
ಬೆಂಗಳೂರು: ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ ನಂತರ ಬಿಡುಗಡೆಯಾದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ಮತ್ತೆ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಬೆಳಕಿಗೆ ಬಂದಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರಸಾದ್ ಎಂಬಾತ ಡಕಾಯಿತಿ ಪ್ರಕರಣದಲ್ಲಿ ಆರೋಪಿಯಾಗಿದ್ದು, ಸುಮಾರು ಎರಡು ವರ್ಷಗಳಿಂದ ಜೈಲಿನಲ್ಲಿದ್ದ. ಕಳೆದ ಶುಕ್ರವಾರ ಶಿಕ್ಷೆ ಮುಗಿಸಿಕೊಂಡು ಬಿಡುಗಡೆಗೊಂಡಿದ್ದಾನೆ. ಆದರೆ ಜೈಲಿನಿಂದ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪ್ರಸಾದ್ ಮತ್ತೆ ಪೊಲೀಸರ ಗುರಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಸಾದ್ ಹೇಳಿಕೆಯಂತೆ ಮೀಟರ್ ಸೀನಾ ಎಂಬ ವ್ಯಕ್ತಿಯ ವಿರುದ್ಧ ಆತ ಅಟ್ರಾಸಿಟಿ (SC/ST ಹಕ್ಕು ಉಲ್ಲಂಘನೆ) ಪ್ರಕರಣ ದಾಖಲಿಸಿದ್ದ. ಈ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ತರುವ ಪ್ರಯತ್ನಗಳಲ್ಲಿ ಮೀಟರ್ ಸೀನಾ ಮತ್ತು ಪೊಲೀಸರು ತೊಡಗಿದ್ದಾರೆ ಎಂದು ಪ್ರಸಾದ್ ಆರೋಪಿಸಿದ್ದಾನೆ.
ಮೀಟರ್ ಸೀನಾ ನನ್ನ ಜಾತಿಯ ಬಗ್ಗೆ ಅವಹೇಳನಕಾರಿ ಶಬ್ದಗಳನ್ನು ಬಳಸಿ ಮಾತನಾಡಿದ್ದ. ಆ ಕಾರಣಕ್ಕೆ ನಾನು ಅವನ ವಿರುದ್ಧ ಕೇಸ್ ಹಾಕಿದ್ದೆ. ಆದರೆ ಈಗ ಪೊಲೀಸರು ಆತನ ಮಾತು ಕೇಳಿ ನನ್ನ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಿಸುತ್ತಿದ್ದಾರೆ ಎಂದು ಪ್ರಸಾದ್ ಮಾಧ್ಯಮಗಳಿಗೆ ತಿಳಿಸಿದ್ದಾನೆ.
ಪ್ರಸಾದ್ ಕುಟುಂಬದವರ ಪ್ರಕಾರ, ಶನಿವಾರ ರಾತ್ರಿ ವಿದ್ಯಾರಣ್ಯಪುರ ಠಾಣೆಯ ಸುಮಾರು 20ಕ್ಕೂ ಹೆಚ್ಚು ಮಂದಿ ಪೊಲೀಸರು ಅವರ ಮನೆಗೆ ನುಗ್ಗಿ, ಮನೆಯಲ್ಲಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಪರಿಗಣಿಸದೆ ಪ್ರಸಾದ್ ಮೇಲೆ ನಿಂದನೆ, ಬೆದರಿಕೆ ಮತ್ತು ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಬಲವಂತವಾಗಿ ಠಾಣೆಗೆ ಕರೆದೊಯ್ದಿದ್ದಾರೆ ಎಂಬ ಆರೋಪ ಕುಟುಂಬದಿಂದ ಕೇಳಿ ಬಂದಿದೆ.
ಪೊಲೀಸರ ಈ ವರ್ತನೆಗೆ ಪ್ರಸಾದ್ ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪ್ರಸಾದ್ ಜೈಲಿನಿಂದ ಬಿಡುಗಡೆಯಾದ ತಕ್ಷಣವೇ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ. ಪೊಲೀಸರು ಯಾರ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನಮ್ಮದು ಎಂದು ಕುಟುಂಬದವರು ಪ್ರಶ್ನಿಸಿದ್ದಾರೆ. ಈ ಕುರಿತು ವಿದ್ಯಾರಣ್ಯಪುರ ಪೊಲೀಸರು ಇನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪ್ರಸಾದ್ ಕುಟುಂಬದವರು ಈ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಲು ಸಿದ್ಧರಾಗಿದ್ದಾರೆಂದು ತಿಳಿದು ಬಂದಿದೆ.