20 ವರ್ಷಗಳಿಂದ ಜಮೀನಿಗಾಗಿ ಅಲೆದಾಡುತ್ತಿದ್ದು, ಈ ಬಾರಿ ಅಧಿಕಾರಿಗಳಿಗೆ ಮಾಜಿ ಸೈನಿಕರೋರ್ವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹಾವೇರಿ [ಜು.25]: ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡು ನಿವೃತ್ತಿಯಾಗಿರುವ ಯೋಧ ಮಹಮ್ಮದ್ ಖವಾಸ್ ಕಳೆದ 20 ವರ್ಷಗಳಿಂದ ಜಮೀನಿಗಾಗಿ ಸರ್ಕಾರಿ ಕಚೇರಿ ಅಲೆದಾಡುತ್ತಿದ್ದು ಈ ಬಾರಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜು.26ರೊಳಗಾಗಿ ಜಮೀನು ಮಂಜೂರು ಮಾಡಿಕೊಡದಿದ್ದರೆ ನಿಮ್ಮ ಕಚೇರಿ ಎದುರು ನಾನು ಏನು ಮಾಡಿಕೊಳ್ಳುತ್ತೇನೋ ಗೊತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಪ್ರತಿ ವರ್ಷ ಕಾರ್ಗಿಲ್ ವಿಜಯ ದಿವಸದ ನೆನಪಲ್ಲಿ ಜು.26ರಂದು ನೆನಪು ಮಾಡಿಕೊಂಡು ನಂತರ ಮರೆಯುತ್ತಿದ್ದೀರಿ. ಮಾಜಿ ಸೈನಿಕನಾಗಿ ಕಳೆದ 20 ವರ್ಷಗಳಿಂದ ತಹಸೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಅಲೆದಾಡುತ್ತಿದ್ದೇನೆ. ಯಾವೊಬ್ಬ ಅಧಿಕಾರಿಯೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಇಷ್ಟುವರ್ಷ ತಡವಾಗಿದ್ದರ ಬಗ್ಗೆ ತಮಗೆ ಗೊತ್ತಿಲ್ಲ. ಆದರೆ, ಇನ್ನೊಂದು ವಾರದೊಳಗಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉಪವಿಭಾಗಾಧಿಕಾರಿಗಳು ಭರವಸೆ ನೀಡಿರುವುದಾಗಿ ಮಹಮ್ಮದ್ ಖವಾಸ್ ತಿಳಿಸಿದ್ದಾರೆ.