. ಅಥವಾ ಬಿಎಂಟಿಸಿ ಸಿಬ್ಬಂದಿ ತಮ್ಮ ಬಸ್‌ಗೆ ಎಷ್ಟು ಜನ ಹತ್ತಿದ್ದಾರೆ ಮತ್ತು ತಾವು ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದೇವೆ ಎಂದು ಮೇಲಧಿಕಾರಿಗಳಿಗೆ ತೋರಿಸಿಕೊಳ್ಳಲು ಹೀಗೆ ಮಾಡಿರಬಹುದು" ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. 'ಏನೇ ಆದರೂ ಈ ಹೆಚ್ಚುವರಿ ಟಿಕೆಟ್ ಆದಾಯವು ನೇರವಾಗಿ ಬಿಎಂಟಿಸಿ ಖಾತೆಗೆ ಹೋಗುತ್ತದೆಯೇ ಹೊರತು ಕಂಡಕ್ಟರ್ ಜೇಬಿಗಲ್ಲವಲ್ಲ?" ಎಂದಿದ್ದಾರೆ.

'ಇಲ್ಲಿ ಯಾವ ಹಗರಣ ಇದೆ ಎಂದು ನನಗಂತೂ ತಿಳಿಯುತ್ತಿಲ್ಲ. ಅಂತಿಮ ಲೆಕ್ಕಾಚಾರ ಒಪ್ಪಿಸುವಾಗ ಕಂಡಕ್ಟರ್ ತಾವೇ ಹಣ ಕಟ್ಟಬೇಕಾಗುವುದರಿಂದ ಅವರೇ ನಷ್ಟ ಅನುಭವಿಸುತ್ತಾರೆ. ದೂರು ನೀಡಿದ ವ್ಯಕ್ತಿ ಕೇವಲ ಅಟೆಂಷನ್ ಪಡೆಯಲು ಅಥವಾ ಅನುಮಾನದ ಹುಚ್ಚಿನಲ್ಲಿ ಹೀಗೆ ಮಾಡುತ್ತಿರುವಂತೆ ಕಾಣುತ್ತಿದೆ' ಎಂದು ಕಟುವಾಗಿ ಟೀಕಿಸಿದ್ದಾರೆ.

ತಾಂತ್ರಿಕ ಕಾರಣ ನೀಡಿದ ನೆಟ್ಟಿಗರು

ಮತ್ತೊಬ್ಬ ಯೂಸರ್‌ ತಾಂತ್ರಿಕ ವಿವರಣೆ ನೀಡಿ, 'ಬಸ್ ಡಿಪೋಗೆ ಹೋಗುವ ಮುನ್ನ ಗಳಿಕೆಯ ಮೊತ್ತವನ್ನು ಲೆಕ್ಕಾಚಾರ ಮಾಡಲು ನಿರ್ವಾಹಕರು ಈ ಹಿಂದೆ ಜನರೇಟ್ ಮಾಡಿದ ಟಿಕೆಟ್‌ಗಳ 'ಟ್ರಿಪ್ ಸ್ಟೇಜ್ ಚಾರ್ಟ್' (Trip stage chart) ಅನ್ನು ಪ್ರಿಂಟ್ ತೆಗೆದುಕೊಳ್ಳುತ್ತಿರಬಹುದು" ಎಂದು ಹೇಳಿದ್ದಾರೆ.

'ನನ್ನ ಪ್ರಕಾರ, ಅವರು ಇಟಿಎಂ ಮೆಷಿನ್‌ನ ಬ್ಯಾಚ್ ಸೆಟಲ್ (Batch settling) ಮಾಡುತ್ತಿದ್ದಾರೆ. ಆ ಚಾರ್ಜ್ ಸ್ಲಿಪ್‌ನ ಗಾತ್ರವನ್ನು ನೋಡಿ. ಬ್ಯಾಚ್ ಸೆಟಲ್ ಮಾಡುವುದಕ್ಕೂ ಮತ್ತು ಹೊಸ ಟ್ರಾನ್ಸಾಕ್ಷನ್ ಮಾಡುವುದಕ್ಕೂ ವ್ಯತ್ಯಾಸವಿದೆ, ಆದರೆ ಎರಡರಲ್ಲೂ ಚಾರ್ಜ್ ಸ್ಲಿಪ್ ಪ್ರಿಂಟ್ ಆಗುತ್ತದೆ. ಇದನ್ನು ಅವರ ಪಿಒಎಸ್ ಐಡಿ (POS ID) ಮೂಲಕ ಸುಲಭವಾಗಿ ದೃಢೀಕರಿಸಬಹುದು" ಎಂದು ಸ್ಪಷ್ಟಪಡಿಸಿದ್ದಾರೆ.

"ತಪ್ಪು ಎಂದು ತೀರ್ಪು ನೀಡುತ್ತಿಲ್ಲ"

ನೆಟ್ಟಿಗರ ತಾಂತ್ರಿಕ ವಿವರಣೆಗಳ ನಂತರ ದೂರುದಾರ ಕೊಂಚ ಮೃದುವಾಗಿದ್ದು, "ಖಂಡಿತ... ನಾನು ಎಲ್ಲಾ ವಿವರಗಳನ್ನು ಬಿಎಂಟಿಸಿಗೆ ನೀಡಿದ್ದೇನೆ. ಒಂದು ವೇಳೆ ಇದು ಯಾವುದೇ ಅಕ್ರಮ ಚಟುವಟಿಕೆ ಆಗಿರದೆ, ಸಾಮಾನ್ಯ ಪ್ರಕ್ರಿಯೆಯೇ ಆಗಿದ್ದರೆ ಅದು ತುಂಬಾ ಒಳ್ಳೆಯದು. ಏಕೆಂದರೆ ಸಿಬ್ಬಂದಿಗೆ ಮಾತ್ರ ಅವರ ಕೆಲಸದ ಜವಾಬ್ದಾರಿ ಚೆನ್ನಾಗಿ ತಿಳಿದಿರುತ್ತದೆ. ಯಾವುದು ಸರಿ ಯಾವುದು ತಪ್ಪು ಎಂದು ತೀರ್ಪು ನೀಡಲು ನಾವು ನ್ಯಾಯಾಧೀಶರಲ್ಲ. ಆದರೆ ಆ ಸಮಯದಲ್ಲಿ ನಾನು ನೋಡಿದ ದೃಶ್ಯ ಸ್ವಲ್ಪ ಅನುಮಾನಾಸ್ಪದವಾಗಿ ಕಂಡಿದ್ದರಿಂದ ವರದಿ ಮಾಡಬೇಕಾಯಿತು ಅಷ್ಟೇ" ಎಂದು ಬರೆದುಕೊಂಡಿದ್ದಾರೆ.

 

 

 

PREV
Read more Articles on
click me!

Recommended Stories

ಗ್ರೇಟರ್ ಬೆಂಗಳೂರು ಆಸ್ತಿ ತೆರಿಗೆ: ಪ್ರಸಕ್ತ ಹಣಕಾಸು ವರ್ಷದ ಎರಡೂವರೆ ತಿಂಗಳಲ್ಲೇ ದಾಖಲೆಯ ₹2,949 ಕೋಟಿ ಸಂಗ್ರಹ
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ 2028ಕ್ಕೆ ಪೂರ್ಣ: ರೈಲ್ವೆ ರಾಜ್ಯ ಸಚಿವ ಸೋಮಣ್ಣ