ಕೊಡಗು: ಹೋಂ ಸ್ಟೇಗಳ ನೋಂದಣಿ ಕಡ್ಡಾಯ, ಜು.30 ಗಡುವು

By Kannadaprabha News  |  First Published Jul 8, 2023, 3:00 AM IST

ಹೋಂ ಸ್ಟೇ ನೋಂದಣಿಗೆ ನಿಗದಿಪಡಿಸಲಾಗಿರುವ ದಿನಾಂಕದೊಳಗೆ ನೋಂದಣಿ ಮಾಡಿಕೊಳ್ಳದ ಹೋಂಸ್ಟೇಗಳನ್ನು ರದ್ದುಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಉಪ ವಿಭಾಗಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಡಾ.ಯತೀಶ ಉಲ್ಲಾಳ


ಮಡಿಕೇರಿ(ಜು.08):  ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇಗಳನ್ನು ಸರ್ಕಾರದ ಆದೇಶದನ್ವಯ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಈ ಸಂಬಂಧ ಹೋಂ-ಸ್ಟೇ ಮಾಲೀಕರಿಗೆ ಸಾಕಷ್ಟುಕಾಲಾವಕಾಶ ನೀಡಿದರೂ ಬಹಳಷ್ಟು ಹೋಂ-ಸ್ಟೇಗಳು ನೋಂದಣಿ ಆಗಿಲ್ಲ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ನೋಂದಣಿಯಾಗದ ಹೋಂಸ್ಟೇಗಳನ್ನು ಜು.30ರೊಳಗೆ ನೋಂದಾಯಿಸಲು ಸೂಚಿಸಲಾಗಿದೆ.

ಹೋಂ ಸ್ಟೇ ನೋಂದಣಿಗೆ ನಿಗದಿಪಡಿಸಲಾಗಿರುವ ದಿನಾಂಕದೊಳಗೆ ನೋಂದಣಿ ಮಾಡಿಕೊಳ್ಳದ ಹೋಂಸ್ಟೇಗಳನ್ನು ರದ್ದುಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಡಾ.ಯತೀಶ ಉಲ್ಲಾಳ ತಿಳಿಸಿದ್ದಾರೆ.

Tap to resize

Latest Videos

undefined

ಮಡಿಕೇರಿ: ಗೌರಿ ಕೊಲೆ ಆರೋಪಿಗಳ ಪರ ವಕೀಲಗೆ ನಕ್ಸಲರಿಂದ ಬೆದರಿಕೆ?: ದೂರು ದಾಖಲು

2015-20ನೇ ಸಾಲಿನಲ್ಲಿ ಹೋಂಸ್ಟೇ ನಡೆಸಲು ಪರವಾನಗಿ ನೀಡಿರುವ ಅವಧಿ ಐದು ವರ್ಷಗಳಿಗೆ ಮುಕ್ತಾಯಗೊಳ್ಳುತ್ತಿದ್ದು, ಅಂತಹ ಹೋಂಸ್ಟೇಗಳ ಪರವಾನಗಿ ನವೀಕರಿಸಬೇಕು. ಹೋಂಸ್ಟೇಗಳ ನೋಂದಣಿಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆಯು ಮಾರ್ಗಸೂಚಿ ಪ್ರಕಟಿಸಿದ್ದು, ಅಂತರ್ಜಾಲ ತಾಣದ ಮುಖಾಂತರ ನೋಂದಣಿ ಮಾಡಿಕೊಳ್ಳಲು ತಿಳಿಸಿದೆ.

ನೋಂದಣಿ ಮಾಡಲು ಭಾವಚಿತ್ರ, ಆಧಾರ್‌ ಕಾರ್ಡ್‌, ಹೋಂಸ್ಟೇಯ ಹೊರಾಂಗಣ, ಒಳಾಂಗಣ, ಕೊಠಡಿ ಛಾಯಾಚಿತ್ರಗಳು, ಹೋಂಸ್ಟೇ ಮಾಲೀಕತ್ವದ ದಾಖಲಾತಿ, ಪೊಲೀಸ್‌ ಇಲಾಖೆಯಿಂದ ನೀಡಲಾಗಿರುವ ನಿರಾಕ್ಷೇಪಣಾ ಪತ್ರ, ಸ್ಥಳೀಯ ಸಂಸ್ಥೆಯವರು ನೀಡಿರುವ ನಿರಾಕ್ಷೇಪಣಾ ಪತ್ರ. ವಾಸಸ್ಥಳ ದೃಢೀಕರಣ ಪತ್ರ, ನೋಂದಣಿ ಶುಲ್ಕ ರು.500 ಗಳ ಸ್ಕ್ಯಾ‌ನ್‌ ಮಾಡಿದ ದಾಖಲಾತಿಗಳನ್ನು ಅಂತರ್ಜಾಲ ತಾಣದಲ್ಲಿ ಅಪ್ಲೋಡ್‌ ಮಾಡಬೇಕು.
ಪರವಾನಗಿ ಪಡೆದು ಹೋಂಸ್ಟೇ ನಡೆಸುತ್ತಿರುವ ಮಾಲೀಕರು ಬರುವಂತಹ ಅತಿಥಿಗಳ ವಾಹನ ಸಂಖ್ಯೆ, ಗುರುತಿನ ಚೀಟಿಯ ವಿವರಗಳನ್ನು ನೋಂದಣಿ ಪುಸ್ತಕದಲ್ಲಿ ಕಡ್ಡಾಯವಾಗಿ ನಮೂದಿಸುವುದು. ಹೋಂಸ್ಟೇಗಳಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಅನಧಿಕೃತ ಚಟುವಟಿಕೆಗಳನ್ನು ನಡೆಸಬಾರದು. ಹೋಂಸ್ಟೇಗಳಲ್ಲಿ ಬಳಸುವಂತಹ ಗ್ಯಾಸ್‌ ಗೀಸರ್‌/ ಕರೆಂಟ್‌ ಗೀಸರ್‌ಗಳನ್ನು ಕಾಲಕಾಲಕ್ಕೆ ಸರಿಯಾಗಿ ನಿರ್ವಹಿಸುವುದು. ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಬೆಂಕಿ ನಂದಕವನ್ನು ಅಳವಡಿಸುವುದು ಕಡ್ಡಾಯ.

ಕೊಡಗು: ಕಳ್ಳತನಕ್ಕೆ ಬಂದು ಎಗ್‌ ಸಾಂಬಾರ್‌ ಮಾಡಿ ತಿಂದು, ನಿದ್ದೆ ಮಾಡಿ ಖದೀಮರು ಪರಾರಿ..!

ಹೋಂಸ್ಟೇನಲ್ಲಿರುವ ಸಿ.ಸಿ.ಟಿವಿಯ 45 ದಿನಗಳ ದೃಶ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಹಾಗೂ ಸಿಸಿ ಟಿವಿಯನ್ನು ಸರಿಯಾಗಿ ನಿರ್ವಹಿಸುವುದು. ಹಾರಂಗಿ ಹಿನ್ನೀರಿನ ಹಾಗೂ ಬಾಕ್‌ ವಾಟರ್‌ ಹಾಗೂ ಕಾವೇರಿ ನದಿ ದಂಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೋಂ-ಸ್ಟೇಗಳು ಮಳೆಗಾಲ ಸಮಯದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು. ಈ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಡಾ.ಯತೀಶ್‌ ಉಲ್ಲಾಳ್‌ ತಿಳಿಸಿದ್ದಾರೆ.

ಮಾಹಿತಿ ಇಲ್ಲದೆ ಅನಧಿಕೃತವಾಗಿ ನಡೆಸುತ್ತಿರುವಂತಹ ಹೋಂಸ್ಟೇಗಳ ಬಗ್ಗೆ ಸಾರ್ವಜನಿಕರು ದೂರು/ ಮಾಹಿತಿ ಇದ್ದಲ್ಲಿ ಅವುಗಳ ವಿವರಗಳನ್ನು ಪತ್ರ ಮುಖೇನ ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಚ್‌ ಹಿಲ್‌ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ 571201 ದೂರವಾಣಿ ಸಂಖ್ಯೆ:08272-200519 ಅಥವಾ ಈ-ಮೇಲ್‌ಗೆ ತಿಳಿಸಬಹುದು ಎಂದು ಉಪ ವಿಭಾಗಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

click me!