ಶಿಥಿಲವಾದ ಭದ್ರಾ ಕಾಲುವೆಗಳ ಮರು ನಿರ್ಮಿಸಿ: ಶಾಸಕ ಕೆ.ಎಸ್.ಬಸವಂತಪ್ಪ ಆಗ್ರಹ

By Kannadaprabha News  |  First Published Mar 2, 2024, 9:43 PM IST

ಜಿಲ್ಲೆಯ ಜೀವನಾಡಿ ಭದ್ರಾ ನಾಲೆಗಳು ಶಿಥಿಲಗೊಂಡಿದ್ದು, ಕಾಲುವೆಗಳ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ತಕ್ಷಣ 40 ಕೋಟಿ ರು.ಅನುದಾನ ಬಿಡುಗಡೆ ಮಾಡುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಚ್ಚುಕಟ್ಟು ರೈತರ ಪರ ವಿಧಾನಸೌಧದಲ್ಲಿ ಧ್ವನಿ ಎತ್ತಿ ಗಮನ ಸೆಳೆದರು. 


ದಾವಣಗೆರೆ (ಮಾ.02): ಜಿಲ್ಲೆಯ ಜೀವನಾಡಿ ಭದ್ರಾ ನಾಲೆಗಳು ಶಿಥಿಲಗೊಂಡಿದ್ದು, ಕಾಲುವೆಗಳ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ತಕ್ಷಣ 40 ಕೋಟಿ ರು.ಅನುದಾನ ಬಿಡುಗಡೆ ಮಾಡುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಚ್ಚುಕಟ್ಟು ರೈತರ ಪರ ವಿಧಾನಸೌಧದಲ್ಲಿ ಧ್ವನಿ ಎತ್ತಿ ಗಮನ ಸೆಳೆದರು. ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡಿ, ಮಾಯಕೊಂಡ ಕ್ಷೇತ್ರವೂ ಸೇರಿ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಶಿಥಿಲ ಕಾಲುವೆಗಳು, ಸೇತುವೆಗಳ ಮರು ನಿರ್ಮಿಸುವ ಮೂಲಕ ಅಚ್ಚುಕಟ್ಟು ರೈತರ ಹಿತ ಕಾಯಬೇಕು ಎಂದರು. ಕ್ಷೇತ್ರದ ವ್ಯಾಪ್ತಿಯಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶ ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 42 ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶವಿದೆ.

ಈ ಒಟ್ಟು ನೀರಾವರಿ ಪ್ರದೇಶ ರೈತರ ಜೀವನಾಡಿ. 1958ರಲ್ಲಿ ನಿರ್ಮಾಣವಾದ ಭದ್ರಾ ಕಾಲುವೆಗಳು, ಸೇತುವೆಗಳು ಶಿಥಿಲವಾಗಿ ಹಾಳಾಗಿವೆ. ಈ ವರೆಗೂ ಕಾಲುವೆಗಳು, ಸೇತುವೆಗಳ ನಿರ್ಮಾಣವಾಗಲೀ ಅಥವಾ ಆಧುನೀಕರಣವಾಗಲಿ ಆಗಿಲ್ಲ ಎಂದರು. ನಲ್ಕುಂದ ಬಳಿ ಕಾಲುವೆ ಸೇತುವೆ ಒಡೆದು, ನೀರು ರೈತರ ಗದ್ದೆಗಳಿಗೆ ನುಗ್ಗಿ, ಗದ್ದೆಗಳು ಜಲಾವೃತವಾಗಿ ಫಸಲಿಗೆ ಬಂದಿದ್ದ ಭತ್ತ ಹಾಳಾಗಿ, ರೈತರು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸಬೇಕಿತ್ತು. ಆಗ ಸಚಿವ ಎಸ್.ಎಸ್.ಮಲ್ಲಿಕಾರ್ಜುನರನ್ನು ಸಂಪರ್ಕಿಸಿದಾಗ ಅನುದಾನ ಬಿಡುಗಡೆ ಮಾಡಿ, ಬ್ರಿಡ್ಜ್ ನಿರ್ಮಿಸಿ, ರೈತರ ಹಿತ ಕಾಪಾಡಿದರು. ಈ ನಿಟ್ಟಿನಲ್ಲಿ ಸರ್ಕಾರ ಶಿಥಿಲವಾದ ಭದ್ರಾ ಕಾಲುವೆಗಳು, ಸೇತುವೆಗಳ ಮರು ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ, ಪ್ರಥಮಾದ್ಯತೆ ಮೇಲೆ ಕಾಮಗಾರಿ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

Latest Videos

undefined

ಸಿಎಂ ಸಿದ್ದರಾಮಯ್ಯ ಹಠದಿಂದ ಜಾತಿ ಜನಗಣತಿ ವರದಿ ಸ್ವೀಕಾರ: ಶಾಸಕ ಆರಗ ಜ್ಞಾನೇಂದ್ರ ಆರೋಪ

ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಮಾಯಕೊಂಡ ವ್ಯಾಪ್ತಿಯ ಭದ್ರಾ ಕಾಲುವೆಗಳು, ಸೇತುವೆಗಳ ನಿರ್ಮಿಸಿ, 6 ದಶಕ ಕಳೆದಿವೆ. ಕಾಲಕ್ರಮೇಣ ಕಾಲುವೆ, ಸೇತುವೆಗಳು ಶಿಥಿಲಗೊಂಡು, ರೈತರು ಬೆಳೆ ಬೆಳೆಯಲು ಸಾಕಷ್ಟು ತೊಂದರೆಯಾದ ವಿಚಾರ ಶಾಸಕ ಬಸವಂತಪ್ಪ ಪ್ರಸ್ತಾಪಿಸಿದ್ದು ಸತ್ಯಾಂಶವಾಗಿದೆ. 6 ದಶಕದಿಂದ ಹಿಂದಿನ ಕಾಲುವೆ, ಸೇತುವೆ ಮರು ನಿರ್ಮಿಸಬೇಕೆ ಅಥವಾ ಆಧುನೀಕರಣಗೊಳಿಸಬೇಕೆ ಎಂಬ ಬಗ್ಗೆ ಕಾಲುವೆ-ಸೇತುವೆಗಳ ಪರಿಶೀಲಿಸಿ, ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸುವೆ. ಅಧಿಕಾರಿಗಳ ವರದಿ ಸಲ್ಲಿಕೆಯಾದ ನಂತರ ಹಣದ ಲಭ್ಯತೆ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅರಣ್ಯ ವಾಸಿಗಳ ಒಕ್ಕಲೆಬ್ಬಿಸದಿರಿ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಬಸವಾಪಟ್ಟಣ ಹೋಬಳಿಯ ಅರಣ್ಯ ಪ್ರದೇಶದ ಪರಿಶಿಷ್ಟ ಜಾತಿ-ಪಂಗಡ ಮತ್ತು ಹಿಂದುಳಿದವರು ಕಳೆದ 6 ದಶಕದಿಂದ ಮನೆ ಕಟ್ಟಿ ವಾಸಿಸುತ್ತಿದ್ದು, ಆ ಜನರು, ಕುಟುಂಬಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಮಾಯಕೊಂಡ ಶಾಸಕ ಕೆ.ಎಸ್‌.ಬಸವಂತಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಿಧಾನಸೌಧ ಅಧಿವೇಶನದಲ್ಲಿ ಮಾತನಾಡಿ, 1975-76ರಲ್ಲಿ ಸೇಂದಿ ವನ, ಗೋಮಾಳ ಆಗಿದ್ದ ಜಾಗದಲ್ಲಿ ಆ ಕಾಲದಲ್ಲೇ ಪರಿಶಿಷ್ಟರು, ಹಿಂದುಳಿದವರು ಮನೆ ಕಟ್ಟಿ ವಾಸಿಸುತ್ತಿದ್ದಾರೆ. ನಂತರ ಅದು ಅರಣ್ಯ ವ್ಯಾಪ್ತಿಗೆ ಒಳಪಟ್ಟಿದೆ. ಇದರಿಂದಾಗಿ ಅಲ್ಲಿನ ನಿವಾಸಿಗಳಿಗೆ ದಿನದಿನಕ್ಕೂ ತೊಂದರೆಯಾಗುತ್ತಿದೆ ಎಂದರು.

ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕುರಿತ ಎಫ್‌ಎಸ್‌ಎಲ್‌ ವರದಿ ಬಂದಿಲ್ಲ: ಪರಮೇಶ್ವರ್‌

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಶಿವಮೊಗ್ಗ ವ್ಯಾಪ್ತಿಯ ಭದ್ರಾವತಿ ಅರಣ್ಯ ವಿಭಾಗ ವ್ಯಾಪ್ತಿಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಹೋಬಳಿ ವ್ಯಾಪ್ತಿಯ ಶೃಂಗಾರ ಬಾಗು ಗ್ರಾಮದ ರಿ.ಸ.ನಂ.16ರಲ್ಲಿ ಶೃಂಗಾರಬಾಗು ಮುಳ್ಳು ನಾಯಕನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ 44.34 ಎಕರೆ ಒತ್ತುವರಿಯಾಗಿದೆ. ಈ ಒತ್ತುವರಿ ತೆರವಿಗೆ ಈಗಾಗಲೇ ಅಧಿಕಾರಿಗಳು ನಿಯಮಾನುಸಾರ ಅರಣ್ಯ ಕಾಯ್ದೆ 1960ರಡಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ವಿಚಾರಣೆ ಮಾಡಿ, ತೆರವುಗೊಳಿಸುವ ಕಾರ್ಯ ಕೈಗೊಳ್ಳುತ್ತಾರೆ. ಶಾಸಕರೊಂದಿಗೆ ಚರ್ಚಿಸಿ, ಕಾಯ್ದೆಯನುಸಾರ ಏನು ಮಾಡಬಹುದೆಂಬ ಬಗ್ಗೆ ಕೂಲಂಕಷವಾಗಿ ಚರ್ಚಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

click me!