ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ ಮಾಡಿ ಎಂದು ಯಾರು ಹೇಳಿ ಕೊಟ್ಟಿಲ್ಲ. ಜನರ ಮನಸ್ಸಿನಲ್ಲಿರುವ ಭಾವನೆಗಳು ಸ್ಫೋಟಗೊಂಡಾಗ ಈ ರೀತಿ ಪ್ರತಿಭಟನೆ ಆಗುತ್ತದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ವರದಿ: ಶಶಿಧರ ಮಾಸ್ತಿಬೈಲು , ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಆ.19): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ ಮಾಡಿ ಎಂದು ಯಾರು ಹೇಳಿ ಕೊಟ್ಟಿಲ್ಲ. ಜನರ ಮನಸ್ಸಿನಲ್ಲಿರುವ ಭಾವನೆಗಳು ಸ್ಫೋಟಗೊಂಡಾಗ ಈ ರೀತಿ ಪ್ರತಿಭಟನೆ ಆಗುತ್ತದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು. ಅವರು ಶುಕ್ರವಾರ ಮಣಿಪಾಲದ ಕಂಟ್ರಿ ಇನ್ ಹೋಟೆಲಿನಲ್ಲಿ ಪತ್ರಕರ್ತ ಪ್ರಶ್ನೆಗೆ ಉತ್ತರಿಸಿದರು. ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾ ಬಂದಿದ್ದಾರೆ. ಸಾವರ್ಕರ್ ಅವಹೇಳನ ಸಹಿಸಿಕೊಳ್ಳಲು ಯುವ ಸಮುದಾಯ ಸಿದ್ಧವಿಲ್ಲ, ಸಿದ್ದರಾಮಯ್ಯಗೆ ಹಣೆ ಮೇಲೆ ಕುಂಕುಮ ಇಟ್ಟವರನ್ನು ಕಂಡರೆ ಆಗುವುದಿಲ್ಲ, ಸಾವರ್ಕರ್ ಫೋಟೋ ಕಂಡರೆ ಆಗಲ್ಲ, ತನ್ನ ನಡವಳಿಕೆ, ಹೇಳಿಕೆ, ಆಡಳಿತದಲ್ಲಿ ಪ್ರತ್ಯೇಕತೆಯ ಭಾವನೆ ತೋರಿಸುತ್ತಾರೆ ಇದನ್ನು ಕರ್ನಾಟಕದ ಜನ ಸಹಿಸುವುದಿಲ್ಲ, ಪ್ರತಿಭಟಿಸುತ್ತಿದ್ದಾರೆ ಎಂದರು
undefined
ಸಾವರ್ಕರ್ ಬಗ್ಗೆ ಹೇಳಿಕೆ ಕೊಡುವಾಗ ಪ್ರತಿಭಟನೆಯನ್ನು ಸಹಿಸುವ ಶಕ್ತಿಯೂ ಇರಬೇಕು, ಏನು ಬೇಕಾದರೂ ಹೇಳಿಕೆ ಕೊಟ್ಟು ಜೀರ್ಣ ಮಾಡಿಕೊಳ್ಳುತ್ತೇನೆ ಎನ್ನುವ ಕಾಲ ಹೊರಟು ಹೋಗಿದೆ. ಹೋರಾಟದ ಕಾರಣಕ್ಕೆ ಸಾವರ್ಕರ್ ಅವರನ್ನು ವೀರ ಸಾವರ್ಕರ್ ಎಂದು ಕರೆದಿದ್ದಾರೆ, ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಅಂದರೆ ಇತಿಹಾಸದ ಬಗ್ಗೆ ಅರ್ಧಂಬದ ತಿಳಿದುಕೊಂಡಿದ್ದಾರೆ ಎಂದರ್ಥ, ಸಾವರ್ಕರ್ ಅಂತಸತ್ವ ತಿಳಿದಿರುವ ಯಾರು ಅವರನ್ನು ಟೀಕಿಸಲು ಸಾಧ್ಯವಿಲ್ಲ ಎಂದರು.
ಸಿದ್ದರಾಮಯ್ಯನವರೇ ದಯಮಾಡಿ ಅಂಡಮಾನಿನ ಸೆಲ್ಯೂಲರ್ ಜೈಲು ನೋಡಿಕೊಂಡು ಬನ್ನಿ, ಸಮಾಜವಾದಿ ಎಂದು ಹೇಳಿಕೊಂಡು ಲಕ್ಷಾಂತರ ಜನರನ್ನು ಸೇರಿಸಿ ಹುಟ್ಟು ಹಬ್ಬ ಮಾಡುತ್ತೀರಿ. ಸಾವರ್ಕರ್ ಇದ್ದ ಜೈಲನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ, ಅವರು ನಡೆಸಿದ ಹೋರಾಟ ಮತ್ತು ಬ್ರಿಟಿಷರ ಕ್ರೂರತೆ ಯಾವ ರೀತಿ ಇತ್ತು ಅನ್ನೋದು ಗೊತ್ತಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಸಾವರ್ಕರ್ ಭಾವಚಿತ್ರ ಅಳವಡಿಸುತ್ತಿರುವ ವಿಚಾರವಾಗಿ ಮಾತನಾಡಿದ ಸುನಿಲ್,ಇಂತಹ ವಿದ್ಯಮಾನಗಳು ಇನ್ನಷ್ಟು ಜಾಸ್ತಿ ಆಗುತ್ತದೆ. ಸಾವರ್ಕರ್ ಈ ದೇಶದ ರಾಷ್ಟ್ರೀಯತೆಯ ಪ್ರತೀಕ, ಸಾವರ್ಕರ್ ಬಗ್ಗೆ ಅವ ಹೇಳನಕಾರಿಯಾಗಿ ಮಾತನಾಡಿದರೆ ಮೆರವಣಿಗೆಗಳು, ಕಾರ್ಯಕ್ರಮಗಳು, ಬ್ಯಾನರ್ ಗಳು, ಪುತ್ಥಳಿಗಳು ಮುಂದಿನ ದಿನಗಳಲ್ಲಿ ವ್ಯಾಪಕ ಆಗಲಿದೆ, ಸಾವರ್ಕರ್ ಹೆಸರು ಮುನ್ನಲೆಗೆ ಬರಲು ಸಿದ್ದರಾಮಯ್ಯನವರೇ ಕಾರಣವಾಗಿದ್ದಾರೆ ಎಂದರು.
ಸರ್ಕಾರವನ್ನು ಕೋಮುವಾದಿಗಳ ಮತ್ತು ಗೂಂಡಾಗಳ ಕೈಗೆ ಕೊಡಲಾಗಿದೆ: ಖಾದರ್ ಆಕ್ರೋಶ
ಸರ್ಕಾರಿ ಶಾಲೆಗಳಲ್ಲಿ ಗಣೇಶೋತ್ಸವಕ್ಕೆ ಆಕ್ಷೇಪ ವಿಚಾರ
ದೇಶದ ಸಂಪ್ರದಾಯ ಪರಂಪರೆಯನ್ನು ನಾವು ಉಳಿಸಿಕೊಳ್ಳುತ್ತೇವೆ. ಅನಗತ್ಯವಾಗಿ ವಿವಾದ ಮಾಡಬೇಡಿ, ಸರ್ಕಾರಿ ಶಾಲೆಗಳಲ್ಲಿ ಸಹಜವಾಗಿಯೇ ಸಾರ್ವಜನಿಕ ಗಣೇಶ ಉತ್ಸವಗಳು ನಡೆಯುತ್ತದೆ. ಶಾಲೆಯ ಆಟದ ಮೈದಾನದಲ್ಲಿ ಗಣೇಶೋತ್ಸವ ನಡೆಯುತ್ತದೆ, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ನಮ್ಮ ಸರಕಾರ ಸಹಿಸಿಕೊಳ್ಳುವುದಿಲ್ಲ ಎಂದರು.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದನ್ನು ಖಂಡಿಸುತ್ತೇನೆ: ಸಚಿವ ಸುಧಾಕರ್
ಹಿಂದೂ ಸಂಘಟನೆಗಳಿಂದ ಸಿದ್ದರಾಮಯ್ಯಗೆ ಜೀವ ಬೆದರಿಕೆ ಇದೆ ಎಂದು ಸಿದ್ದರಾಮಯ್ಯ ಪುತ್ರ ಶಾಸಕ ಯತೀಂದ್ರ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಜೀವ ಬೆದರಿಕೆ -ಭಯ ಇದ್ದರೆ ಸಿದ್ದರಾಮಯ್ಯ ದೂರು ಕೊಡಲಿ, ಸರಕಾರ ಭದ್ರತೆ ಕೊಟ್ಟಿದೆ ಇನ್ನಷ್ಟು ಕೊಡಲಿದೆ ಎಂದರು.