
ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಆಘಾತಕಾರಿ ತಿರುವುಗಳು ಸಿಗುತ್ತಿವೆ. ಇದೀಗ ಪ್ರಕರಣದ ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿಯೊಬ್ಬರ ಮೇಲೆ ಪ್ರಭಾವ ಬೀರಲು ಮತ್ತು ಕೋರ್ಟ್‌ಗೆ ನೀಡುವ ಸಾಕ್ಷ್ಯವನ್ನು ತಿರುಚಲು ಅಪರಿಚಿತ ವ್ಯಕ್ತಿಗಳು ಸಂಚು ರೂಪಿಸಿರುವುದು ಸ್ವತಃ ಸಾಕ್ಷಿದಾರರಿಂದಲೇ ನ್ಯಾಯಾಲಯದಲ್ಲಿ ಬಹಿರಂಗವಾಗಿದೆ. ಸಾಕ್ಷಿಯ ಈ ಆತಂಕಕಾರಿ ಹೇಳಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸೆಷನ್ಸ್ ಕೋರ್ಟ್ ಸಾಕ್ಷ್ಯ ತಿರುಚಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಲ್ಲದೆ, ಸಾಕ್ಷಿದಾರನಿಗೆ ತಕ್ಷಣವೇ ಸೂಕ್ತ ರಕ್ಷಣೆ ಒದಗಿಸುವಂತೆ ತನಿಖಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ.
ನಗರದ 58ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ಮಂಗಳವಾರ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆ ನಡೆಯುತ್ತಿತ್ತು. ಪ್ರಕರಣದ 49ನೇ ಸಾಕ್ಷಿಯಾಗಿರುವ, ಚಿತ್ರದುರ್ಗದ 'ದುರ್ಗಾ ಬಾರ್ ಆ್ಯಂಡ್ ರೆಸ್ಟೋರೆಂಟ್' ಕ್ಯಾಷಿಯರ್ ಹಾಗೂ ತುಮಕೂರಿನ ರಂಗಾಪುರ ನಿವಾಸಿ ಸಂದೀಪ್ ವಿಚಾರಣೆಗೆ ಹಾಜರಾಗಿದ್ದರು. ರೇಣುಕಾಸ್ವಾಮಿ ಹಾಗೂ ಆತನನ್ನು ಅಪಹರಿಸಿದ್ದ ಆರೋಪಿಗಳು ಇದೇ ಬಾರ್‌ನಲ್ಲಿ ಊಟ ಮಾಡಿದ್ದರಿಂದ, ಸಂದೀಪ್ ಈ ಕೇಸ್‌ನ ಪ್ರಮುಖ ಕಣ್ಣಾರೆ ಕಂಡ ಸಾಕ್ಷಿಯಾಗಿದ್ದಾರೆ.
ವಿಶೇಷ ಸರ್ಕಾರಿ ಅಭಿಯೋಜಕರಾದ (SPP) ಪಿ.ಪ್ರಸನ್ನ ಕುಮಾರ್ ಅವರು ಸಂದೀಪ್ ಅವರನ್ನು ಮುಖ್ಯ ಪರೀಕ್ಷೆಗೆ ಗುರಿಪಡಿಸಲು ಸಜ್ಜಾದರು. ಕಟಕಟೆಯಲ್ಲಿ ನಿಂತು ನ್ಯಾಯಾಲಯಕ್ಕೆ ಸತ್ಯವನ್ನೇ ನುಡಿಯುವುದಾಗಿ ಪ್ರಮಾಣ ಮಾಡಿದ ತಕ್ಷಣವೇ ಸಂದೀಪ್, "ನಾನು ನ್ಯಾಯಾಲಯಕ್ಕೆ ಒಂದು ಮಹತ್ವದ ವಿಷಯವನ್ನು ತಿಳಿಸಲು ಬಯಸುತ್ತೇನೆ, ಅದಕ್ಕೆ ಅನುಮತಿ ನೀಡಬೇಕು" ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.
ನ್ಯಾಯಾಲಯದ ಅನುಮತಿ ಸಿಗುತ್ತಿದ್ದಂತೆ ಸಾಕ್ಷಿ ಸಂದೀಪ್ ತಮಗಿದ್ದ ಆತಂಕ ಮತ್ತು ಎದುರಿಸುತ್ತಿದ್ದ ಒತ್ತಡವನ್ನು ಧೈರ್ಯವಾಗಿ ಬಿಚ್ಚಿಟ್ಟರು. ನಮಗೆ ಪರಿಚಯವಿರುವ ಆಕರ್ಷ್ ಎಂಬ ವ್ಯಕ್ತಿಯ ಮೂಲಕ ಕೆಲ ಅಪರಿಚಿತ ವ್ಯಕ್ತಿಗಳು ನನ್ನನ್ನು ದೂರವಾಣಿ ಕರೆಯಲ್ಲಿ ಸಂಪರ್ಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ನ್ಯಾಯಾಲಯಕ್ಕೆ ನೀಡಲಿರುವ ಸಾಕ್ಷ್ಯದ ಹೇಳಿಕೆಯ ಮಾಹಿತಿಯನ್ನು ಅವರು ಕೇಳಿದ್ದಾರೆ. ಅಷ್ಟೇ ಅಲ್ಲದೆ, ನ್ಯಾಯಾಲಯದಲ್ಲಿ ಸತ್ಯವನ್ನು ಮರೆಮಾಚಿ, ತಮಗೆ ಅನುಕೂಲವಾಗುವಂತೆ ತಾವು ಹೇಳಿಕೊಟ್ಟಂತೆಯೇ ಸಾಕ್ಷಿ ನುಡಿಯಬೇಕು ಎಂದು ನನಗೆ ತೀವ್ರ ಒತ್ತಡ ಹೇರಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸಾಕ್ಷಿದಾರನ ಈ ಹೇಳಿಕೆಯಿಂದ ನ್ಯಾಯಾಲಯದಲ್ಲಿ ಕೆಲಕಾಲ ಸನ್ನಿವೇಶ ಗಂಭೀರವಾಯಿತು. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರಾದ ಸುಜಾತಾ ಎಂ. ಸಾಂಬ್ರಾಣಿ ಅವರು ತಕ್ಷಣವೇ ಆದೇಶವೊಂದನ್ನು ಬರೆಸಿದರು. ಆಕರ್ಷ್ ಎಂಬಾತನ ಮೂಲಕ ಕೆಲವು ವ್ಯಕ್ತಿಗಳು ಸಾಕ್ಷಿ ಸಂದೀಪ್ ಅವರ ಹೇಳಿಕೆಯನ್ನು ತಿರುಚಲು ಪ್ರಯತ್ನಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಅಥವಾ ಸಂಬಂಧಪಡದ ಯಾವುದೇ ವ್ಯಕ್ತಿಯಾಗಲಿ ಸಾಕ್ಷ್ಯವನ್ನು ನಾಶಪಡಿಸಲು ಅಥವಾ ತಿರುಚಲು ಯತ್ನಿಸಿದರೆ ಅದನ್ನು ನ್ಯಾಯಾಲಯವು ಕ್ಷಮಿಸುವುದಿಲ್ಲ. ಅಂತಹವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದರು.
ತನಗೆ ಕರೆ ಮಾಡಿ ಒತ್ತಡ ಹೇರಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ, ತಾನು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಅಫಿಡವಿಟ್ (ಪ್ರಮಾಣ ಪತ್ರ) ಸಲ್ಲಿಸುವಂತೆ ಸಾಕ್ಷಿ ಸಂದೀಪ್‌ಗೆ ಕೋರ್ಟ್ ನಿರ್ದೇಶಿಸಿದೆ.
ಸಾಕ್ಷಿ ಸಂದೀಪ್‌ಗೆ ಯಾವುದೇ ಪ್ರಾಣಭಯ ಅಥವಾ ಬೆದರಿಕೆ ಬರದಂತೆ ವಿಚಾರಣೆ ಮುಗಿಯುವವರೆಗೂ ಅಗತ್ಯ ಪೊಲೀಸ್ ರಕ್ಷಣೆ ಒದಗಿಸುವಂತೆ ಪ್ರಕರಣದ ತನಿಖಾಧಿಕಾರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಒತ್ತಡದಲ್ಲಿದ್ದ ಸಾಕ್ಷಿಗೆ ನ್ಯಾಯಾಧೀಶರು ಮೌಖಿಕವಾಗಿ ಧೈರ್ಯ ತುಂಬಿದರು. "ನೀನು ಯಾರಿಗೂ ಹೆದರಬೇಕಾದ ಅಥವಾ ಭಯಪಡುವ ಅವಶ್ಯಕತೆ ಇಲ್ಲ. ನ್ಯಾಯಾಲಯ ನಿನಗೆ ಸಂಪೂರ್ಣ ರಕ್ಷಣೆ ಕೊಡಲಿದ್ದು, ನಿನಗೆ ಗೊತ್ತಿರುವ ನಿಜ ಸಂಗತಿ ಏನೇ ಇದ್ದರೂ ಅದನ್ನು ಮುಕ್ತವಾಗಿ ಕೋರ್ಟ್‌ಗೆ ತಿಳಿಸು ಎಂದು ನ್ಯಾಯಾಧೀಶರು ಸೂಚಿಸಿದರು.
ಬುಧವಾರಕ್ಕೆ ಮುಂದೂಡಲ್ಪಟ್ಟ ವಿಚಾರಣೆಯಲ್ಲಿ ಸಂದೀಪ್ ನೀಡಲಿರುವ ಲಿಖಿತ ಪ್ರಮಾಣಪತ್ರದ ಆಧಾರದ ಮೇಲೆ, ಸಾಕ್ಷ್ಯ ತಿರುಚಲು ಯತ್ನಿಸಿದ ಆಕರ್ಷ್ ಹಾಗೂ ಆತನ ಹಿನ್ನೆಲೆಯಲ್ಲಿರುವ ಸೂತ್ರಧಾರಿಗಳ ವಿರುದ್ಧ ಪೊಲೀಸರು ಕಾನೂನು ರೀತಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ. ಈ ಬೆಳವಣಿಗೆಯು ಪ್ರಕರಣದ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.