ಕೊಟ್ಟ ಕೊಟ್ಯಂತರ ರು. ಸಾಲ ವಾಪಸ್‌ ನೀಡದ್ದಕ್ಕೆ ನೊಂದು ಆತ್ಮಹತ್ಯೆ!

By Web DeskFirst Published Jun 30, 2019, 10:20 AM IST
Highlights

ಸ್ನೇಹಿತರಿಗೆ ಕೊಟ್ಟ ಕೊಟ್ಯಂತರ ರು. ಸಾಲ ವಾಪಸ್ ಬಾರದಿದ್ದಕ್ಕೆ ಮನನೊಂದು ಉದ್ಯಮಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು [ಜೂ.30] :  ಕೊಟ್ಟಸಾಲ ವಾಪಸ್‌ ನೀಡದ್ದಕ್ಕೆ ನೊಂದ ರಿಯಲ್‌ ಎಸ್ಟೇಟ್‌ ಏಜೆಂಟ್‌ವೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉದ್ಯಮಿ ಮೋಹನ್‌ ದಾಸ್‌(53) ಆತ್ಮಹತ್ಯೆ ಮಾಡಿಕೊಂಡವರು.

ಮೋಹನ್‌ ಹಾಸನ ಜಿಲ್ಲೆಯ ಮಲಸ್ವಾರ ಗ್ರಾಮದ ನಿವಾಸಿಯಾಗಿದ್ದು, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು. ಮೋಹನ್‌ದಾಸ್‌ ಅವರು ಅವಿವಾಹಿತರಾಗಿದ್ದು, ಒಬ್ಬರೇ ಕಮಲ ನೆಹರೂ ರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸುತ್ತಿದ್ದರು. ರಿಯಲ್‌ ಎಸ್ಟೇಟ್‌ ದಲ್ಲಾಳಿ ಹಾಗೂ ಬಾಡಿಗೆ ಮನೆ ಕೊಡಿಸುವ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಮೋಹನ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಮಧ್ಯಾಹ್ನ ಮನೆಯಲ್ಲಿ ಡೆತ್‌ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆರೆ ಮನೆಯವರು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ಹತ್ತು ವರ್ಷಗಳ ಹಿಂದೆ ಸ್ನೇಹಿತರೊಬ್ಬರಿಗೆ 1.25 ರು. ಕೋಟಿ ಹಣ ಸಾಲ ನೀಡಿದ್ದೆ. ಎಷ್ಟುಬಾರಿ ಕೇಳಿದರೂ ಹಣ ವಾಪಸ್‌ ನೀಡಲಿಲ್ಲ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ ಬರೆದಿಟ್ಟಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಯಶವಂತಪುರ ಪೊಲೀಸರು ಹೇಳಿದರು.

click me!