ಶಾಲೆ ಆರಂಭ ವಿಳಂಬ ಹಿನ್ನಲೆ| ಶಾಲೆಗಳಿಗೆ ಅಕ್ಕಿ, ಗೋಧಿ, ತೊಗರಿ ಬೇಳೆ ಪೂರೈಸಿ ಪೋಷಕರಿಗೆ ವಿತರಿಸಲು ಕ್ರಮ| ಒಂದರೆಡು ದಿನದಲ್ಲಿ ಶಾಲೆಗಳ ಮೂಲಕ ಮಕ್ಕಳ ಪೋಷಕರಿಗೆ ಪಡಿತರ ವಿತರಣೆ| 2019-20ನೇ ಸಾಲಿನ ಶೈಕ್ಷಣಿಕ ಸಾಲಿನ ತರಗತಿಗಳು ಈ ವರ್ಷದ ಡಿಸೆಂಬರ್‌ವರೆಗೂ ಆರಂಭಿಸದಿರಲು ಸರ್ಕಾರದ ತಿರ್ಮಾನ|
ಚಿಕ್ಕಬಳ್ಳಾಪುರ(ನ.27): ಕೊರೋನಾ ಪರಿಣಾಮ ಶೈಕ್ಷಣಿಕ ವರ್ಷ ಆರಂಭಗೊಳ್ಳದೇ ಮಧ್ಯಾಹ್ನ ಬಿಸಿಯೂಟ ವಂಚಿತ ಶಾಲಾ ಮಕ್ಕಳಿಗೆ ತಡವಾಗದರೂ ರಾಜ್ಯ ಸರ್ಕಾರ ಎಚ್ಚೆತ್ತಿಕೊಂಡು ಮಕ್ಕಳಿಗೆ ಪಡಿತರ ಭಾಗ್ಯ ಕಲ್ಪಿಸಲು ಮುಂದಾಗಿದ್ದು, ಒಂದರೆಡು ದಿನದಲ್ಲಿ ಶಾಲೆಗಳ ಮೂಲಕ ಮಕ್ಕಳ ಪೋಷಕರಿಗೆ ಪಡಿತರ ವಿತರಣೆಗೆ ಚಾಲನೆ ಸಿಗಲಿದೆ.
ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ಆರಂಭಗೊಳ್ಳದ ಕಾರಣ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿದೆ. 2019-20ನೇ ಸಾಲಿನ ಶೈಕ್ಷಣಿಕ ಸಾಲಿನ ತರಗತಿಗಳು ಈ ವರ್ಷದ ಡಿಸೆಂಬರ್‌ವರೆಗೂ ಆರಂಭಿಸದಿರಲು ಸರ್ಕಾರ ತಿರ್ಮಾನಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಬಿಸಿಯೂಟ ವಂಚಿತ ಆಗಿರುವುದರಿಂದ ನೇರವಾಗಿ ಮಕ್ಕಳ ಮನೆ ಬಾಗಿಲಿಗೆ ಪಡಿತರ ಪೂರೈಸಲು ಜಿಲ್ಲೆಯ ಅಕ್ಷರ ದಾಸೋಹ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದು ತಡವಾದರೂ ಪಡಿತರ ವಿತರಿಸಲು ಸರ್ಕಾರ ಮುಂದಾಗಿದೆ.
89,916 ಮಕ್ಕಳಿಗೆ ಪಡಿತರ:
ಜಿಲ್ಲೆಯಲ್ಲಿ 1ರಿಂದ 10ನೇ ತರಗಯ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಎಲ್ಲ ಮಕ್ಕಳಿಗೂ ಪಡಿತರ ವಿತರಿಸಲು ನಿರ್ಧರಿಸಿದ್ದು, ಅಕ್ಷರ ದಾಸೋಹ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 89,916 ಮಕ್ಕಳು ಪಡಿತರ ಪಡೆಯಲು ಅರ್ಹರಾಗಿದ್ದು, ಈಗಾಗಲೇ ಮಕ್ಕಳಿಗೆ ವಿತರಿಸಲು ಅಗತ್ಯವಾದ ಅಕ್ಕಿ, ಗೋಧಿ ಹಾಗೂ ತೊಗರಿ ಬೇಳೆ ಜಿಲ್ಲೆಯ ಆಹಾರ ಇಲಾಖೆ ನಿಗಮಗಳಿಗೆ ಪೂರೈಕೆ ಆಗಿ ಶಾಲೆಗಳಿಗೆ ಸರಬರಾಜು ಮಾಡುವ ಕಾರ್ಯ ಭರದಿಂದ ಸಾಗಿದ್ದು ಒಂದರೆಡು ದಿನಗಳಲ್ಲಿ ಮಕ್ಕಳಿಗೆ ಪಡಿತರವನ್ನು ಅವರ ಪೋಷಕರ ಮೂಲಕ ತಲುಪಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಬಾಗೇಪಲ್ಲಿ 12,931, ಚಿಕ್ಕಬಳ್ಳಾಪುರ 14,281, ಚಿಂತಾಮಣಿ 18,416, ಗೌರಿಬಿದನೂರು 23,453, ಗುಡಿಬಂಡೆ 5,082 ಹಾಗೂ ಶಿಡ್ಲಘಟ್ಟದಲ್ಲಿ 15,753 ಸೇರಿ ಒಟ್ಟು 89.916 ಮಕ್ಕಳಿಗೆ ಪಡಿತರ ಸಿಗಲಿದೆ.
'ಶಾಲೆಯಲ್ಲಿ ಬಿಸಿಯೂಟ ನೌಕರರು ತುಟಿ ಪಿಟಿಕ್ ಎನ್ನದೆ ಶೌಚಾಲಯ ತೊಳೆಯಬೇಕು'
ಸರ್ಕಾರ ಬಿಸಿಯೂಟ ಬದಲಾಗಿ ಪಡಿತರ ನೀಡುತ್ತಿರುವುದರಿಂದ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 53 ದಿನಕ್ಕೆ 263.41 ರು. 6ರಿಂದ 8ನೇ ತರಗತಿ ಮಕ್ಕಳಿಗೆ 394.85 ರು. ಹಾಗೂ 9 ರಿಂದ 10ನೇ ತರಗತಿ ಮಕ್ಕಳಿಗೆ 53 ದಿನಕ್ಕೆ ಒಟ್ಟು 394.85 ರು. ವೆಚ್ಚ ಮಾಡಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಪಡಿತರ ಹಂಚಿಕೆ ವಿವರ
ಜಿಲ್ಲೆಯಲ್ಲಿ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಒಟ್ಟು 53 ದಿನಗಳಿಗೆ ಮೊದಲ ಹಂತದಲ್ಲಿ ಪ್ರತಿ ದಿನಕ್ಕೆ 100 ಗ್ರಾಂ ಅಕ್ಕಿ, ಗೋಧಿ ಲೆಕ್ಕಾಚಾರದಲ್ಲಿ ಪ್ರತಿ ವಿದ್ಯಾರ್ಥಿಗೆ ತಲಾ 4 ಕೆಜಿ 500 ಗ್ರಾಂ ಅಕ್ಕಿ, 800 ಗ್ರಾಂ ಗೋಧಿ, ಪ್ರತಿ ದಿನ 58 ಗ್ರಾಂನಂತೆ ಪ್ರತಿ ವಿದ್ಯಾರ್ಥಿಗೆ 3 ಕೆಜಿ, 75 ಗ್ರಾಂ ತೊಗರಿ ಬೇಳೆ ವಿತರಿಸಲಾಗುತ್ತಿದೆ. ಅದೇ ರೀತಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 45 ದಿನಗಳ ಲೆಕ್ಕಾಚಾರದಲ್ಲಿ ಪ್ರತಿ ವಿದ್ಯಾರ್ಥಿಗೆ 150 ಗ್ರಾಪಂ ಅಕ್ಕಿ, ಗೋಧಿಯಂತೆ 6 ಕೆಜಿ, 750 ಗ್ರಾಂ ಅಕ್ಕಿ, 1 ಕೆಜಿ,200 ಗ್ರಾಂ ಗೋಧಿ ವಿತರಿಸಲಾಗುತ್ತಿದೆ. ಬೆಳೆ ಪ್ರತಿ ದಿನ 87 ಗ್ರಾಂ ನಂತೆ ಪ್ರತಿ ವಿದ್ಯಾರ್ಥಿಗೆ 4 ಕೆಜಿ, 611 ಗ್ರಾಂ ತೊಗರಿ ಬೇಳೆ ವಿತರಿಸಲಾಗುತ್ತಿದೆ. 9 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ದಿನ 150 ಗ್ರಾಂ ನಂತೆ 53 ದಿನಗಳಿಗೆ 7 ಕೆಜಿ, 950 ಗ್ರಾಂ ಅಕ್ಕಿ ಮಾತ್ರ ವಿತರಿಸಲಾಗುತ್ತಿದೆ. ತೊಗರಿ ಬೇಳೆ ಪ್ರತಿ ದಿನ 87 ಗ್ರಾಂ ನಂತೆ 4.611 ಕೆಜಿ ವಿತರಿಸಲಾಗುತ್ತಿದೆ.
ಸರ್ಕಾರ 108 ದಿನಗಳ ಮಟ್ಟಿಗೆ ಶಾಲಾ ಮಕ್ಕಳಿಗೆ ಪಡಿತರ ವಿತರಿಸಲು ತಿರ್ಮಾನಿಸಿ ಮೊದಲ ಹಂತದಲ್ಲಿ 53 ದಿನಗಳಿಗೆ ಅಕ್ಕಿ, ಗೋಧಿ, ತೊಗರಿ ಬೇಳೆಯನ್ನು ಜಿಲ್ಲೆಗೆ ಪೂರೈಸಿದ್ದು ಈಗಾಗಲೇ ಅಕ್ಕಿ, ಗೋಧಿ ಶಾಲೆಗಳಿಗೆ ತಲುಪಿದ್ದು, ತೊಗರಿ ಬೇಳೆ ಈಗಷ್ಟೇ ಬಂದಿರುವುದರಿಂದ ಒಂದರೆಡು ದಿನಗಳಲ್ಲಿ ಶಾಲೆಗಳ ಮೂಲಕ ಮಕ್ಕಳ ಪೋಷಕರನ್ನು ಕರೆಸಿ ಬಿಸಿಯೂಟ ಪಡಿತರ ತಲುಪಿಸಲಾಗುವುದು ಎಂದು ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಶೈಲಾ ತಿಳಿಸಿದ್ದಾರೆ.