ಅಪರಾಧ ಲೋಕದ ಪಾತಕಿ ರವಿ ಪೂಜಾರಿ ಶೀಘ್ರ ಶಿವಮೊಗ್ಗಕ್ಕೂ ಬರುತ್ತಿದ್ದಾನೆ. ಇಲ್ಲಿಯೂ ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು ಈ ನಿಟ್ಟಿನಲ್ಲಿ ವಿಚಾರಣೆ ನಡೆಸಲಾಗುತ್ತದೆ.
ಗೋಪಾಲ್ ಯಡಗೆರೆ
ಶಿವಮೊಗ್ಗ[ಫೆ.27]: ಪೊಲೀಸರಿಂದ ದಕ್ಷಿಣ ಆಫ್ರಿಕಾದಲ್ಲಿ ಬಂಧಿಸಲ್ಪಟ್ಟ ಭೂಗತ ಲೋಕದ ಪಾತಕಿ ರವಿ ಪೂಜಾರಿಯ ಸಂಬಂಧ ಶಿವಮೊಗ್ಗಕ್ಕೂ ಇದ್ದು, ಈತನನ್ನು ವಿಚಾರಣೆಗೆ ಒಳಪಡಿಸಲು ಶಿವಮೊಗ್ಗ ಪೊಲೀಸರು ಮುಂದಾಗಿದ್ದಾರೆ.
ಹೀಗಾಗಿ ಶೀಘ್ರದಲ್ಲಿಯೇ ರವಿ ಪೂಜಾರಿಯನ್ನು ಶಿವಮೊಗ್ಗಕ್ಕೆ ಕರೆ ತರುವ ನಿರೀಕ್ಷೆಯಿದೆ. ರವಿ ಪೂಜಾರಿ ಶಿವಮೊಗ್ಗದ ಹಲವರಿಗೆ ಬೆದರಿಕೆ ಕರೆ ಮಾಡಿದ್ದು, ಈ ಸಂಬಂಧ ಇಲ್ಲಿ ಹಲವು ಪ್ರಕರಣ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ರವಿ ಪೂಜಾರಿಯನ್ನು ಇಲ್ಲಿಗೆ ಕರೆ ತರುವ ಸಾಧ್ಯತೆ ಹೆಚ್ಚಿದೆ.
ಶಿವಮೊಗ್ಗದೊಂದಿಗೆ ನಂಟು: ಬೆಂಗಳೂರು, ಮುಂಬೈ, ಮಂಗಳೂರುಗಳಲ್ಲಿ ಹಲವರಿಗೆ ಜೀವ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ ದಂಧೆ ನಡೆಸಿದ್ದ ರವಿ ಪೂಜಾರಿಯ ಕಬಂಧ ಬಾಹು ಘಟ್ಟನಗರಿ ಶಿವಮೊಗ್ಗಕ್ಕೂ ವಿಸ್ತರಿಸಿತ್ತು. ಇಲ್ಲಿನ ಅನೇಕ ಉದ್ಯಮಿ ಅದರಲ್ಲಿಯೂ ಮುಖ್ಯವಾಗಿ ಅಡಕೆ ಉದ್ಯಮಿಗಳಿಗೆ ಈತ ಹಣಕ್ಕಾಗಿ ಬೆದರಿಕೆ ಒಡ್ಡಿದ್ದ. ಈ ಸಂಬಂಧ ಇಲ್ಲಿ ದೂರು ಕೂಡ ದಾಖಲಿಸಲಾಗಿದೆ.
ಶಿವಮೊಗ್ಗದ ರವೀಂದ್ರ ನಗರದ 100 ಅಡಿ ರಸ್ತೆಯಲ್ಲಿ ನಿವಾಸ ಹೊಂದಿರುವ ಪ್ರಮುಖ ಅಡಕೆ ಮಂಡಿ ವ್ಯಾಪಾರಸ್ಥರು ಹಾಗೂ ಮರಳು ವ್ಯಾಪಾರದಲ್ಲಿ ತೊಡಗಿಕೊಂಡಿರುವ ಪ್ರಮುಖರಿಗೆ ರವಿ ಪೂಜಾರಿ ಹೆಸರಿನಲ್ಲಿ ಬಂದಿದ್ದ ಜೀವ ಬೆದರಿಕೆ ಹಾಗೂ ಹಣಕ್ಕಾಗಿನ ಬ್ಲ್ಯಾಕ್ ಮೇಲ್ ಗೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಲವು ದೂರು ದಾಖಲಾಗಿವೆ. ಮರಳು ಗುತ್ತಿಗೆಯಲ್ಲಿ ಈತನ ಪಾತ್ರ ಕುರಿತಂತೆ ವರದಿ ಪ್ರಕಟವಾಗಿತ್ತು.
4 ಹೆಸರು ಇಟ್ಟುಕೊಂಡಿದ್ದ ರವಿ ಪೂಜಾರಿ!.
ಎರಡು ವರ್ಷದ ಹಿಂದೆ ಜಿಲ್ಲೆಯ ಮರಳು ಕ್ಯಾರಿಗಳ ಹರಾಜು ಸಂದರ್ಭದಲ್ಲಿ ಸಾಗರ ರಸ್ತೆಯ ಕ್ಲಬ್ ವೊಂದರಲ್ಲಿ ಟೆಂಡರ್‌ದಾರರು ಸೇರಿ ಸಭೆ ನಡೆಸುತ್ತಿದ್ದ ವೇಳೆ ಸಭೆಯಲ್ಲಿದ್ದ ಕೆಲವರಿಗೆ ರವಿ ಪೂಜಾರಿ ಮೊಬೈಲ್ ಕರೆ ಮಾಡಿ ಮರಳು ಕ್ವಾರಿಯ ಹರಾಜಿನಲ್ಲಿ ಭಾಗವಹಿಸದಂತೆ ಬೆದರಿಕೆಯೊಡ್ಡಿ ದ್ದಲ್ಲದೆ ತನ್ನವರಿಗೆ ಅನುಕೂಲ ಮಾಡುವಂತೆ ಸೂಚಿಸಿದ್ದ ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ನಿದರ್ಶನ ಎಂಬಂತೆ ಆನ್ ಲೈನ್ ಹರಾಜಿನಲ್ಲಿ ಬೆರಳೆಣಿಕೆಯಷ್ಟು ಟೆಂಡರ್‌ದಾರರು ಭಾಗವಹಿಸಿದ್ದರು.
ಪೊಲೀಸರು ಇಟ್ಟುಕೊಂಡ ದಾಖಲೆ ಕಂಡು ಹೌಹಾರಿದ ಪೂಜಾರಿ...
ಬಾಡಿ ವಾರೆಂಟ್‌ಗೆ ಕೋರಿಕೆ?: ಬೆಂಗಳೂರಿನ ಪೊಲೀಸರ ತನಿಖೆ ಪೂರ್ಣಗೊಂಡ ಬಳಿಕ ಬಾಡಿ ವಾರೆಂಟ್ ಮೂಲಕ ರವಿ ಪೂಜಾರಿಯನ್ನು ಶಿವಮೊಗ್ಗಕ್ಕೆ ಕರೆತಂದು ವಿಚಾರಣೆಗೊಳಪಡಿಸುವ ಕುರಿತು ಪೊಲೀಸರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಪೂಜಾರಿಯ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ನೀಡಿದ್ದು ಮುಂದಿನ ಕ್ರಮಕ್ಕೆ ಅವರ ಸೂಚನೆಯನ್ನು ಕಾಯಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.