ಹಾವೇರಿ: ನಿವೃತ್ತಿಯಾಗಿ ಮರಳಿದ ಯೋಧ ಶೆಡ್‌ನಲ್ಲಿ ಸ್ವಯಂ ಕ್ವಾರಂಟೈನ್‌

By Kannadaprabha News  |  First Published Sep 6, 2020, 2:59 PM IST

ಗ್ರಾಮದ ಹೊರವಲಯದ ಶೆಡ್‌ವೊಂದರಲ್ಲಿ ಸ್ವಯಂ ಕ್ವಾರಂಟೈನ್‌ ಆದ ನಿವೃತ್ತ ಯೋಧ| 17 ವರ್ಷ ಸೇನೆಯಲ್ಲಿ ಸೇವೆಯನ್ನು ಪೂರ್ಣಗೊಳಿಸಿ ನಿವೃತ್ತಿಯಾದ ಲಿಂಗರಾಜ ಕುಬೇರಪ್ಪ ಶಿವಶಿಂಪರ| 


ಗುತ್ತಲ(ಸೆ.06): ದೇಶದ ಗಡಿ ಕಾಯುವ ವೀರ ಯೋಧನೊಬ್ಬ 17 ವರ್ಷ ಸೇನೆಯಲ್ಲಿ ಸೇವೆಯನ್ನು ಪೂರ್ಣಗೊಳಿಸಿ ನಿವೃತ್ತಿಯೊಂದಿಗೆ ಮರಳಿ ಊರಿಗೆ ಬಂದು ಗ್ರಾಮದ ಹೊರವಲಯದ ಶೆಡ್‌ವೊಂದರಲ್ಲಿ ಸ್ವಯಂ ಕ್ವಾರಂಟೈನ್‌ ಆಗುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಮೀಪದ ಕೋಡಬಾಳ ಗ್ರಾಮದ ಹೊರವಲಯದ ತಗಡಿನ ಶೆಡ್‌ವೊಂದರಲ್ಲಿ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿರುವ ಗದಗ ಜಿಲ್ಲೆ ಕೋಟುಮಚಗಿ ಗ್ರಾಮದ ಯೋಧ ಲಿಂಗರಾಜ ಕುಬೇರಪ್ಪ ಶಿವಶಿಂಪರ (ಹಾಲಿವಸ್ತಿ ಕೋಡಬಾಳ) ಸತತವಾಗಿ 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಆ. 31ರಂದು ನೆರೆಯ ಮಹಾರಾಷ್ಟ್ರದ ನಾಸಿಕ್‌ನಿಂದ ಸೇವೆಯಿಂದ ನಿವೃತ್ತರಾಗಿ ಆಗಮಿಸಿದ್ದಾರೆ. ಆದರೆ ಕೊರೋನಾ ಸೋಂಕು ಅಥವಾ ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ 14 ದಿನಗಳ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಪ್ರತಿದಿನ ತಮ್ಮ ಮನೆಯಿಂದಲೇ ಊಟವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಪಡೆಯುತ್ತಿದ್ದಾರೆ. ಹೀಗೆ ಕೊರೋನಾ ಲಕ್ಷಣವಿಲ್ಲದಿದ್ದರೂ ಮುಂಜಾಗ್ರತೆ ವಹಿಸಿರುವುದಕ್ಕೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Tap to resize

Latest Videos

ಹಾವೇರಿ: 5 ತಿಂಗಳಿಂದ ಬಾರದ ವೇತನ, ಮನನೊಂದು ವ್ಯಕ್ತಿ ಆತ್ಮಹತ್ಯೆ

ಈ ಕುರಿತು ಮಾತನಾಡಿದ ಗ್ರಾಮಸ್ಥ ಲೊಕೇಶ ಕುಬಸದ, ಯೋಧರಲ್ಲಿನ ಶಿಸ್ತು, ಸರ್ಕಾರದ ನಿಯಮಗಳ ಪಾಲನೆ ಅನುಕರಣೀಯವಾಗಿದೆ. ಸ್ವತಃ ಯೋಧರೆ ಮುಂಜಾಗ್ರತೆ ವಹಿಸಿ ಗ್ರಾಮದ ಹೊರವಲಯದಲ್ಲಿ ವಾಸ್ತವ್ಯ ಮಾಡಿರುವುದು ಪ್ರಶಂಸನೀಯ. ಕೊರೋನಾ ಸಮಯದಲ್ಲಿ ಸೋಂಕು ಹರಡದಂತೆ ಸರ್ಕಾರ ನಿರ್ಬಂಧ ಹೊರಡಿಸಿದ್ದರೂ ಇಲಾಖೆಯ ಕಣ್ಣು ತಪ್ಪಿಸಿ ಹೊರಗಡೆ ಅಲೆದಾಡುವವರು ಇಂತಹ ಯೋಧರನ್ನು ನೋಡಿ ಕಲಿಯಬೇಕು ಎಂದರು.
ಕರ್ತವ್ಯ ನಿರ್ವಹಿಸಿರುವುದು:

2003ರಲ್ಲಿ ಭಾರತೀಯ ಸೇನೆಗೆ ಸೇರಿದ್ದು 17 ವರ್ಷಗಳ ಅವಧಿಯನ್ನು ಸಂಪೂರ್ಣವಾಗಿ ನಿರ್ವಹಿಸಿದ್ದಾರೆ. ಈ ಸಮಯದಲ್ಲಿ ಆಂಧ್ರಪ್ರದೇಶ, ರಾಜಸ್ಥಾನ, ಜಮ್ಮು-ಕಾಶ್ಮೀರ, ಪಂಜಾಬ ಸೇರಿದಂತೆ ವಿವಿಧೆಡೆಗಳಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ.
ಕೋವಿಡ್‌-19 ತಪಾಸಣೆಗೆ ಒಳಗಾಗಿದ್ದು, ಕೊರೋನಾ ಸೋಂಕು ಹಾಗೂ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಕೂಡಾ ನನ್ನಿಂದ ಗ್ರಾಮಸ್ಥರಿಗೆ ಹಾಗೂ ಕುಟುಂಬದವರಿಗೆ ಆತಂಕ ಉಂಟಾಗದಂತೆ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ಅಲ್ಲದೇ ಕೊರೋನಾವನ್ನು ಭಾರತದಿಂದ ಹೋಗಲಾಡಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ನಿವೃತ್ತ ಯೋಧ ಲಿಂಗರಾಜ ಕುಬೇರಪ್ಪ ಶಿವಶಿಂಪರ ಅವರು ಹೇಳಿದ್ದಾರೆ. 
 

click me!