ಕೋವಿಡ್‌ ನೆಗೆಟಿವ್‌ ಬಂದ್ರೂ ಚಿಕಿತ್ಸೆ ನೀಡಲು ಹಿಂದೇಟು: ಶವ ಸಮೇತ ಡಿಸಿ ಕಚೇರಿಗೆ ಬಂದ ಬಂಧುಗಳು

By Kannadaprabha NewsFirst Published Jul 31, 2020, 2:50 PM IST
Highlights

ನರಳಿ ಆಟೋದಲ್ಲೇ ಸಾವು| ಶವ ಸಮೇತ ಆಟೋದಲ್ಲೇ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಶವವನ್ನು ಮೆಟ್ಟಿಲು ಮೇಲಿಟ್ಟು ಪ್ರತಿಭಟನೆ| ಕೋವಿಡ್‌ ಪರೀಕ್ಷೆ ನಡೆಸಿದಾಗ ನೆಗೆಟಿವ್‌ ವರದಿ ಬಂದಿದ್ದರೂ ಜಿಮ್ಸ್‌ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಹಿಂದೇಟು: ಕುಟುಂಬಸ್ಥರ ಆರೋಪ|

ಕಲಬುರಗಿ(ಜು.31): ಕೊರೋನಾ ಆತಂಕದಿಂದ ಕಂಗಾಲಾಗಿರುವ ಕಲಬುರಗಿಯಲ್ಲಿ ಆಸ್ಪತ್ರೆ ಪ್ರವೇಶ ಸಮಯಕ್ಕೆ ಸರಿಯಾಗಿ ಸಿಗದೆ ಹಾಗೂ ವೆಂಟಿಲೇಟರ್‌ ಬೆಡ್‌ ದೊರಕದೆ ಸಂಭವಿಸುತ್ತಿರುವ ಸಾವು-ನೋವಿನ ಪ್ರಕರಣಗಳು ಹಾಗೇ ಮುಂದುವರಿದಿವೆ.

ಗುರುವಾರ ಇಲ್ಲಿನ ಮೋಮನಪುರಾ ಬಡಾವಣೆಯ ಅಯ್ಯೂಬ್‌ ಪಟೇಲ್‌ (38) ತೀವ್ರ ಉಸಿರಾಟ ತೊಂದರೆ ಎಂದು ನರಳಾಡಿದ್ದಾನೆ. ಮನೆ ಮಂದಿ ತಕ್ಷಣ ಆತನನ್ನು ಆಟೋದಲ್ಲಿ ಹಾಕಿಕೊಂಡು ಜಿಲ್ಲಾಸ್ಪತ್ರೆ ಜಿಮ್ಸ್‌, ಇಎಸ್‌ಐಸಿ ಆಸ್ಪತ್ರೆಗಳಿಗೆ ಕರೆ ತಂದಿದ್ದಾರೆ. ಅಲ್ಲಿ ಇವರಿಗೆ ಪ್ರವೇಶ ಅವಕಾಶವೇ ದೊರಕಿಲ್ಲ. ಅಲ್ಲಿಂದ ಬೇರೆ ಆಸ್ಪತ್ರೆಗಳಿಗೂ ಅಲೆದಿದ್ದಾರೆ. ಎಲ್ಲಿಯೂ ಪ್ರವೇಶ ದೊರಕದೆ ದಾರಿಯಲ್ಲೇ ಆಟೋದಲ್ಲೇ ಅಯ್ಯೂಬ್‌ ಖಾನ್‌ ಕೊನೆಯುಸಿರೆಳೆದಿದ್ದಾನೆಂದು ಆತನ ಬಂಧುಗಳು ದೂರಿದ್ದಾರೆ.

ಕೊನೆಗೆ ಶವ ಸಮೇತ ಆಟೋದಲ್ಲೇ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಶವವನ್ನು ಮೆಟ್ಟಿಲು ಮೇಲಿಟ್ಟು ಪ್ರತಿಭಟನೆಗೆ ಮುಂದಾಗುತ್ತಿರುವ ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಪ್ರತಿಭಟನೆ ನಡೆಸದಂತೆ ಸೂಚಿಸಿ ಅಲ್ಲಂದ ಕಳುಹಿಸಿದ್ದಾರೆ.

ಕೊರೋನಾ ಅಟ್ಟಹಾಸ: ಚಿಕಿತ್ಸೆ ಸಿಗದೇ ಇಬ್ಬರು ಮಹಿಳೆಯರ ಸಾವು

ಆಟೋದಲ್ಲೇ ಕಣ್ಣೀರು ಹಾಕುತ್ತಿದ್ದ ಅಯ್ಯೂಬ್‌ ಬಂಧುಗಳು ಬೆಳಗ್ಗೆಯಿಂದ ಆಸ್ಪತ್ರೆ ಅಲೆದರೂ ಪರಿಹಾರ ಸಿಕಿಲ್ಲ. ನಮಗೆ ಅನ್ಯಾಯವಾಗಿದೆ. ನಮಗೆ ಯಾರೂ ನ್ಯಾಯ ನೀಡುತ್ತಾರೆ ಎಂದು ಪ್ರಶ್ನಿಸುತ್ತಲೇ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಕಂಡಿಸಿದರು. ಉಸಿರಾಟ ತೊಂದರೆಯಿಂದ ನರಳಿದರೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ಪ್ರವೇಶ ದೊರಕದೆ ಅಯ್ಯೂಬ್‌ ಸಾವನ್ನಪ್ಪಿದ್ದಾನೆಂದು ದೂರದ ಬಂಧುಗಳು ಪೊಲೀಸರ ಬೆದರಿಕೆಯಿಂದಾಗಿ ಶವ ಸಮೇತ ಆಟೋ ಜೊತೆಗೆ ಅಲ್ಲಿಂದ ಸಾಗಿದ್ದಾರೆ.

ಈ ಹಿಂದೆ ಅಯ್ಯೂಬ್‌ನ ಕೋವಿಡ್‌ ಪರೀಕ್ಷೆ ನಡೆಸಿದಾಗ ನೆಗೆಟಿವ್‌ ವರದಿ ಬಂದಿದ್ದರೂ ಜಿಮ್ಸ್‌ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
 

click me!