ಕಾಫಿನಾಡಿನಲ್ಲಿ ನಿರಾಶ್ರಿತರ ಪುನರ್ವಸತಿ ಯೋಜನೆ ಹಳ್ಳ ಹಿಡಿಯಿತೇ?

By Kannadaprabha News  |  First Published May 27, 2020, 12:11 PM IST

ಕಳೆದ ವರ್ಷ ಆಗಸ್ಟ್‌ 3ರಂದು ಮೂಡಿಗೆರೆ ತಾಲೂಕಿನಲ್ಲಿ ಸಂಭವಿಸಿದ ಮಹಾಮಳೆ ಜನರನ್ನು  ಅಕ್ಷರಶಃ ನಿರ್ಗತಿಕರನ್ನಾಗಿ ಮಾಡಿತ್ತು. ಅವರಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಈಗ ಎಲ್ಲಿಯವರೆಗೆ ಬಂದಿದೆ ಎನ್ನುವುದರ ಬಗ್ಗೆ ಬೆಳಕು ಚೆಲ್ಲುವ ವರದಿ ಇಲ್ಲಿದೆ ನೋಡಿ.


ಆರ್‌.ತಾರಾನಾಥ್‌, ಕನ್ನಡಪ್ರಭ

ಚಿಕ್ಕಮಗಳೂರು(ಮೇ.27): ಬೆಟ್ಟಗಳ ಸ್ಫೋಟ, ಭೂಮಿಯೇ ಬಾಯಿಬಿಟ್ಟ ಸದ್ದು, ನದಿಯಂತೆ ಹರಿದ ಕಾಲುವೆಗಳು, ಎಲೆಗಳಂತೆ ಮನೆಗಳು ತೇಲಿಹೋದವು. 9 ಮಂದಿ ಪ್ರಾಣ ಕಳೆದುಕೊಂಡರು. ಕಳೆದ ವರ್ಷ ಆಗಸ್ಟ್‌ 3ರಂದು ಮೂಡಿಗೆರೆ ತಾಲೂಕಿನಲ್ಲಿ ಸಂಭವಿಸಿದ ಮಹಾಮಳೆ ರುದ್ರನರ್ತನದ ಭಯನಕ ಚಿತ್ರಣವಿದು.

Tap to resize

Latest Videos

ಈ ಮಹಾಮಳೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರಧನ ದೊರೆಯಿತು. ಆದರೆ, ಸಂಪೂರ್ಣವಾಗಿ ಮನೆ ಮತ್ತು ತೋಟಗಳನ್ನು ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಜಿಲ್ಲಾಡಳಿತಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅತಂತ್ರವಾಗಿದ್ದ ಜನರನ್ನು ರಕ್ಷಿಸಲು ಅವರನ್ನು ನಿರಾಶ್ರಿತರ ಕೇಂದ್ರಗಳಿಗೆ ಕರೆದುಕೊಂಡು ಬಂದು ವಾಸ್ತವ್ಯದ ವ್ಯವಸ್ಥೆ ಮಾಡಲಾಯಿತು. ಮನೆ ಕಳೆದುಕೊಂಡವರ ಪಟ್ಟಿಸಿದ್ಧಪಡಿಸಿ ಕೂಡಲೇ ತಮಗೆ ಕಳಿಸಿಕೊಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿತು. ಆಗ ತಕ್ಷಣ ಜಿಲ್ಲಾಡಳಿತ ನಿರಾಶ್ರಿತರ ಕೇಂದ್ರದಲ್ಲಿರುವ ಜನರು ಕೊಟ್ಟಮಾಹಿತಿಯನ್ನು ಬ್ಯಾಂಕ್‌ ಖಾತೆಯ ಸಹಿತ ದಾಖಲು ಮಾಡಿತು. ತಕ್ಷಣವೇ ಸರ್ಕಾರ ಮೂಡಿಗೆರೆ ತಾಲೂಕಿನ 364 ಕುಟುಂಬಗಳಿಗೆ ಮನೆಗಳನ್ನು ಕಟ್ಟಿಕೊಳ್ಳಲು ತಲಾ 1 ಲಕ್ಷ ರುಪಾಯಿ ಬಿಡುಗಡೆ ಮಾಡಿತು.

ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪಿಯು ಮೌಲ್ಯಮಾಪನ ವ್ಯವಸ್ಥೆಗೆ ಒತ್ತಾಯ

ಹಣ ಖಾತೆಗೆ ಜಮೆ ಆಗುತ್ತಿದ್ದಂತೆ ಹಲವು ಮಂದಿ ಕೂಡಲೇ ಡ್ರಾ ಮಾಡಿಕೊಂಡರು. ಆದರೆ, ಕೆಲವರು ಹಣವನ್ನು ಬಿಡಿಸಿಕೊಳ್ಳಲಿಲ್ಲ. ಹಣವನ್ನು ಡ್ರಾ ಮಾಡಿಕೊಂಡಿರುವವರ ಪೈಕಿ ಕೆಲವರು ಮಳೆಯಿಂದ ಬಿದ್ದುಹೋದ ಮನೆಗಳನ್ನು ರಿಪೇರಿ ಮಾಡಿಕೊಂಡರು. ಮತ್ತೆ ಕೆಲವರು ಭಯಗೊಂಡ ಮನೆಯಿಂದ ಹೊರಗೆ ಬಂದಿದ್ದರು. ಅಂಥವರ ಮನೆಗಳು ವಾಸಕ್ಕೆ ಯೋಗ್ಯವಾಗಿವೆ.

ಸ್ಥಳಾಂತರಕ್ಕೆ ನಕಾರ:

ಕಳೆದ ವರ್ಷದ ಮಹಾಮಳೆಯಿಂದ ಬೇರೆಡೆಗೆ ಸ್ಥಳಾಂತರಗೊಳ್ಳಲು 14 ಗ್ರಾಮಗಳ 364 ಕುಟುಂಬಗಳು ಒಪ್ಪಿಕೊಂಡು ಮನೆ ನಿರ್ಮಾಣ ಮಾಡಿಕೊಳ್ಳಲು ತಾಲೂಕು ಆಡಳಿತಕ್ಕೆ ಪ್ರಮಾಣಪತ್ರವನ್ನು ಸಲ್ಲಿಸಿವೆ. ಪುನರ್ವಸತಿಗಾಗಿ ಮೂಡಿಗೆರೆ ತಾಲೂಕಿನ ಅಂಗಡಿ, ಮಾವಿನಕೆರೆ ಹಾಗೂ ಬಿ.ಹೊಸಳ್ಳಿಯಲ್ಲಿ ಒಟ್ಟು 16.39 ಎಕರೆ ಜಾಗವನ್ನು ಗುರುತು ಮಾಡಿ ಸೈಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ಫಲಾನುಭವಿಗಳಿಗೆ ಹಂಚಿಕೆ ಮಾತ್ರ ಬಾಕಿ ಉಳಿದುಕೊಂಡಿದೆ.

ಇಂತಹ ಸಂದರ್ಭ 133 ಕುಟುಂಬಗಳು ತಾವು ಈಗ ವಸತಿಗಾಗಿ ಗುರುತು ಮಾಡಿರುವ ಜಾಗ ಸೂಕ್ತವಲ್ಲ. ಮನೆ ಒಂದೆಡೆ ಇದ್ದರೆ, ಸಾಗುವಳಿ ಮಾಡುವ ಜಮೀನು ಇನ್ನೊಂದೆಡೆ ಇದೆ. ಆದ್ದರಿಂದ ತಾವು ಹಾಲಿ ವಾಸವಾಗಿರುವ ಮನೆಗಳನ್ನು ಬಿಟ್ಟುಹೋಗುವುದಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿವೆ. ಅಂದರೆ, ಈ ಎಲ್ಲ ಕುಟುಂಬಗಳು ಈಗಾಗಲೇ ಸರ್ಕಾರದಿಂದ ಮನೆಗಳ ನಿರ್ಮಾಣಕ್ಕೆ ಕೊಟ್ಟಿರುವ .1 ಲಕ್ಷ ಬಳಸಿಕೊಂಡಿವೆ. ಈಗ ಹೊಸದಾಗಿ ಕೊಟ್ಟಿರುವ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಜನರಿಗೆ ಕೊಟ್ಟಿರುವ ಹಣ ವಸೂಲಿ ಹೇಗೆಂಬ ಯಕ್ಷಪ್ರಶ್ನೆ ಜಿಲ್ಲಾಡಳಿತದ ಮುಂದಿದೆ.

ಈ ವಿಚಾರದಲ್ಲಿ ಆಡಳಿತ ಯಂತ್ರ ಆರಂಭದಲ್ಲಿ ಎಡವಿದೆ. ಆದರೆ, ಜನರ ಅಂದಿನ ಪರಿಸ್ಥಿತಿ ಅನಿವಾರ್ಯವೂ ಸಹ ಆಗಿತ್ತು. ಆದ್ದರಿಂದ ಸರ್ಕಾರ ಹಣ ಬಿಡುಗಡೆ ಮಾಡಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೋರ್ವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಮತ್ತೆ ಆಪತ್ತು ಖಚಿತ:

ಮುಂಗಾರು ಮಳೆ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಲಿದೆ ಎಂದು ಈಗಾಗಲೇ ಹವಮಾನ ಇಲಾಖೆ ಹೇಳಿದೆ. ಕಳೆದ ವರ್ಷದಲ್ಲಿ ಮಹಾಮಳೆಗೆ ಆಗಿರುವ ಅನಾಹುತದಿಂದ ಜನರು ಇನ್ನು ಹೊರಗೆ ಬಂದಿಲ್ಲ. ಜರಿದ ಮನೆಗಳು, ರಸ್ತೆಗಳು ಹಾಗೆಯೇ ಇವೆ. ಆದ್ದರಿಂದ ಈ ವರ್ಷದಲ್ಲಿ ಮುಂಗಾರು ಮಳೆ ಜೋರಾದರೆ ಏನಾಗಬಹುದು ಎಂಬ ಆತಂಕ ಇಲ್ಲಿನ ಜನರಲ್ಲಿ ಮನೆ ಮಾಡಿದೆ.

ಸಂಪೂರ್ಣವಾಗಿ ಮನೆ ಮತ್ತು ತೋಟಗಳನ್ನು ಕಳೆದುಕೊಂಡವರ ಪಟ್ಟಿಮಾಡುವ ಸಂದರ್ಭದಲ್ಲಿ ಆಡಳಿತ ಯಂತ್ರ ಎಡವಿದೆ. ಹಲವು ಮಂದಿ ತಪ್ಪು ಮಾಹಿತಿ ಕೊಟ್ಟು ಸರ್ಕಾರದ ಪರಿಹಾರ ಧನವನ್ನು ಪಡೆದುಕೊಂಡರು. ಆದರೆ, ನಿಜವಾಗಿಯೂ ನಮ್ಮಂಥವರಿಗೆ ಅನ್ಯಾಯವಾಗಿದೆ. 5 ಎಕರೆ ಕಾಫಿ ತೋಟ, ವಾಸದ ಮನೆ ಹೋಯಿತು. ಈಗ ಬಾಡಿಗೆ ಮನೆಯಲ್ಲಿದ್ದೇವೆ. ಸರ್ಕಾರ ನಿರಾಶ್ರಿತರಾದ ಸಂದರ್ಭದಲ್ಲಿ ಬಾಡಿಗೆ ಮನೆಗಾಗಿ .25 ಸಾವಿರ ನೀಡಿತ್ತು. ಆನಂತರದಲ್ಲಿ ಮನೆಯಾಗಲಿ, ಜಮೀನಾಗಲಿ ಈವರೆಗೆ ಕೊಟ್ಟಿಲ್ಲ. ನಮಗೆ ತುಂಬಾ ತೊಂದರೆಯಾಗಿದೆ - ಅಶ್ವತ್‌, ಮಲೆಮನೆ
 

click me!