ಪ್ರಜ್ವಲ್ ರೇವಣ್ಣಗೆ ಮೊಬೈಲ್ ಕೊಟ್ಟಿದ್ಯಾರೆಂದು ಮಧ್ಯಾಹ್ನದ ಒಳಗೆ ತಿಳಿಸುವಂತೆ ತಾಕೀತು, ಜೈಲಾಧಿಕಾರಿ ಅಮಾನತು

Published : Aug 12, 2026, 10:20 AM IST
Prajwal Revanna

ಸಾರಾಂಶ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಸಿಸಿಬಿ ದಾಳಿ ವೇಳೆ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜೈಲಿನ ಸಹಾಯಕ ಅಧೀಕ್ಷಕರನ್ನು ಅಮಾನತುಗೊಳಿಸಲಾಗಿದ್ದು, ಎಸ್‌ಪಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಈ ಅಕ್ರಮದ ಬಗ್ಗೆ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ.

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್, ಪೆನ್‌ಡ್ರೈವ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜೈಲು ಆಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪ್ರಜ್ವಲ್ ಗೆ ಮೊಬೈಲ್ ಯಾರು ಕೊಟ್ಟಿದ್ದು ಅನ್ನೊ ಬಗ್ಗೆ ಮಧ್ಯಾಹ್ನದ ಒಳಗೆ ತಿಳಿಸಬೇಕೆಂದು ತಾಕೀತು ಮಾಡಿ ಜೈಲಿನ ಸಹಾಯಕ ಅಧೀಕ್ಷಕ (ಅಸಿಸ್ಟೆಂಟ್ ಸೂಪರಿಂಡೆಂಟ್) ಈರಣ್ಣ ರಂಗಾಪುರ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಕೇಂದ್ರ ಕಾರಾಗೃಹದ ಎಸ್‌ಪಿ ಅಂಶುಕುಮಾರ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

ಹಾಸಿಗೆ ಕೆಳಗೆ ಅಡಗಿಸಿಟ್ಟಿದ್ದ ಫೋನ್ ಸೀಜ್

ಆಗಸ್ಟ್ 11, 2026ರಂದು ಮಧ್ಯಾಹ್ನ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಅಧಿಕಾರಿಗಳು ಪರಪ್ಪನ ಅಗ್ರಹಾರದ ಹೈ ಸೆಕ್ಯುರಿಟಿ ಬ್ಯಾರಕ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದರು. ದರ್ಶನ್, ಪವಿತ್ರ ಗೌಡ ಹಾಗೂ ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವು ವಿಐಪಿ ಕೈದಿಗಳ ಬ್ಯಾರಕ್‌ಗಳನ್ನು ಸತತ 5 ರಿಂದ 6 ಗಂಟೆಗಳ ಕಾಲ ಇಂಚಿಂಚಾಗಿ ಶೋಧ ನಡೆಸಲಾಯ್ತು. ಈ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ಬ್ಯಾರಕ್‌ನ ಹಾಸಿಗೆ ಕೆಳಗೆ ಅಡಗಿಸಿಟ್ಟಿದ್ದ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿದ್ದು, ಅಧಿಕಾರಿಗಳು ಅದನ್ನು ಜಪ್ತಿ ಮಾಡಿದ್ದಾರೆ.

ಪೊಲೀಸ್ ಕಾರ್ಯಾಚರಣೆಯ ಬೆಳವಣಿಗೆಗಳು:

ಅಧಿಕಾರಿ ಅಮಾನತು: ದಕ್ಷಿಣ ವಲಯದ ಡಿಐಜಿ ನೀಡಿದ ವಿವರವಾದ ವರದಿ ಆಧಾರದ ಮೇಲೆ, ಕರ್ತವ್ಯ ಲೋಪವೆಸಗಿದ ಜೈಲಿನ ಸಹಾಯಕ ಅಧೀಕ್ಷಕ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ.

ಎಸ್‌ಪಿಗೆ ನೋಟಿಸ್: ಕಾರಾಗೃಹದ ಎಸ್‌ಪಿ ಅಂಶುಕುಮಾರ್ ಅವರಿಗೆ ಜೈಲು ಡಿಜಿಪಿ ಅಲೋಕ್ ಕುಮಾರ್ ಅವರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಕರ್ತವ್ಯ ಲೋಪದ ಕುರಿತು ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ಹಿಂದಿನ ಶೋಧದಲ್ಲಿ ಸಿಕ್ಕಿರಲಿಲ್ಲ: ಆಗಸ್ಟ್ 6, 2026 ರಂದು ಜೈಲು ಅಧಿಕಾರಿಗಳು ಪ್ರಜ್ವಲ್ ಬ್ಯಾರಕ್‌ನಲ್ಲಿ ಶೋಧ ನಡೆಸಿದಾಗ ಯಾವುದೇ ನಿಷೇಧಿತ ವಸ್ತುಗಳು ಸಿಕ್ಕಿರಲಿಲ್ಲ. ಹೀಗಾಗಿ ಕಳೆದ ಕೆಲವೇ ದಿನಗಳಲ್ಲಿ ಈ ಮೊಬೈಲ್ ಒಳಗೆ ಬಂದಿರುವುದು ಸ್ಪಷ್ಟವಾಗಿದೆ.

ಖಡಕ್ ಸೂಚನೆ: ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್ ಫೋನ್ ತಂದುಕೊಟ್ಟವರು ಯಾರು ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದ್ದು, ಇಲ್ಲವಾದಲ್ಲಿ ಅವರನ್ನು ತಕ್ಷಣವೇ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಎಫ್‌ಐಆರ್ ದಾಖಲು:

ಈ ಅಕ್ರಮದ ಕುರಿತು ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ನೀಡಿದ್ದು, ಜೈಲು ನಿಯಮಗಳ ಉಲ್ಲಂಘನೆಯಡಿ ಎಫ್‌ಐಆರ್ (FIR) ದಾಖಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿಬಿ ಮತ್ತು ಕಾರಾಗೃಹ ಇಲಾಖೆ ತೀವ್ರ ತನಿಖೆ ಮುಂದುವರಿಸಿವೆ.

PREV
Read more Articles on
click me!

Recommended Stories

'ನನ್ನ ಕಣ್ಣು ಕುರುಡು ಅಂದ್ಕೊಂಡ್ರಾ?..' ನಾಡಗೀತೆ ಹಾಡುತ್ತಿದ್ದರೂ ಎದ್ದು ನಿಲ್ಲದ ಅಧಿಕಾರಿಗಳಿಗೆ ಸಿಎಂ ಕ್ಲಾಸ್!
‘ನನ್ನನ್ನು ಮುಗಿಸಲು ಸುಪಾರಿ ನೀಡಲೂ ಸಿದ್ಧ’ ಕಿಮ್ಮನೆ ವಿರುದ್ಧ ಆರಗ ಜ್ಞಾನೇಂದ್ರ ಗಂಭೀರ ಆರೋಪ