
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ನಟ ದರ್ಶನ್ ಅವರನ್ನು ಈ ಕೊಲೆ ಕೇಸ್‌ನಿಂದ ಹೇಗಾದರೂ ಮಾಡಿ ಪಾರು ಮಾಡಬೇಕು ಎಂದು ಯಾರದ್ದೋ ಮಾತು ಕೇಳಿ ಸಾಕ್ಷಿಗಳ ನಾಶಕ್ಕೆ ಇಳಿದಿದ್ದ ದರ್ಶನ್ ಅಭಿಮಾನಿ ಸಂಘದ ಪ್ರಮುಖರು ಈಗ ತಾವೇ ಕಾನೂನಿನ ಉರುಳಿಗೆ ಸಿಲುಕಿದ್ದಾರೆ. ಪ್ರಕರಣದ ಪ್ರಮುಖ ಸಾಕ್ಷಿಗೆ ಬೆದರಿಕೆ ಒಡ್ಡಿ ಸಿಕ್ಕಿಬಿದ್ದಿರುವ ಆರೋಪಿಗಳ ಜಾಲದ ಹಿಂದೆ ಚಿತ್ರರಂಗದ ಪ್ರಭಾವಿ ವ್ಯಕ್ತಿಗಳು ಅಥವಾ ರಾಜಕೀಯದ ಪ್ರಭಾವಿ ವ್ಯಕ್ತಿಗಳು ಇರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಂಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿಯಾಗಿರುವ ಚಿತ್ರದುರ್ಗದ ದುರ್ಗಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಕ್ಯಾಷಿಯರ್ ಸಂದೀಪ್‌ಗೆ ಇತ್ತೀಚೆಗೆ ಆಕರ್ಷ್ ಎಂಬ ವ್ಯಕ್ತಿಯ ಮೂಲಕ ಕರೆ ಮಾಡಿಸಲಾಗಿತ್ತು. ನಾವು ಹೇಳಿದಂತೆ ಕೋರ್ಟ್‌ನಲ್ಲಿ ಸಾಕ್ಷ್ಯ ನುಡಿಯಬೇಕು, ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆರೋಪಿಗಳು ಬೆದರಿಕೆ ಹಾಕಿದ್ದರು. ಈ ಕುರಿತು ಸಂದೀಪ್ ಸ್ವತಃ ನ್ಯಾಯಾಧೀಶರ ಮುಂದೆ ಧೈರ್ಯವಾಗಿ ನನಗೆ ಸುಳ್ಳು ಸಾಕ್ಷಿ ನುಡಿಯುವ ಬೆದರಿಕೆ ಇದೆ ಎಂದು ಜವಾಬ್ದಾರಿ ಹೇಳಿಕೆ ನೀಡಿದ್ದರು.
ವಿಚಾರಣೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಬೆದರಿಕೆ ಹಾಕಿದವರ ವಿರುದ್ಧ ತಕ್ಷಣ ಕ್ರಮ ಜರುಗಿಸಲು ಮತ್ತು ಸಾಕ್ಷಿಗೆ ಸೂಕ್ತ ರಕ್ಷಣೆ ನೀಡಲು ತನಿಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು. ಇದರ ಬೆನ್ನಲ್ಲೇ ಕಾರ್ಯಾಚರಣೆಗೆ ಇಳಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಟ ದರ್ಶನ್ ಅಭಿಮಾನಿ ಸಂಘದ ಸದಸ್ಯರಾದ ಸುಹಾಸ್, ವೇಣು ಮತ್ತು ಪುನೀತ್ ಎಂಬ ಮೂವರು ಆರೋಪಿಗಳನ್ನು ಹೆಡೆಮುರಿಕಟ್ಟಿದ್ದರು.
ಬಂಧಿತರ ಪೈಕಿ ತೀವ್ರ ವಿಚಾರಣೆಗೆ ಒಳಗಾಗಿರುವ ದಾಸನ ಅಭಿಮಾನಿ ಪುನೀತ್ ನನ್ನು ಪೊಲೀಸರು ಸದ್ಯ 10 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಈ ಪುನೀತ್ ಪೊಲೀಸರ ಮುಂದೆ ನಿರಂತರವಾಗಿ ಮರು ಹೇಳಿಕೆಗಳನ್ನು ದಾಖಲಿಸುತ್ತಿದ್ದಾನೆ. ಸದ್ಯದ ಮಾಹಿತಿ ಪ್ರಕಾರ, ಈತ ಯಾರೋ ಪ್ರಭಾವಿಗಳ ಸೂಚನೆ ಮೇರೆಗೆ ಈ ಇಡೀ ಸಾಕ್ಷಿ ನಾಶದ ‘ಡೀಲ್’ ಕುದುರಿಸಲು ಮುಂದಾಗಿದ್ದ ಎನ್ನಲಾಗಿದೆ. 10 ದಿನಗಳ ಈ ಸುದೀರ್ಘ ವಿಚಾರಣೆಯಲ್ಲಿ ಪುನೀತ್ ಅಸಲಿ ಸತ್ಯವನ್ನು ಬಾಯಿ ಬಿಟ್ಟರೆ, ಈ ಡೀಲ್ ಕುದುರಿಸಲು ಹಣದ ಆಮಿಷ ಒಡ್ಡಿದ ದೊಡ್ಡ ವ್ಯಕ್ತಿಗಳಿಗೆ ನೇರ ಸಂಕಷ್ಟ ಅಂತು ಕಟ್ಟಿಟ್ಟ ಬುತ್ತಿ.
ಸಾಕ್ಷಿಗೆ ಬೆದರಿಕೆ ಹಾಕಲು ಆರೋಪಿಗಳು ಬಳಸಿದ್ದ ಮೊಬೈಲ್ ಫೋನ್‌ಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಿದ್ದಾರೆ. ಮೊಬೈಲ್‌ನಿಂದ ಡಿಲೀಟ್ ಮಾಡಲಾಗಿರುವ ಕರೆಗಳ ವಿವರ, ವಾಟ್ಸಾಪ್ ಚಾಟ್‌ಗಳು ಮತ್ತು ಪ್ರಮುಖ ಆಡಿಯೋ ರೆಕಾರ್ಡಿಂಗ್‌ಗಳನ್ನು ಮರುಪಡೆಯುವ (Retrieve) ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಸಂಪೂರ್ಣ ವರದಿ ಪೊಲೀಸರ ಕೈಸೇರಲಿದೆ. ಸಾಕ್ಷಿಗೆ ಬೆದರಿಕೆ ಹಾಕುವ ಸಮಯದಲ್ಲಿ ಈ ಆರೋಪಿಗಳ ಜೊತೆ ಕಾನ್ಫರೆನ್ಸ್ ಕಾಲ್‌ನಲ್ಲಿ ಇನ್ನು ಯಾರ್ಯಾರು ಸಂಪರ್ಕದಲ್ಲಿದ್ದರು? ಬೆಂಗಳೂರಿನಿಂದ ಯಾರಾದರೂ ಇವರಿಗೆ ಇನ್ಸ್ಟ್ರಕ್ಷನ್ ನೀಡುತ್ತಿದ್ದರೇ? ಎಂಬುದನ್ನು ಎಫ್‌ಎಸ್‌ಎಲ್ ಪತ್ತೆ ಹಚ್ಚಲಿದೆ.
ಎಫ್‌ಎಸ್‌ಎಲ್‌ನಿಂದ ತಾಂತ್ರಿಕ ಸಾಕ್ಷ್ಯಗಳು ಕೈ ಸೇರಿದ ತಕ್ಷಣವೇ, ಈ ಇಡೀ ಸಾಕ್ಷಿ ಬೆದರಿಕೆ ಪ್ರಕರಣದ ಹಿಂದೆ ನಿಂತು ಹಣದ ಹರಿವು ಹಾಗೂ ತಂತ್ರ ರೂಪಿಸಿದ ದೊಡ್ಡ ತಲೆಗಳಿಗೆ ಪೊಲೀಸರು ನೋಟಿಸ್ ಜಾರಿ ಮಾಡಲಿದ್ದಾರೆ. ನೋಟಿಸ್ ನೀಡಿದ ಬಳಿಕ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಮುಖಾಮುಖಿ ವಿಚಾರಣೆ ನಡೆಸಲು ಕಾಮಾಕ್ಷಿಪಾಳ್ಯ ಪೊಲೀಸರು ಯೋಜನೆ ರೂಪಿಸಿದ್ದಾರೆ.
ದರ್ಶನ್ ರಕ್ಷಣೆಗಾಗಿ ಕೋಟಿ ಕೋಟಿ ಹಣ ಹಿಡಿದು ಡೀಲ್ ಮಾಡಲು ಹೊರಟಿದ್ದ ಪ್ರಭಾವಿ ವಲಯದಲ್ಲಿ ಈಗ ತೀವ್ರ ನಡುಕ ಮತ್ತು ಆತಂಕ ಮನೆಮಾಡಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನ ಸೈಡ್ ಟ್ರ್ಯಾಕ್‌ನಲ್ಲಿ ಆರಂಭವಾಗಿರುವ ಈ ಬೆದರಿಕೆ ಪ್ರಕರಣ, ಅಸಲಿ ಕೊಲೆ ಪ್ರಕರಣಕ್ಕಿಂತಲೂ ದೊಡ್ಡ ತಿರುವು ಪಡೆಯುವ ಮುನ್ಸೂಚನೆ ಸಿಗುತ್ತಿದೆ.