ಗುಂಪು ಮನೆಗಳನ್ನು ನಿರ್ಮಿಸಲು ಸರ್ಕಾರಿ ಜಾಗ ಮೀಸಲಿಡಿ: ಪ್ರತಾಪ್‌ ಸಿಂಹ

By Kannadaprabha News  |  First Published Nov 15, 2022, 6:06 AM IST

ನಗರ ಪ್ರದೇಶದಲ್ಲಿ ಗುಂಪು ಮನೆಗಳನ್ನು ನಿರ್ಮಿಸಲು ಸರ್ಕಾರಿ ಜಾಗ ಮೀಸಲಿಡುವಂತೆ ಸಂಸದ ಪ್ರತಾಪ್‌ ಸಿಂಹ ಅವರು ಅಧಿಕಾರಿಗಳಿಗೆ ಸೂಚಿಸಿದರು.


  ಮೈಸೂರು (ನ.15): ನಗರ ಪ್ರದೇಶದಲ್ಲಿ ಗುಂಪು ಮನೆಗಳನ್ನು ನಿರ್ಮಿಸಲು ಸರ್ಕಾರಿ ಜಾಗ ಮೀಸಲಿಡುವಂತೆ ಸಂಸದ ಪ್ರತಾಪ್‌ ಸಿಂಹ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿವೇಶನ ರಹಿತರು, ಕೊಳಗೇರಿಗಳಲ್ಲಿ ವಾಸಿಸುತ್ತಿರುವವರಿಗೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗದ ಕಾರಣ ಗುಂಪು ಮನೆ ನಿರ್ಮಾಣ ಮಾಡಲು ಸರ್ಕಾರಿ ಭೂಮಿ ಮೀಸಲಿಡಬೇಕು ಎಂದರು.

Latest Videos

undefined

ನಿವೇಶನ ಇದ್ದು ಮನೆ ಇಲ್ಲದವರಿಗೆ (Prime Minister )  ಅವಾಸ್‌ ಯೋಜನೆಯಲ್ಲಿ ಮನೆ ಒದಗಿಸುವುದು ಮತ್ತು ನಿವೇಶನ ಇಲ್ಲದವರಿಗೆ (Group house) ಕಟ್ಟಲು ಯೋಜನೆ ರೂಪಿಸಬೇಕು. ಹಾಗೆಯೇ, ಏಕಲವ್ಯನಗರದ ಬಹುಮಹಡಿ ಕಟ್ಟಡದಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವವರನ್ನು ಖಾಲಿ ಮಾಡಿಸಿ, ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಎಂದು ಅವರು ಸೂಚಿಸಿದರು.

ಸ್ಲಂ ಬೋರ್ಡ್‌ ಇಇ ಹರೀಶ್‌ಕುಮಾರ್‌ ಮಾತನಾಡಿ, ಮೈಸೂರಿಗೆ 6301 ಮನೆಗಳು ಮಂಜೂರಾಗಿದ್ದು, ಈ ಪೈಕಿ 1189 ಮನೆಗಳ ನಿರ್ಮಾಣ ಪೂರ್ಣವಾಗಿದ್ದು, 5112 ಬಾಕಿ ಇದೆ. ಸ್ಲಂಗಳಲ್ಲಿ ಸರ್ವೆ ಮಾಡಿದಾಗ 14 ಸಾವಿರ ಮನೆಗಳಿಗೆ ಬೇಡಿಕೆ ಇದೆ ಎಂದು ಮಾಹಿತಿ ನೀಡಿದರು.

ನಗರ ಮತ್ತು ಗ್ರಾಮಾಂತರ ಪ್ರದೇಶ ಸೇರಿ ಒಟ್ಟು 64 ಸಾವಿರ ಮನೆಗಳಿಗೆ ಬೇಡಿಕೆ ಇದೆ. ಚಾಮುಂಡೇಶ್ವರಿ, ಚಾಮರಾಜ, ಕೃಷ್ಣರಾಜ ಕ್ಷೇತ್ರಗಳು ಸೇರಿ 7441 ಮನೆಗಳು ಮಂಜೂರಾಗಿದೆ. ಗೊರೂರು, ಲಲಿತಾದ್ರಿಪುರದಲ್ಲಿ ನಿರ್ಮಿಸಲಿರುವ ಅಪಾರ್ಚ್‌ಮೆಂಟ್‌ಗೆ ಭೂಮಿ ಇದೆ. ಉಳಿದ ಕಡೆಗಳಲ್ಲಿ ಸಮಸ್ಯೆಯಾಗಿದೆ ಎಂದು ರಾಜೀವ್‌ಗಾಂಧಿ ವಸತಿ ನಿಗಮದ ಅಧಿಕಾರಿ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು, ಏಕಲವ್ಯನಗರದ ಬಳಿ 10 ಎಕರೆ ಪ್ರದೇಶವನ್ನು ಆಶ್ರಯ ಸಮಿತಿ ಕಾಯ್ದಿರಿಸಿದೆ. ಅದೇ ರೀತಿ ಎಲ್ಲೆಲ್ಲಿ ನಿವೇಶನಗಳನ್ನು ಕಾಯ್ದಿರಿಸಲಾಗಿದೆ ಎಂಬುದರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು. ಇದಕ್ಕೆ ಸಮ್ಮತಿಸಿದ ಸಂಸದ ಪ್ರತಾಪ್‌ ಸಿಂಹ ಅವರು, ಮುಂಬರುವ ದಿನಗಳಲ್ಲಿ ಎಲ್ಲರಿಗೂ ನಿವೇಶನ ಕೊಡಲಾಗದು. ಜಿ+2, ಜಿ+3 ಗುಂಪು ಮನೆಗಳನ್ನು ಕಟ್ಟಿಕೊಟ್ಟರೆ ಅನುಕೂಲವಾಗಲಿದೆ. ಈ ಬಗ್ಗೆ ಸ್ಲಂ ಬೋರ್ಡ್‌, ರಾಜೀವ್‌ಗಾಂಧಿ ಹೌಸಿಂಗ್‌ ಕಾರ್ಪೋರೇಷನ್‌ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ನಗರದ ಹೊರವಲಯದಲ್ಲಿ ಹಾಸ್ಟೆಲ್‌ಗಳನ್ನು ಕಟ್ಟುವ ಬದಲಿಗೆ ಎಂಡಿಎ ವ್ಯಾಪ್ತಿಯಲ್ಲಿರುವ ಸಿಎ ನಿವೇಶನಗಳನ್ನು ಪಡೆಯಬೇಕು. ನಗರದಿಂದ ದೂರದಲ್ಲಿ ಹಾಸ್ಟೆಲ್‌ ನಿರ್ಮಿಸಿದರೆ ವಿದ್ಯಾರ್ಥಿಗಳು ಬಸ್‌ಗೆ ಹಣ ಕೊಟ್ಟು ಬರಲು ಕಷ್ಟವಾಗುತ್ತದೆ. ಹೀಗಾಗಿ, ಪ್ರಸ್ತುತ ಜಿಲ್ಲಾಧಿಕಾರಿಯವರೇ ಎಂಡಿಎ ಅಧ್ಯಕ್ಷರಾಗಿರುವ ಕಾರಣ ಸಿಎ ನಿವೇಶನಗಳನ್ನು ಹಾಸ್ಟೆಲ್‌ಗಳಿಗೆ ಒದಗಿಸಬೇಕು ಎಂದರು.

ಪಿಎಂಜೆಎವೈ ಕಾರ್ಡ್‌ ನೀಡಿ

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್‌. ಪ್ರಸಾದ್‌ ಮಾತನಾಡಿ, ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ ಕಾರ್ಡ್‌ ಬದಲಿಗೆ ಪಿಎಂಜೆಎವೈ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 25 ಲಕ್ಷ ಕುಟುಂಬಗಳಿದ್ದು, 10 ಲಕ್ಷ ಕುಟುಂಬಗಳಿಗೆ ಕಾರ್ಡ್‌ ವಿತರಣೆ ಮಾಡಲಾಗಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಕಾರ್ಡ್‌ ರದ್ದುಪಡಿಸಿ, ಪಿಎಂಜೆಎವೈ ಕಾರ್ಡ್‌ ವಿತರಿಸಲು ಹೇಳಿದೆ. ಜಿಲ್ಲೆಯಲ್ಲಿ ಗ್ರಾಮ ಒನ್‌ ಕೇಂದ್ರಗಳ ಮೂಲಕ ನಿತ್ಯ 5 ರಿಂದ 10 ಸಾವಿರ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ ಎಂದು ವಿವರಿಸಿದರು.

ಗ್ಯಾಸ್‌ ಪೈಪ್‌ಲೈನ್‌ ಮೂಲಕ ಮನೆ ಮನೆಗೆ ಅಡುಗೆ ಅನಿಲ ಸಂಪರ್ಕ ಸಂಬಂಧ 45 ಕಿ.ಮೀ ಪೈಪ್‌ಲೈನ್‌ ಅಳವಡಿಸಲಾಗಿದೆ. ಇನ್ನೂ 7 ಕಿ.ಮೀ ವ್ಯಾಪ್ತಿಯಲ್ಲಿ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಪಾಲಿಕೆ ಸಹಾಯಕ ಆಯುಕ್ತ ಮಹೇಶ್‌ ತಿಳಿಸಿದರು.

ಶಾಸಕ ಎಸ್‌.ಎ. ರಾಮದಾಸ್‌, ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ ಇದ್ದರು.

ಸರ್ಕಾರಿ ಶಾಲೆಗಳ ಫಲಿತಾಂಶ ಉತ್ತಮಪಡಿಸಿ

ನಮ್ಮ ಶಾಲೆ ನಮ್ಮ ಹೊಣೆ ಎಂಬ ಘೋಷಣೆಯೊಂದಿಗೆ ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿಗಳು ಒಂದೊಂದು ಶಾಲೆಯನ್ನು ದತ್ತು ಪಡೆದು ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸಿ 5ನೇ ಸ್ಥಾನದೊಳಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

ಜಿಲ್ಲೆಯಲ್ಲಿ ಈ ಹಿಂದಿಗಿಂತ ಫಲಿತಾಂಶದಲ್ಲಿ ಸುಧಾರಿಸಿದೆಯಾದರೂ ಯಾವಾಗಲು ಟಾಪ್‌ 5ರಲ್ಲಿ ಜಿಲ್ಲೆ ಇರುವಂತೆ ನೋಡಿಕೊಳ್ಳಬೇಕು. ನನಗೂ ಒಂದು ಶಾಲೆ ಕೊಡಿ, ಜಿಲ್ಲಾಧಿಕಾರಿಗಳೂ ಒಂದು ಶಾಲೆ ದತ್ತು ತೆಗೆದುಕೊಳ್ಳುತ್ತಾರೆ. ಒಟ್ಟಾರೆ ಎಲ್ಲರೂ ಸೇರಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸಲು ಪ್ರಯತ್ನಿಸೋಣ. ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಗಳು ವಾರ ಅಥವಾ 15 ದಿನಗಳಿಗೊಮ್ಮೆ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕಾ ಮಟ್ಟಹೆಚ್ಚಿಸಬೇಕು ಎಂದರು.

ಕೆಸರೆಯಲ್ಲಿ ನಿರ್ಮಿಸುತ್ತಿರುವ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಡಿಸೆಂಬರ್‌ ಎರಡನೇ ವಾರದೊಳಗೆ ಮುಗಿಸಬೇಕು. ಹಾಗೆಯೇ, ಗೊರೂರಿನಲ್ಲಿ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿ ವಿಳಂಬವಾಗಿದೆ. ಭೂಮಿಪೂಜೆ ಮಾಡಿ ವರ್ಷವಾದರೂ ಇನ್ನೂ ಪಾಯ ಕಟ್ಟುವ ಹಂತದಲ್ಲೇ ಇರುವುದು ಸರಿಯಲ್ಲ. ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು.

- ಎಸ್‌.ಎ. ರಾಮದಾಸ್‌, ಶಾಸಕರು

click me!