ಕೊಪ್ಪಳ ನೆಲದಲ್ಲಿ ಅಡಗಿದ್ದ ವಿಜಯನಗರ, ಕೆಳದಿ ಅರಸರ ಕಾಲದ ಅಪರೂಪದ ಲಿಂಗಮುದ್ರೆ ಕಲ್ಲು ಪತ್ತೆ, ಏನಿದರ ವಿಶೇಷತೆ?

Published : Aug 12, 2026, 10:48 AM IST
Lingamudra Boundary Stone in koppal

ಸಾರಾಂಶ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ದೇವಲಾಪುರದಲ್ಲಿ, ವಿಜಯನಗರ ಮತ್ತು ಕೆಳದಿ ಅರಸರ ಕಾಲದ ಅಪರೂಪದ 'ಲಿಂಗಮುದ್ರೆ ಕಲ್ಲು' ಪತ್ತೆಯಾಗಿದೆ. ಭೂಮಿಯ ಗಡಿ ಗುರುತಿಸಲು ಬಳಸುತ್ತಿದ್ದ ಈ ಕಲ್ಲಿನ ಶೋಧನೆಯು, ಈ ಪ್ರದೇಶದಲ್ಲಿ ಮತ್ತಷ್ಟು ಐತಿಹಾಸಿಕ ಕುರುಹುಗಳು ಸಿಗುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಕೊಪ್ಪಳ: ಕನಕಗಿರಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ವಿಜಯನಗರ ಹಾಗೂ ಕೆಳದಿ ಅರಸರ ಆಳ್ವಿಕೆಯ ಕಾಲಕ್ಕೆ ಸೇರಿದ, ಇದುವರೆಗೂ ಎಲ್ಲೂ ಅಪ್ರಕಟಿತವಾಗಿದ್ದ ಅಪರೂಪದ 'ಲಿಂಗಮುದ್ರೆ ಕಲ್ಲು' ಒಂದನ್ನು ಸಂಶೋಧಕ ಡಾ. ಯಮನೂರ ನಾಯಕ ವಡಕಿ ಪತ್ತೆ ಹಚ್ಚಿದ್ದಾರೆ.

ಭೂಮಿಯ ಗಡಿ ಗುರುತಿನ ಲಿಂಗಮುದ್ರೆ

ದೇವಲಾಪುರ ಗ್ರಾಮದ ನಿವಾಸಿ ನಾಗಪ್ಪ ತಳವಾರ ಅವರ ಮನೆಯ ಮುಂಭಾಗದಲ್ಲಿರುವ ಗುಂಡು ಕಲ್ಲಿನ ಮೇಲೆ ಈ ಲಿಂಗಮುದ್ರೆ ಕೆತ್ತನೆಯಾಗಿದೆ. ಪುರಾತನ ಕಾಲದಲ್ಲಿ ದಾನವಾಗಿ ನೀಡಲಾಗುತ್ತಿದ್ದ ಜಮೀನಿನ ನಾಲ್ಕೂ ಮೂಲೆಗಳ ಗಡಿಯನ್ನು ಗುರುತಿಸಲು ಈ ರೀತಿಯ ಲಿಂಗಮುದ್ರೆ ಕಲ್ಲುಗಳನ್ನು ನೆಡುವುದು ವಿಜಯನಗರ ಮತ್ತು ಕೆಳದಿ ಅರಸರ ಕಾಲದ ಸಂಪ್ರದಾಯವಾಗಿತ್ತು.

ಕಲ್ಲಿನಲ್ಲಿರುವ ಪ್ರಮುಖ ಚಿಹ್ನೆಗಳು:

ಶಿವಲಿಂಗ: ಧಾರ್ಮಿಕ ಹಾಗೂ ರಾಜಮುದ್ರೆಯ ಸಂಕೇತ.

ಸೂರ್ಯ ಮತ್ತು ಚಂದ್ರ: 'ಸೂರ್ಯ-ಚಂದ್ರರು ಇರುವವರೆಗೆ ಈ ದಾನ ಚಿರಸ್ಥಾಯಿಯಾಗಿರಲಿ' ಎಂಬ ಆಶಯವನ್ನು ಸೂಚಿಸುವ ಸಾಂಪ್ರದಾಯಿಕ ಸಂಕೇತಗಳು ಈ ಶಾಸನದಲ್ಲಿ ಬರೆಯಲಾಗಿದೆ.

ಮತ್ತಷ್ಟು ಸಂಶೋಧನೆಗೆ ಅವಕಾಶ

ಸಾಮಾನ್ಯವಾಗಿ ದಾನ ನೀಡಿದ ಭೂಮಿಯ ನಾಲ್ಕೂ ದಿಕ್ಕುಗಳಲ್ಲಿ ಇಂತಹ ಕಲ್ಲುಗಳನ್ನು ಸ್ಥಾಪಿಸಲಾಗುತ್ತಿತ್ತು. ಇದೀಗ ದೇವಲಾಪುರದಲ್ಲಿ ಒಂದು ಕಲ್ಲು ಪತ್ತೆಯಾಗಿದ್ದು, ಉಳಿದ ಮೂರು ದಿಕ್ಕುಗಳಲ್ಲೂ ಇಂತಹ ಕಲ್ಲುಗಳು ಇರುವ ಸಾಧ್ಯತೆಯಿದೆ. ಇದುವರೆಗಿನ ಯಾವುದೇ ಇತಿಹಾಸ ಸಂಶೋಧನೆಗಳಲ್ಲೂ ಒಂದೇ ಸ್ಥಳದ ನಾಲ್ಕೂ ದಿಕ್ಕುಗಳ ಲಿಂಗಮುದ್ರೆ ಕಲ್ಲುಗಳು ಸಂಪೂರ್ಣವಾಗಿ ದೊರೆತಿಲ್ಲ. ಆದರೆ, ದೇವಲಾಪುರದಲ್ಲಿ ವ್ಯವಸ್ಥಿತ ಶೋಧ ನಡೆಸಿದರೆ ಕನಿಷ್ಠ ಒಂದೆರಡು ಕಲ್ಲುಗಳಾದರೂ ಸಿಗುವ ಸಾಧ್ಯತೆಯಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕಲ್ಲಿನ ಮೇಲೆ ಸೂರ್ಯ ಹಾಗೂ ಚಂದ್ರನ ಕೆತ್ತನೆ ಇರುವುದರಿಂದ, ಈ ಪ್ರದೇಶದ ಸುತ್ತಮುತ್ತ ಇನ್ನಷ್ಟು ಪ್ರಾಚೀನ ಶಾಸನಗಳು ಹಾಗೂ ವೀರಗಲ್ಲುಗಳು ಪತ್ತೆಯಾಗುವ ಸಾಧ್ಯತೆಗಳಿವೆ ಎಂದು ಡಾ. ಯಮನೂರಪ್ಪ ವಡಕಿ ತಿಳಿಸಿದ್ದಾರೆ.

ಏನಿದು ಲಿಂಗಮುದ್ರೆ ಕಲ್ಲು:

ಲಿಂಗಮುದ್ರೆ ಕಲ್ಲು ಎಂದರೆ ಪ್ರಾಚೀನ ಹಾಗೂ ಮಧ್ಯಕಾಲೀನ ಕರ್ನಾಟಕದಲ್ಲಿ ಭೂಮಿಯ ಗಡಿಗಳನ್ನು, ದಾನ-ಧರ್ಮಗಳನ್ನು ಅಥವಾ ಜಮೀನಿನ ಹದ್ದುಗಳನ್ನು ಗುರುತಿಸಲು ಬಳಸುತ್ತಿದ್ದ ವಿಶೇಷ ಕೆತ್ತನೆಯುಳ್ಳ ಕಲ್ಲು. ಇವುಗಳ ಮೇಲೆ ಸಾಮಾನ್ಯವಾಗಿ ಶಿವಲಿಂಗ ಅಥವಾ ನಂದಿಯ ಚಿತ್ರದೊಂದಿಗೆ ಕೆಲವು ಧರ್ಮದ ಚಿಹ್ನೆಗಳು ಅಥವಾ ಶಾಸನಗಳು ಇರುತ್ತವೆ.

ಕರ್ನಾಟಕದ ಕೊಪ್ಪಳ (ಕನಕಗಿರಿ), ಶಿವಮೊಗ್ಗ, ಉಡುಪಿ (ಬಸ್ರೂರು) ಮುಂತಾದ ಜಿಲ್ಲೆಗಳಲ್ಲಿ ವಿಜಯನಗರ ಹಾಗೂ ಕೆಳದಿ ಕಾಲದ ಹಲವು ಲಿಂಗಮುದ್ರೆ ಕಲ್ಲುಗಳು ಇತ್ತೀಚಿನ ದಿನಗಳಲ್ಲಿ ಸಂಶೋಧಕರಿಗೆ ಸಿಕ್ಕಿವೆ.

PREV
Read more Articles on
click me!

Recommended Stories

ಪ್ರಜ್ವಲ್ ರೇವಣ್ಣಗೆ ಮೊಬೈಲ್ ಕೊಟ್ಟಿದ್ಯಾರೆಂದು ಮಧ್ಯಾಹ್ನದ ಒಳಗೆ ತಿಳಿಸುವಂತೆ ತಾಕೀತು, ಜೈಲಾಧಿಕಾರಿ ಅಮಾನತು
'ನನ್ನ ಕಣ್ಣು ಕುರುಡು ಅಂದ್ಕೊಂಡ್ರಾ?..' ನಾಡಗೀತೆ ಹಾಡುತ್ತಿದ್ದರೂ ಎದ್ದು ನಿಲ್ಲದ ಅಧಿಕಾರಿಗಳಿಗೆ ಸಿಎಂ ಕ್ಲಾಸ್!