ಬೆಳಗಾವಿ: ಅರ್ಹರು ಪಿಂಚಣಿ ಪಡೆಯಲೂ ಅಲೆದಾಟ, ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ..!

By Kannadaprabha NewsFirst Published Jul 31, 2020, 2:07 PM IST
Highlights

ಅಧಿಕಾರಿಗಳ ವಿಳಂಬ ನೀತಿಗೆ ಜನರಿಂದ ಆಕ್ರೋಶ| ಸರ್ಕಾರಗಳು ಬಡವರ್ಗದ ಜನರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ವಿಧವಾ, ವಯೋವೃದ್ಧ, ವಿಕಲಚೇತನ ಸೇರಿದಂತೆ ಇನ್ನಿತರೆ ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದ ಸರ್ಕಾರ|

ಜಗದೀಶ ವಿರಕ್ತಮಠ 

ಬೆಳಗಾವಿ(ಜು.31): ಕಷ್ಟ ಕಾಲದಲ್ಲಿ ಸ್ವಲ್ಪ ಮಟ್ಟಿಗೆ ಆಶ್ರಯವಾಗಲಿ ಎಂಬ ಉದ್ದೇಶದಿಂದ ಸರ್ಕಾರ ವಿವಿಧ ರೀತಿಯಲ್ಲಿ ಮಾಸಿಕ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅರ್ಹರು ನಿತ್ಯ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ.

ಸರ್ಕಾರಗಳು ಬಡವರ್ಗದ ಜನರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ವಿಧವಾ, ವಯೋವೃದ್ಧ, ವಿಕಲಚೇತನ ಸೇರಿದಂತೆ ಇನ್ನಿತರೆ ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಅರ್ಹರಿಗಿಂತ ಅನರ್ಹರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಗಳ ಲಾಭ ಪಡೆಯುವಂತೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಪಿಂಚಣಿ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ ಹಾಗೂ ಉಪತಹಶೀಲ್ದಾರರೆ ಮೇಲಿಂದ ಮೇಲೆ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ಗುರುತಿಸಬೇಕು. ಆದರೆ ಬಡವರ್ಗದ ಹಾಗೂ ಅವಿದ್ಯಾವಂತರು ತಮಗೆ ಪಿಂಚಣಿ ಯೋಜನೆಗಳು, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾರಸಾ ಹಾಗೂ ವಾಸಸ್ಥಳ ಪ್ರಮಾಣ ಪತ್ರಗಳನ್ನು ಪಡೆಯಬೇಕೆಂದಲ್ಲಿ ಬೆಳಗಾವಿ ತಾಲೂಕಿನ ಜನರು ಹೈರಾಣಾಗಿದ್ದಾರೆ. ಅಲ್ಲದೇ ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸುಪ್ರೀಂ ಆದೇಶದಂತೆ ಹೆಚ್ಚುತ್ತಾ ವೃದ್ಧರ ಪಿಂಚಣಿ?

ಬೆಳಗಾವಿ ತಹಶೀಲ್ದಾರ ಕಚೇರಿಯಲ್ಲಿ ಕಚೇರಿ ಸಿಬ್ಬಂದಿಗಿಂತ ಮಧ್ಯವರ್ತಿಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಅವರು ತಹಶೀಲ್ದಾರ ಕಚೇರಿಗೆ ಸಂಬಂಧಿಸಿದ ಸಿಬ್ಬಂದಿ ಎಂಬ ರೀತಿಯಲ್ಲಿ ವರ್ತಿಸುವುದಲ್ಲದೇ, ನೇರವಾಗಿ ಸಂಬಂಧಿಸಿದ ಅಧಿಕಾರಿಗಳ ಕೊಠಡಿಗೆ ತೆರಳಿ ಸಹಿಗಳನ್ನು ಮಾಡಿಕೊಳ್ಳುತ್ತಾರೆ. ಒಂದು ವೇಳೆ ಜನಸಾಮಾನ್ಯರು ನೇರವಾಗಿ ಕಚೇರಿಗೆ ಹೋದರೆ ಕೆಲಸಗಳು ನಿಗದಿತ ಅವಧಿಯಲ್ಲಿ ಆಗುವುದೇ ಇಲ್ಲ. ಇಲ್ಲಿ ಏನಿದ್ದರೂ, ಕೆಲವು ಗ್ರಾಮ ಲೆಕ್ಕಾಧಿಕಾರಿ ಅಥವಾ ಮಧ್ಯವರ್ತಿಗಳ ಮೂಲಕವೇ ಬರಬೇಕು. ಮಧ್ಯವರ್ತಿಗಳು ಹಾಗೂ ಕೆಲವು ಗ್ರಾಮ ಲೆಕ್ಕಾಧಿಕಾರಿಗಳು ಪಿಂಚಣಿ ಮಾಡಿಕೊಡಲು, ಜಾತಿ ಮತ್ತು ಆದಾಯ, ವಾಸಸ್ಥಳ, ವಾರಸಾ ಪ್ರಮಾಣ ಪತ್ರ ನೀಡಲು ಹಿರಿಯ ಅಧಿಕಾರಿಗಳ ಹೆಸರಿನಲ್ಲಿಯೇ ಹಣವನ್ನು ಪಡೆಯುತ್ತಿರುವ ಆರೋಪ ಕೇಳಿಬಂದಿದೆ.

ಬೆಳಗಾವಿ ತಹಶೀಲ್ದಾರ ಕಚೇರಿಯಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೇರೂರಿರುವ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸಿಬ್ಬಂದಿ ಆಡಳಿತದಿಂದ ಹಿರಿಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಬೆಳಗಾವಿ ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಮಧ್ಯವರ್ತಿಗಳೇ ಹಿರಿಯ ಅಧಿಕಾರಿಗಳು ಎಂಬಂತೆ ಹಣ ವಸೂಲಿ ಕಾರ್ಯ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಕಚೇರಿಯಲ್ಲಿ ಕಡತಗಳು ಯಾವ ಹಂತದಲ್ಲಿವೆ, ಸಹಿ ಆಗಿದೆಯಾ ಅಥವಾ ಇಲ್ಲವಾ ಎಂಬ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಅರ್ಜಿದಾರರಿಗೆ ನೀಡುವಷ್ಟುನೆಟ್‌ವರ್ಕ್ ಸಿದ್ದಪಡಿಸಿಕೊಂಡಿದ್ದಾರೆ. ಸರಿಯಾಗಿ ಕೆಲಸ ಮಾಡುವಂತೆ ತಿಳಿಸಿದ್ದಲ್ಲಿ ವ್ಯವಸ್ಥಿತವಾಗಿ ಅಧಿಕಾರಿಗಳ ಹೆಸರಿಗೆ ಮಸಿ ಬಳಿಯುವ ಕಾರ್ಯವನ್ನು ಮಾಡುತ್ತಾರೆ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಬಡವರ್ಗದ ಜನರಿಗೆ ಕಷ್ಟದ ಸಮಯದಲ್ಲಿ ಸಹಾಯವಾಗಲಿ ಎಂಬ ಸದುದ್ದೇಶದಿಂದ ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪಿಂಚಣಿ ಯೋಜನೆ ಹಾಗೂ ವಿವಿಧ ಪ್ರಮಾಣ ಪತ್ರ ನೀಡಲು ಹೆಚ್ಚಿನ ಹಣ ವಸೂಲಿ ಮಾಡುವವರ ಹಾಗೂ ಮಧ್ಯವರ್ತಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಬರುವ ದಿನಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. 
 

click me!