
ಬೆಂಗಳೂರು ದಕ್ಷಿಣ/ರಾಮನಗರ (ಆ.11): ಬಿಡದಿ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಯೋಜನೆ ಕುರಿತಾಗಿ 'ಜೆಡಿಎಸ್‌ನವರು ಮಾಡಿದ್ದು ಪಾದಯಾತ್ರೆಯಲ್ಲ, ಅದೊಂದು ಜಾಲಿ ಟ್ರಿಪ್. ಬರೀ ಡೌ ಮಾಡಿಕೊಂಡು ಹೋಗಿದ್ದಾರೆ. ಬಡವರ ಪರ ಎನ್ನುವವರು ಪಾದಯಾತ್ರೆ ಮುಗಿದ ತಕ್ಷಣ ನಿಖಿಲ್ ರಾತ್ರಿ ಎಲ್ಲಿ ಮಲಗಿದ್ದರು? ಎಂದು ಪ್ರಶ್ನೆ ಮಾಡುವ ಮೂಲಕ ಜೆಡಿಎಸ್ ಹಮ್ಮಿಕೊಂಡಿದ್ದ ನಿಖಿಲ್ ಕುಮಾರಸ್ವಾಮಿ ನೇತೃತ್ವದ ಪಾದಯಾತ್ರೆಯ ವಿರುದ್ಧ ಸಚಿವ ಹೆಚ್.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ತಾಲೂಕಿನ ಕರಲಮಂಗಲ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಾಲಕೃಷ್ಣ, ಜೆಡಿಎಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಪಾದಯಾತ್ರೆಯ ಗಾಂಭೀರ್ಯವನ್ನು ಪ್ರಶ್ನಿಸಿದ ಸಚಿವರು, 'ಪಾದಯಾತ್ರೆ ಮುಗಿಸಿ ನಿಖಿಲ್ ರಾತ್ರಿ ಎಲ್ಲಿ ಮಲಗಿದ್ರು? ಕಾರ್ಯಕರ್ತರ ಜೊತೆ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಮಾಡಿದ್ರಾ? ರೈತರ ಪರವಾಗಿ ಹೋರಾಟ ಮಾಡುವವರು ಎಲ್ಲಿರಬೇಕು? ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಬಂದು ಮಗನಿಗೆ ಪಟ್ಟಾಭಿಷೇಕ ಮಾಡಿ ಹೋದ್ರು ಅಷ್ಟೇ. ಐಕ್ಯತೆ ತೋರಿಸೋಕೆ ಕಾಟಾಚಾರಕ್ಕೆ ಅಶೋಕಣ್ಣ ಬಂದು ಹೋದ್ರು. ಕಾಸು ಕೊಟ್ಟು ಬಸ್ಸಿನಲ್ಲಿ ಜನರನ್ನು ಕರ್ಕೊಂಡು ಬಂದಿರಲಿಲ್ವಾ?' ಎಂದು ಪ್ರಶ್ನಿಸಿದರು.
2006ರಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಆರಂಭಿಸಿದ್ದೇ ಹೆಚ್.ಡಿ. ಕುಮಾರಸ್ವಾಮಿ ಎಂದು ನೆನಪಿಸಿದ ಬಾಲಕೃಷ್ಣ, 'ಕುಮಾರಸ್ವಾಮಿಯವರೇ ಹಿಂದೆ ಈ ಯೋಜನೆಯನ್ನು ತಮ್ಮ ‘ಕನಸಿನ ಕೂಸು’ ಅಂದಿದ್ದರು. ಒಬ್ಬ ರಾಜಕಾರಣಿಗೆ ನಡೆ ಮತ್ತು ನುಡಿ ಎರಡೂ ಒಂದೇ ಇರಬೇಕು. ಅವಕಾಶಕ್ಕೆ ತಕ್ಕಂತೆ ಮಾತಾಡೋದು ತರವಲ್ಲ. ನಿಖಿಲ್ ಕುಮಾರಸ್ವಾಮಿ ಇಂತಹ ಬಾಲಿಷ ಹೇಳಿಕೆಗಳನ್ನು ನಿಲ್ಲಿಸಲಿ' ಎಂದರು.
ಯೋಜನೆ ಜಾರಿಗೊಳಿಸಲು ಸರ್ಕಾರದ ಬಳಿ ಹಣವಿಲ್ಲ ಎಂಬ ನಿಖಿಲ್ ಸವಾಲಿಗೆ ತಿರುಗೇಟು ನೀಡಿದ ಸಚಿವರು, 'ನಿಖಿಲ್ ಕುಮಾರಸ್ವಾಮಿ ಒಪ್ಪಿಗೆ ನೀಡಿದರೆ, ನಾಳೆಯೇ ಅವರ ಅಕೌಂಟ್‌ಗೆ ಹಣ ಹಾಕಿಸ್ತೀನಿ. ಬಿಡದಿ ಭಾಗದಲ್ಲಿ ನಿಖಿಲ್ ಅವರದ್ದು 4 ಎಕರೆ ಹಾಗೂ ಅನಿತಾ ಕುಮಾರಸ್ವಾಮಿ ಅವರದ್ದು 31 ಎಕರೆ ಸೇರಿದಂತೆ ಒಟ್ಟು 35 ಎಕರೆ ಜಮೀನಿದೆ. ಅವರು ಸಮ್ಮತಿಸಿದರೆ ಒಂದೇ ದಿನದಲ್ಲಿ ಹಣ ಜಮಾ ಮಾಡ್ತೀವಿ' ಎಂದು ಸವಾಲು ಎಸೆದರು.
ಇದೇ ವೇಳೆ ಕುಮಾರಸ್ವಾಮಿ ಕುಟುಂಬದ ಜಮೀನಿನ ಬಗ್ಗೆ ಗಂಭೀರ ಆರೋಪ ಮಾಡಿದ ಬಾಲಕೃಷ್ಣ, 'ನಿಖಿಲ್ ಮತ್ತು ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿರುವ 35 ಎಕರೆ ಜಮೀನು ವಿವಾದದಲ್ಲಿದೆ. ಅದು ಎಸ್‌ಸಿ/ಎಸ್‌ಟಿ (SC/ST) ಸಮುದಾಯಕ್ಕೆ ಸೇರಿದ ಜಮೀನು ಎಂದು ಯಾರೋ ದೂರು ಕೊಟ್ಟಿದ್ದಾರೆ. ನಿಖಿಲ್ ಜಮೀನಿಗೆ ಮೂಲ ಮಂಜೂರಾತಿ ಪತ್ರವೇ ಇಲ್ಲ. ಅದು ಹೇಗೆ ಮಂಜೂರಾಯಿತು ಎಂಬುದರ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ' ಎಂದು ಬಾಂಬ್ ಸಿಡಿಸಿದರು.