
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನಕಲಕುವ ಹತ್ಯಾ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಗರದ ಅವಲಹಳ್ಳಿ ಪ್ರದೇಶದಲ್ಲಿರುವ Virtuoso ಅಪಾರ್ಟ್‌ಮೆಂಟ್ನಲ್ಲಿ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಆರೋಪದಲ್ಲಿ ನಿವೃತ್ತ ಇಸ್ರೋ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಾದ ಮಹಿಳೆಯನ್ನು ಸಂಧ್ಯಾ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ನಾಗಲೇಶ್ವರರಾವ್ ಕೊಲೆಗಾರ. ಬೆಳಿಗ್ಗೆ ಸುಮಾರು 11 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಪತ್ನಿಯೊಂದಿಗೆ ಮನೆಯೊಳಗೆ ಇದ್ದ ವೇಳೆ ನಾಗಲೇಶ್ವರರಾವ್ ಆಕೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ.
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ನಾಗಲೇಶ್ವರರಾವ್ ಆತಂಕಕಾರಿ ಹೇಳಿಕೆ ನೀಡಿದ್ದಾನೆ. ನಾನು ವೃದ್ಧನಾಗಿದ್ದೇನೆ. ನಾನು ಸತ್ತ ಬಳಿಕ ನನ್ನ ಹೆಂಡತಿಯನ್ನು ನೋಡಿಕೊಳ್ಳೋದು ಯಾರು? ಆಕೆಗೆ ಸಂಬಂಧಿಕರೂ ಇಲ್ಲ. ಮುಂದಿನ ಜೀವನ ಹೇಗೆ ಸಾಗುತ್ತದೆ ಎಂಬ ಚಿಂತೆಯಿಂದಲೇ ಈ ಕೃತ್ಯ ಮಾಡಿದೆ ಎಂದು ಹೇಳಿದ್ದಾನೆ.
ಪೊಲೀಸರ ಪ್ರಕಾರ, ಆರೋಪಿ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸುತ್ತಿದ್ದು, ವಿಚಾರಣೆಯ ವೇಳೆ ಅಸಹಜವಾಗಿ ವರ್ತನೆ ಮಾಡುತ್ತಿದ್ದಾನೆ. ಆದರೆ ಈ ಎಲ್ಲ ಅಂಶಗಳನ್ನು ವೈದ್ಯಕೀಯ ಹಾಗೂ ಕಾನೂನು ಪರಿಶೀಲನೆಯ ಬಳಿಕವೇ ದೃಢಪಡಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಆರೋಪಿಯ ಹೇಳಿಕೆಗೆ ವಿರುದ್ಧವಾಗಿ, ದಂಪತಿಗೆ ಒಬ್ಬ ಮಗಳು ಇದ್ದು, ಆಕೆ ಅಮೆರಿಕಾದಲ್ಲಿ ವಾಸಿಸುತ್ತಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹೀಗಾಗಿ ಆರೋಪಿ ನೀಡಿರುವ ಹೇಳಿಕೆಗೆ ಸಾಮ್ಯತೆ ಇಲ್ಲದಿರುವುದು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಹೀಗಾಗಿ, ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ.
ಘಟನೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಅವಲಹಳ್ಳಿ ಪೊಲೀಸ್ ಠಾಣೆ ಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ. ಸದ್ಯ ಆರೋಪಿ ನಾಗಲೇಶ್ವರರಾವ್ ಅನ್ನು ಬಂಧನಕ್ಕೆ ಒಳಪಡಿಸಿ, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ನಿವೃತ್ತ ನೌಕರನಾಗಿದ್ದ ನಾಗಲೇಶ್ವರರಾವ್ ಹಿಂದೆ ISRO ನಲ್ಲಿ ಸೇವೆ ಸಲ್ಲಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.