ಕೆಎಟಿ ನ್ಯಾಯಾಲಯ ಆದೇಶ ಹೊರಡಿಸಿದ್ದರೂ ಪೋಸ್ಟಿಂಗ್ ನೀಡದ ಇಲಾಖೆ| 15 ತಿಂಗಳಿನಿಂದ ಬರಬೇಕಾದ .15 ಲಕ್ಷ ವೇತನವೂ ಇಲ್ಲದ ಸ್ಥಿತಿ| ದಾವಣಗೆರೆಯಲ್ಲಿ ಆಟೋ ಚಾಲನೆಗೆ ಇಳಿದ ಬಳ್ಳಾರಿ ವೈದ್ಯ|
ದಾವಣಗೆರೆ(ಸೆ.06): ಜನರ ಆರೋಗ್ಯ ಸೇವೆಗೆ ಶ್ರಮಿಸಬೇಕಾಗಿದ್ದ ಸರ್ಕಾರಿ ವೈದ್ಯನೊಬ್ಬ ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ತುತ್ತಾಗಿ ವೃತ್ತಿ ಘನತೆಯನ್ನೇ ಮರೆತು, ಜೀವಿಸಬೇಕಾದ ದಾರುಣ ಪ್ರಸಂಗವೊಂದು ಜಿಲ್ಲೆಯಲ್ಲಿ ನಡೆದಿದೆ.
ವೈದ್ಯ ಕಂ ಆಟೋ ಚಾಲಕ ಡಾ. ರವೀಂದ್ರ ಎಂಬುವರೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಲುಕಿರುವ ಪ್ರತಿಭಾವಂತ ವೈದ್ಯ!. ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆರ್‌ಸಿಎಚ್ 24 ವರ್ಷಗಳಿಂದಲೂ ಸರ್ಕಾರಿ ವೈದ್ಯನಾಗಿ ಸೇವೆ ಸಲ್ಲಿಸಿದ್ದಾರೆ. ತಮಗೆ ಬರಬೇಕಾದ 15 ಲಕ್ಷಕ್ಕೂ ಅಧಿಕ ವೇತನ ನೀಡದ, ಪೋಸ್ಟಿಂಗ್ ಸಹ ನೀಡದ ಅಧಿಕಾರಿಗಳ ವರ್ತನೆಗೆ ಯಾವ ಪರಿ ಬೇಸತ್ತಿದ್ದಾರೆಂದರೆ, ಆಟೋ ಚಾಲನೆಗೆ ಇಳಿದಿದ್ದಾರೆ. ಇದೀಗ ಕೆಲಸ ಬಿಟ್ಟು, ಆಟೋ ರಿಕ್ಷಾ ಮೇಲೆ ‘ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ’ ಎಂಬುದಾಗಿ ಬರೆಸಿಕೊಂಡಿದ್ದಾರೆ. ಇದು ಅವರಲ್ಲಿನ ಆಕ್ರೋಶಕ್ಕೆ ಸಾಕ್ಷಿ.
'ಅಶ್ವಪ್ರೇಮಿ' ನಟ ದರ್ಶನ್, ಎಸ್ಸೆಸ್ಸೆಂ ಸಮಾಗಮ : ರಾಜಸ್ಥಾನದಿಂದ ತಂದ ಕುದುರೆಗಳ ವೀಕ್ಷಣೆ
ಡಾ. ರವೀಂದ್ರ ಅವರು ವಿನಾಕಾರಣ ಅಮಾನತು ಶಿಕ್ಷೆ ಅನುಭವಿಸಿದ್ದಾರೆ. ತಮಗೆ ಬರಬೇಕಾದ . 15 ಲಕ್ಷಕ್ಕೂ ಅಧಿಕ ವೇತನ ಬಂದಿಲ್ಲ. ಇದರಿಂದ ಅವರು ನೊಂದಿದ್ದಾರೆ. ಕೆಎಟಿ ನ್ಯಾಯಾಲಯದಲ್ಲಿ 2 ಸಲ ತಮ್ಮ ಪರವಾಗಿ ತೀರ್ಪು ನೀಡಿದ್ದರೂ, ತಮಗೆ ಪೋಸ್ಟಿಂಗ್ ಹಾಗೂ ವೇತನ ನೀಡಿಲ್ಲ ಎನ್ನುತ್ತಾರೆ. ಜನವರಿ ತಿಂಗಳಲ್ಲಿಯೇ ಪೋಸ್ಟ್ ನೀಡುವಂತೆ ಕೆಎಟಿ ಆದೇಶ ಮಾಡಿದೆ. ಐಎಎಸ್ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳ ದುರಾಡಳಿತ, ನಿರ್ಲಕ್ಷ್ಯದ ಬಗ್ಗೆ ಪ್ರಧಾನಿ, ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು, ತಮ್ಮ ಅಳಲನ್ನು ಡಾ. ರವೀಂದ್ರ ತೋಡಿಕೊಂಡಿದ್ದಾರೆ. ವೈದ್ಯನಾಗಿ ಆಟೋ ಚಾಲನೆಗೆ ಇಳಿಯುವಂಥ ಸ್ಥಿತಿಗೆ ತಲುಪಿರುವ ಡಾ.ರವೀಂದ್ರ ಅವರ ಕುರಿತು ಸಾರ್ವಜನಿಕರಲ್ಲೂ ಈಗ ತೀವ್ರ ಚರ್ಚೆಯಾಗುತ್ತಿದೆ.
ರವೀಂದ್ರ ಅವರ ಅಮಾನತು ಪ್ರಕರಣ ನಾನು ಡಿಎಚ್‌ಒ ಆಗಿ ಬಳ್ಳಾರಿಗೆ ಬರುವ ಮುಂಚೆಯೇ ನಡೆದ ಘಟನೆ. ರವೀಂದ್ರ ಪರವಾಗಿ ನ್ಯಾಯಾಲಯ ಆದೇಶ ನೀಡಿರುವುದರಿಂದ ಅವರಿಗೆ ಅನುಕೂಲ ಮಾಡಿಕೊಡುವ ದಿಸೆಯ ಪ್ರಯತ್ನಗಳಾಗಬೇಕು ಎಂದು ನಾನೊಬ್ಬ ಸರ್ಕಾರಿ ನೌಕರನಾಗಿ ಮನವಿ ಮಾಡುವೆ ಎಂದು ಡಿಎಚ್‌ಒ ಡಾ. ಜನಾರ್ದನ ಅವರು ತಿಳಿಸಿದ್ದಾರೆ.