ಹಣಕ್ಕಾಗಿ ಗುರು ರಾಘವೇಂದ್ರ ಬ್ಯಾಂಕ್‌ ಮುಂದೆ ಗ್ರಾಹಕರ ದಂಡು!

By Kannadaprabha News  |  First Published Jan 14, 2020, 8:25 AM IST

ಠೇವಣಿ ಸಂಗ್ರಹ, ಹಣ ವಾಪಸ್‌ ಪಡೆಯುವುದು ಸೇರಿದಂತೆ ವ್ಯವಹಾರ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್‌  ರಾಘವೇಂದ್ರ ಸಹಕಾರಿ ಬ್ಯಾಂಕಿಗೆ ಷರತ್ತುಗಳನ್ನು ವಿಧಿಸಿದ ಹಿನ್ನೆಲೆಯಲ್ಲಿ ಆತಂಕಗೊಂಡ ಗ್ರಾಹಕರು ಹಣಕ್ಕಾಗಿ ಬ್ಯಾಂಕಿನ ಮುಂದೆ ಜಮಾಯಿಸಿದರು. 


ಬೆಂಗಳೂರು [ಜ.14]:  ನಗರದ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ಗೆ ಗ್ರಾಹಕರಿಂದ ಠೇವಣಿ ಸಂಗ್ರಹ, ಹಣ ವಾಪಸ್‌ ಪಡೆಯುವುದು ಸೇರಿದಂತೆ ವ್ಯವಹಾರ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್‌ ಷರತ್ತುಗಳನ್ನು ವಿಧಿಸಿದ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಠೇವಣಿದಾರರು ಸೋಮವಾರ ಸಹ ಬ್ಯಾಂಕ್‌ ಮುಂದೆ ಸಾಲುಗಟ್ಟಿನಿಂತು ಠೇವಣಿ ಹಣ ವಾಪಾಸ್‌ ನೀಡುವಂತೆ ಆಗ್ರಹಿಸಿದರು.

ಭಾರತೀಯ ರಿಸರ್ವ್ ಬ್ಯಾಂಕ್‌ ಜ.10ರಂದು ಸಾರ್ವಜನಿಕ ನೋಟಿಸ್‌ ಜಾರಿ ಮಾಡಿ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ಗೆ ಕೆಲವು ನಿರ್ದೇಶನ ನೀಡಿದೆ. ಆರ್‌ಬಿಐ ಅನುಮತಿ ಇಲ್ಲದೇ ಬ್ಯಾಂಕ್‌ ಯಾವುದೇ ಸಾಲ ನೀಡುವಂತಿಲ್ಲ ಹಾಗೂ ನವೀಕರಿಸುವಂತಿಲ್ಲ. ಕೇವಲ 35 ಸಾವಿರ ಮಾತ್ರ ವಾಪಾಸ್‌ ಪಡೆಯುವುದಕ್ಕೆ ಅವಕಾಶ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿತ್ತು. ಈ ಮಾಹಿತಿ ಪಡೆದ ನಂತರ ಗ್ರಾಹಕರು ಬ್ಯಾಂಕ್‌ನಲ್ಲಿಟ್ಟಿರುವ ಠೇವಣಿ ಮೊತ್ತದ ಬಗ್ಗೆ ಆತಂಕಗೊಂಡಿದ್ದರು. ಸೋಮವಾರ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಬ್ಯಾಂಕ್‌ಗೆ ಜಮಾಯಿಸಿ ಠೇವಣಿ ವಾಪಾಸ್‌ ನೀಡುವಂತೆ ಆಗ್ರಹಿಸಿದರು.

Latest Videos

undefined

ಬ್ಯಾಂಕ್‌ ವ್ಯವಹಾರದ ಬಗ್ಗೆ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರು ಯಾವುದೇ ಮಾಹಿತಿ ನೀಡಿಲ್ಲ ಎಂದು ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದರು. ಕಳೆದ 20 ವರ್ಷದಿಂದ ಬ್ಯಾಂಕ್‌ನಲ್ಲಿ ವ್ಯವಹಾರ ನಡೆಸುತ್ತಿದ್ದೇವೆ. ಏಕಾಏಕಿ ಈ ರೀತಿ ಆಗಿರುವುದು ತೀವ್ರ ತೊಂದರೆ ಉಂಟಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತ ನೌಕರರು, ಹಿರಿಯ ನಾಗರಿಕರು ಠೇವಣೆ ಇಟ್ಟಿದ್ದಾರೆ. ಮಕ್ಕಳ ಮದುವೆ, ಬದುಕಿನ ಕೊನೆಯ ದಿನದಲ್ಲಿ ಆಸರೆಗಾಗಿ ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದು, ಈ ರೀತಿಯಾದರೆ ಮುಂದೇನು ಎಂಬ ಆತಂಕವನ್ನು ಗ್ರಾಹಕರು ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರ್‌ಬಿಐ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ಗೆ ಷರತ್ತು ಹಾಕಿರುವುದಕ್ಕೆ ಕಾರಣ ತಿಳಿಯದ ಹಿನ್ನೆಲೆಯಲ್ಲಿ ಗ್ರಾಹಕರು ಮುಂದೇನು ಮಾಡಬೇಕು ಎಂದು ಚರ್ಚಿಸುತ್ತಿದ್ದರು. ಮತ್ತೊಂದು ಕಡೆ ಬ್ಯಾಂಕ್‌ ಸಿಬ್ಬಂದಿ ಆರ್‌ಬಿಐ ನಿರ್ದೇಶನದಂತೆ ಗರಿಷ್ಠ .35 ಸಾವಿರಗಳನ್ನು ಖಾತೆದಾರರಿಗೆ ಪಾವತಿ ಮಾಡುತ್ತಿದ್ದರು.

ಪೊಲೀಸ್‌ ಬಂದೋಬಸ್ತ್ :  ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದಿನವಿಡೀ ಸಾಕಷ್ಟುಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಸಭೆ ಮುಂದೂಡಿಕೆ :  ಆರ್‌ಬಿಐ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ಗೆ ಕೆಲವು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ ಆಡಳಿತ ಮಂಡಳಿ ಸೋಮವಾರ ಸಂಜೆ ಬಸವನಗುಡಿ ಮುಖ್ಯ ರಸ್ತೆಯ ಶ್ರೀರಾಮಕೃಷ್ಣ ಆಶ್ರಮದ ಮುಂಭಾಗದ ಶ್ರೀ ಗುರು ನರಸಿಂಹ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸುವುದಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಕಲ್ಯಾಣ ಮಂಟಪದಲ್ಲಿ ಭಾರೀ ಪ್ರಮಾಣದ ಗ್ರಾಹಕರು ಆಗಮಿಸಿದ್ದರಿಂದ ಸಭೆ ನಡೆಸುವುದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಸಭೆ ಮುಂದೂಡಲಾಗಿದೆ ಎಂದು ಬ್ಯಾಂಕ್‌ ಮೂಲಗಳು ಮಾಹಿತಿ ನೀಡಿವೆ.

click me!