ಅಧಿಕಾರ ದುರುಪಯೋಗ ಪಡಿಸಿಕೊಂಡ ಕುಮಾರಸ್ವಾಮಿ ವಿರುದ್ಧ ಕ್ರಮಕ್ಕೆ ಆಗ್ರಹ

By Kannadaprabha NewsFirst Published Oct 21, 2020, 8:55 AM IST
Highlights

ಎಚ್‌ಡಿಕೆ ವಿರುದ್ಧ ಕ್ರಮಕ್ಕೆ ರವಿಕೃಷ್ಣಾ ರೆಡ್ಡಿ ಆಗ್ರಹ| ಕಾನೂನು ಬಾಹಿರ ಕಾರ್ಯ ಒಪ್ಪಿಕೊಂಡ ಕುಮಾರಸ್ವಾಮಿ| ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಕುಟುಂಬದ 10-12 ಮಂದಿಗೆ ಸರ್ಕಾರಿ ಕೆಲಸ ಕೊಡಿಸಿರುವ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ ಕುಮಾರಸ್ವಾಮಿ| 

ಬೆಂಗಳೂರು(ಅ.21): ಕಾನೂನು ಬಾಹಿರ ಕಾರ್ಯಗಳನ್ನು ಸ್ವತಃ ಸಾರ್ವಜನಿಕವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ಮತ್ತು ಸರ್ಕಾರ ತಕ್ಷಣ ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಒತ್ತಾಯಿಸಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಅವರ ಕುಟುಂಬದ 10-12 ಮಂದಿಗೆ ಸರ್ಕಾರಿ ಕೆಲಸ ಕೊಡಿಸಿರುವ ಕುರಿತು ಕುಮಾರಸ್ವಾಮಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಕುರಿತು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ನ್ಯಾಯಯುತವಾಗಿ ದಕ್ಕಬೇಕಾಗಿದ್ದ ಸರ್ಕಾರಿ ನೌಕರಿಯನ್ನು ಕಳೆದುಕೊಂಡು ಅನ್ಯಾಯಕ್ಕೊಳಗಾದ ಅರ್ಹ ಅಭ್ಯರ್ಥಿಗಳು ರಾಜ್ಯದಲ್ಲಿ ಸಾವಿರಾರು ಮಂದಿ ಇದ್ದಾರೆ. ಅವರಿಗೆ ನೀಡದೆ ತಮಗೆ ಬೇಕಾದವರಿಗೆ ನೀಡಿರುವುದು ಸರಿಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಂಹ ಬಂದ್ರೆ ಘರ್ಜನೆ, ಹುಲಿ ಬಂದ್ರೆ ವೇಗ, ಕುಮಾರಣ್ಣ ಬಂದ್ರೆ.....ಶರವಣ ಫಿಲ್ಮಿ ಡೈಲಾಗ್

ಕೆಪಿಎಸ್‌ಸಿಯ ಅತಿ ಭ್ರಷ್ಟ ಅಧ್ಯಕ್ಷ ಎಂಬ ಆರೋಪಕ್ಕೆ ಒಳಗಾಗಿರುವ ಎಚ್‌.ಎನ್‌.ಕೃಷ್ಣ ಜೆಲಿನಿಂದ ಬಿಡುಗಡೆಯಾಗುವಾಗ ಅವರನ್ನು ಕಾರಿನಲ್ಲಿ ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡು ಕುಮಾರಸ್ವಾಮಿ ಕರೆತಂದರು. ಮೋಸಕ್ಕೊಳಗಾದ ಬಡವ ಮತ್ತು ದುರ್ಬಲರ ಶಾಪ ಕಠೋರವಾಗಿರುತ್ತದೆ. ನ್ಯಾಯಾಂಗ ಮತ್ತು ಸರ್ಕಾರಕ್ಕೆ ಕನಿಷ್ಠ ಮಟ್ಟದ ಜವಾಬ್ದಾರಿ ಇದ್ದರೆ ತಮ್ಮ ಕಾನೂನುಬಾಹಿರ ಕೃತ್ಯಗಳನ್ನು ಸ್ವತಃ ಸಾರ್ವಜನಿಕವಾಗಿ ಒಪ್ಪಿಕೊಂಡಿರುವ ಕುಮಾರಸ್ವಾಮಿ ವಿರುದ್ಧ ತಕ್ಷಣ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕು. ವಿಚಾರಣೆ ನಡೆಸಿ ಶಿಕ್ಷೆಗೊಳಪಡಿಸಬೇಕು ಎಂದಿದ್ದಾರೆ.

ಮಾಡಿದ ಪಾಪದಿಂದ ಎಲ್ಲರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜೀವನದ ಯಾವುದೋ ಒಂದು ತಿರುವಿನಲ್ಲಿ ಪಾಪಕ್ಕೆ ತಕ್ಕ ಶಿಕ್ಷೆ ಆಗಿಯೇ ಆಗುತ್ತದೆ. ಕೆಲವರಿಗೆ ಪದೇ ಪದೇ ಏಟಿನ ಮೇಲೆ ಏಟು ಬೀಳುತ್ತಿರುತ್ತದೆ. ಪ್ರಜ್ಞಾವಂತ ಸಮಾಜದಿಂದಾಗುವ ಅವಮಾನ ಮತ್ತು ತಿರಸ್ಕಾರಕ್ಕಿಂತ ದೊಡ್ಡ ಶಿಕ್ಷೆ ಯಾವುದೂ ಇಲ್ಲ. ಸಮಯವೇ ದೊಡ್ಡ ಯಮಧರ್ಮರಾಯ ಎಂದು ಹೇಳಿದ್ದಾರೆ.
 

click me!