ರಾಮನಗರದಲ್ಲಿ ನಡೆದ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಇದೀಗ ಈ ಪ್ರಕರಣಕ್ಕೆ ರವಿ ಚನ್ನಣ್ಣನವರ್ ಎಂಟ್ರಿಯಾಗಿದೆ.
ಕುದೂರು (ಅ.14): ಬೆಟ್ಟಹಳ್ಳಿ ಗ್ರಾಮದ ಯುವತಿ ಹೇಮಲತಾ ಕೊಲೆಯ ಪ್ರಕರಣದ ತನಿಖೆ ಜವಾಬ್ದಾರಿಯನ್ನು ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧೀಕ್ಷಕ ರವಿ ಡಿ. ಚನ್ನಣ್ಣನವರ್ ಅವರಿಗೆ ವಹಿಸಿದೆ.
ಯುವತಿ ಹೇಮಲತಾ ಕೊಲೆ ಪ್ರಕರಣ ವಿವಿಧ ರೀತಿಯ ತಿರುವುಗಳನ್ನು ಪಡೆಯುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಜತೆಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಕೊಲೆ ರಹಸ್ಯ ಬೇಧಿಸುವ ಕೆಲಸ ರವಿ ಡಿ.ಚನ್ನಣ್ಣನವರ್ ಹೆಗಲಿಗೆ ಬಂದಿದೆ.
ಕಳೆದ ಅ. 8ರಂದು ಬೆಟ್ಟಹಳ್ಳಿ ಗ್ರಾಮದ 19 ವರ್ಷದ ಹೇಮಲತಾ ಕಾಣೆಯಾಗಿದ್ದಳು. ನಿರಂತರ ಹುಡುಕಾಟದ ನಂತರ ಮಾವಿನ ತೋಟದಲ್ಲಿ ಶವವಾಗಿ ಪತ್ತೆಯಾದಳು. ಪೊಲೀಸರು ಪುನೀತ್ ಎಂಬ ಯುವಕನನ್ನು ವಿಚಾರಣೆಗೆ ಕರೆದೊಯ್ದಿದ್ದರು. ಇದರ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಯುವತಿಯದು ಕೊಲೆ, ಅತ್ಯಾಚಾರ, ಮರ್ಯಾದೆ ಹತ್ಯೆ ಹೀಗೆ ವಿವಿಧ ರೀತಿಯ ವದಂತಿಗಳು ಹರಿದಾಡುತ್ತಿವೆ.
ಲಾಂಗು, ಮಚ್ಚು ಝಳಪಿಸಿದ್ರೆ ಪಿಸ್ತೂಲು ಸದ್ದು: ರವಿ ಚನ್ನಣ್ಣನವರ್ ಖಡಕ್ ಎಚ್ಚರಿಕೆ ...
ಮಾಗಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಹೇಮಲತಾ ಕೊಲೆ ಪ್ರಕರಣ ಕುರಿತಾಗಿ ಮಾಹಿತಿ ಸಂಗ್ರಹಿಸಿದ ರವಿ ಡಿ.ಚನ್ನಣ್ಣನವರ್ ಅವರು , ರಾಮನಗರ ಎಎಸ್ಪಿ ರಾಮರಾಜ್, ಡಿವೈಎಸ್ಪಿ ಓಂಪ್ರಕಾಶ್, ಮಾಗಡಿ ವೃತ್ತ ನಿರೀಕ್ಷಕ ಬಿ.ಎಸ್.ಮಂಜುನಾಥ್, ಮಾಗಡಿ ಸಬ್ ಇನ್ಸ್‌ಪೆಕ್ಟರ್ ವೆಂಕಟೇಶ್, ಕುದೂರು ಸಬ್ ಇನ್ಸ್‌ಪೆಕ್ಟರ್ ಟಿ.ಎಚ್ .ಮಂಜುನಾಥ್ ಅವರಿಗೆ ತನಿಖೆ ಕುರಿತು ಮಾರ್ಗದರ್ಶನ ಮಾಡಿದರು.
ಈ ಪ್ರಕರಣ ಕುರಿತು ಮಾತನಾಡಿದ ರವಿ.ಡಿ. ಚನ್ನಣ್ಣನವರ್, ಇದೊಂದು ಗಂಭೀರ ಪ್ರಕರಣ. ತಮಗನಿಸಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಕೊಲೆಯ ಕಾರಣಗಳನ್ನು ತಮಗೆ ತಿಳಿದ ರೀತಿಯಲ್ಲಿ ಸುದ್ದಿ ಹರಡಿಸಬಾರದು. ಇದರಿಂದ ತನಿಖೆಗೆ ಹಿನ್ನಡೆಯಾಗಿ ಸತ್ಯದ ಬೆಳಕು ಜಗತ್ತಿಗೆ ಕಾಣಲು ತಡವಾಗುತ್ತದೆ. ಇಷ್ಟನ್ನೂ ಮೀರಿ ಅಪಪ್ರಚಾರದಲ್ಲಿ ತೊಡಗಿದರೆ ಸೈಬರ್ ಕ್ರೈಂ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಾಣೆಯಾಗಿದ್ದ ಯುವತಿ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿ ಪತ್ತೆ
ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರು ರಜೆಯಲ್ಲಿರುವ ಕಾರಣ ತನಿಖೆ ಜವಾಬ್ದಾರಿ ನಮ್ಮ ಮೇಲಿದೆ. ಈ ಪ್ರಕರಣ ಸಂಬಂಧ ಜಿಲ್ಲೆಯ ಪೊಲೀಸ್ ಅಧಿಕಾರಿಗಳಲ್ಲಿ ಮಾಹಿತಿ ಸಂಗ್ರಹಿಸಿದ್ದೇನೆ. ಯಾವುದೇ ಕಾರಣಕ್ಕೂ ಅಪರಾಧಿಗಳು ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.