
ರಾಣಿಬೆನ್ನೂರು: ಇಲ್ಲಿನ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಹೋಳಿ ಹಬ್ಬದ ಪ್ರಯುಕ್ತ ನಗರದ ಶ್ರೀ ರಾಮಲಿಂಗೇಶ್ವರ ಸೇವಾ ಸಮಿತಿ, ಶ್ರೀ ಭೀಮಲಿಂಗೇಶ್ವರ ಸೇವಾ ಸಮಿತಿ, ಶ್ರೀ ಶಕ್ತಿ ಯುವಕ ಸಂಘ ಹಾಗೂ ಜೆಬಿಸಿಸಿ ಯುವಕ ಮಂಡಳಿ ವತಿಯಿಂದ ಕುಳ್ಳರಿಸಿದ್ದ ಜೀವಂತ ರತಿ-ಮನ್ಮಥರು ಈ ಬಾರಿಯೂ ನಗು ಚಿಮ್ಮಿಸದೇ ತಮ್ಮ ದಾಖಲೆ ಮುಂದುವರಿಸಿಕೊಂಡು ಬಂದಿದ್ದಾರೆ.
ನಗಿಸಲು ಹೋದವರೆ ನಗೆಪಾಟಲಿಗೆ ಈಡಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೀಗಾಗಿ ಯಾರಿಗೂ ಹೋಳಿ ಬಂಪರ್ ಬಹುಮಾನದ ಮೊತ್ತ ₹13 ಲಕ್ಷ ದಕ್ಕಲಿಲ್ಲ.
ಈ ಹಿಂದಿನ 66 ವರ್ಷಗಳಂತೆ ಈ ವರ್ಷವೂ ಓಕುಳಿ ಮುನ್ನಾದಿನವಾದ ಮಂಗಳವಾರ ರಾತ್ರಿ (ಮಾ. 3) 8.45ಕ್ಕೆ ಜೀವಂತ ರತಿ-ಮನ್ಮಥ ಪಾತ್ರಧಾರಿಗಳನ್ನು ಕುಳ್ಳರಿಸಲಾಗಿತ್ತು. ಅವರನ್ನು ನಗಿಸಲೆಂದು ವಿವಿಧ ಪ್ರದೇಶಗಳ ಹಲವಾರು ಜನರು ಮುಂಚಿತವಾಗಿಯೇ ಇಲ್ಲಿಗೆ ಬಂದು ಜಮಾಯಿಸಿದ್ದರು. ಯಾರು ಎಷ್ಟೆ ಪ್ರಯತ್ನಿಸಿದರೂ ರತಿ-ಮನ್ಮಥರು ನಗುವಿನ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದೆ ಗಂಭೀರವದನರಾಗಿ ಆಸೀನರಾಗಿದ್ದರು. ನಗಿಸಲು ಹೋದವರು ಪೇಚಿಗೆ ಸಿಗುತ್ತಿದ್ದರು. ನನ್ನ ಮದುವೆಗೆ ಬಂಗಾರ ಖರೀದಿಸಬೇಕಾಗಿದೆ ನೀವು ನಕ್ಕರೆ ಅನುಕೂಲವಾಗುತ್ತದೆ, ದಯಮಾಡಿ ನಕ್ಕ ಬಿಡ್ರಪ್ಪಾ ಎಂದು ಯುವತಿಯೊಬ್ಬರು ಪರಿಪರಿಯಾಗಿ ಬೇಡುತ್ತಿರುವ ದೃಶ್ಯ ಸಭಿಕರಲ್ಲಿ ನಗು ಉಕ್ಕಿಸಿತೆ ಹೊರತು ರತಿ-ಮನ್ಮಥರು ಮಾತ್ರ ಗಂಭೀರವಾಗಿಯೇ ಕುಳಿತಿದ್ದರು. ಬೆಳಗಾವಿಯಿಂದ ಆಗಮಿಸಿದ್ದ ವ್ಯಕ್ತಿಯೊಬ್ಬರು ಆಂಗಿಕ ಹಾವಭಾವದ ಮೂಲಕ ನಗಿಸಲು ಪ್ರಯತ್ನಿಸಿದರೂ ಅದರಲ್ಲಿ ಯಶ ಸಿಗಲಿಲ್ಲ.
ರತಿ-ಮನ್ಮಥರ ವೀಕ್ಷಣೆಗೆ ನಗರದ ವಿವಿಧ ಭಾಗಗಳಿಂದ ಯುವಕರ ಹಿಂಡು ವೈವಿಧ್ಯಮಯವಾಗಿ ಹಲಗೆ ಬಾರಿಸುತ್ತಾ ತಂಡೋಪತಂಡವಾಗಿ ಇಲ್ಲಿಗೆ ಭೇಟಿ ನೀಡಿದರು.
ರತಿ-ಮನ್ಮಥರ ವೀಕ್ಷಣೆಗೆ ಬರುವ ಜನರನ್ನು ನಿಯಂತ್ರಿಸುವ ಸಲುವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರಿಗೆ ವೀಕ್ಷಣೆಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಟ್ಟಿನಲ್ಲಿ ನಗರದಲ್ಲಿ ಜೀವಂತ ರತಿ-ಮನ್ಮಥರು ತಮ್ಮ ಮೌನದ ಶಪಥ ಈ ಬಾರಿಯೂ ಮುಂದುವರಿಯಿತು.