Mandya: ಅಂತರಿಕ್ಷದಿಂದ ಮಂಡ್ಯದ ಸಂತೆ ಕಸಲಗೆರೆಯಲ್ಲಿ ಬಿತ್ತು ಅಪರೂಪದ ವಸ್ತು, ವಿಜ್ಞಾನಿಗಳಿಗೂ ಸವಾಲಾದ ರಹಸ್ಯ!

Published : Nov 05, 2026, 12:52 PM IST
mandya dayanand

ಸಾರಾಂಶ

ಮಂಡ್ಯದ ಸಂತೆಕಸಲಗೆರೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಅಪರೂಪದ ನಿಗೂಢ ವಸ್ತುವೊಂದು ದೊರಕಿದ್ದು, ಇದು ಅಂತರಿಕ್ಷದಿಂದ ಬಿದ್ದ ಉಲ್ಕಾಶಿಲೆ ಎಂದು ಅವರು ವಾದಿಸುತ್ತಿದ್ದಾರೆ. ಆದರೆ ವಿಜ್ಞಾನಿಗಳು ಇದನ್ನು ಪೆಬೆಲ್ ಅಥವಾ ಹೆಮಟೈಟ್ ಎಂದು ಹೇಳುತ್ತಿದ್ದು, ವಸ್ತುವನ್ನು ಹಸ್ತಾಂತರಿಸಲು ಆ ವ್ಯಕ್ತಿ ಹಣದ ಬೇಡಿಕೆ ಇಟ್ಟಿದ್ದಾರೆ. ಇದರ ನಿಖರತೆಗಾಗಿ ಅವರು ಪ್ರತಿಭಟನೆಗೂ ಮುಂದಾಗಿದ್ದಾರೆ.

ಮಂಡ್ಯ: ತಾಲೂಕಿನ ಸಂತೆಸಲಗೆರೆ ಗ್ರಾಮದಲ್ಲಿ ಅಪರೂಪದ ವಸ್ತುವೊಂದು ಪತ್ತೆಯಾಗಿದೆ. ಕಪ್ಪು ಕಂದು ಬಣ್ಣವನ್ನು ಹೊಂದಿರುವ ಈ ವಸ್ತುವನ್ನು ಪರಿಶೀಲನೆಗೆ ಒಳಪಡಿಸಲು ಆ ವಸ್ತು ಸಿಕ್ಕಿರುವ ಗ್ರಾಮದ ವ್ಯಕ್ತಿ ಅವಕಾಶ ನೀಡುತ್ತಿಲ್ಲ. ಅವರೇ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದು ಅಲ್ಲಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಬಂದ ಸೂಚನೆ ಮೇರೆಗೆ ಆತನ ನಿವಾಸಕ್ಕೆ ವಿಜ್ಞಾನಿಗಳ ತಂಡ ತೆರಳಿದರೂ ಅದನ್ನು ಪರಿಶೀಲನೆಗೆ ಒಳಪಡಿಸಲು ಒಪ್ಪದೆ ವಾಪಸ್ ಕಳುಹಿಸಿದ್ದಾರೆ. ಇದರ ನಡುವೆ ತಮಗೆ ಸಿಕ್ಕಿರುವ ವಸ್ತುವಿಗೆ ಬೆಲೆ ನಿಗದಿಪಡಿಸಿ ತಮ್ಮಿಂದ ಪಡೆದುಕೊಳ್ಳಬೇಕೆಂಬ ವಿಚಿತ್ರ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಭೂಮಿಯಲ್ಲಿ ಸಿಗಬಹುದಾದ ನಿಧಿ, ಅಪರೂಪದ ಖನಿಜ ವಸ್ತುಗಳು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಲಾಗಿದೆ. ಹೀಗಿದ್ದರೂ ಇದು ಅಂತರಿಕ್ಷದಿಂದ ಬಿದ್ದಿರುವ ಐರನ್ ಆಕ್ಸೈಡ್ ಆಗಿದ್ದು, ಇದನ್ನು ನನ್ನಿಂದ ಕಸಿದುಕೊಳ್ಳಲು ವಿಜ್ಞಾನಿಗಳು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಸಂತೆಕಸಲಗೆರೆಯ ಕೆ.ಪಿ.ದಯಾನಂದ ಆರೋಪಿಸಿದ್ದಾರೆ.

13 ಗ್ರಾಂ ತೂಕವಿರುವ ವಸ್ತುವಿನ ನಿಖರತೆ ಗೊತ್ತಿದ್ದರೂ ವಿಜ್ಞಾನಿಗಳು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿರುವುದನ್ನು ಖಂಡಿಸಿ ನ.6ರಂದು ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ನ.11 ರಿಂದ ಮಂಡ್ಯದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗೋಷ್ಠಿಯಲ್ಲಿ ಹೇಳಿದ್ದು

2024ರಲ್ಲಿ ತಮ್ಮ ಮನೆಯ ಪಡಸಾಲೆಯ ತುಳಸಿ ಗಿಡದ ಕೆಳಗಿರುವ ಕಿರಿದಾದ ಮಣ್ಣಿನ ಪ್ರದೇಶದಲ್ಲಿ ಅಪರೂಪದ ವಸ್ತು ದೊರಕಿತ್ತು. ಅದು ಬೂದು ಬಣ್ಣವನ್ನು ಹೊಂದಿತ್ತು. ಇದರ ಮೇಲೆ ಸೂರ್ಯನ ಬಿಸಿಲು ಬಿದ್ದರೆ ಹೊಳೆಯುತ್ತದೆ, ಈ ಅಪರೂಪದ ವಸ್ತುವಿನ ಬಗ್ಗೆ ಕುತೂಹಲ ತಣಿಸಿಕೊಳ್ಳಲು ಮೈಸೂರಿನ ಇಂಡಿಯಾ ಜಿಯೋಲಾಜಿಕಲ್ ಲ್ಯಾಬ್‌ಗೆ ತೆರಳಿದಾಗ ಅವರು ಅದನ್ನು ಐರನ್ ಮೀಟಿಯೋರ್ ಎನ್ನುವುದನ್ನು ಸ್ಪಷ್ಟಪಡಿಸಿದರು. ಮಾನಸ ಗಂಗೋತ್ರಿ ಅರ್ತ್ ಸೈನ್ಸ್ ವಿಭಾಗದವರು ಗ್ರಾನೈಟ್ ಎಂದು ಬಿಂಬಿಸಿದರು. ಅವರ ಅಭಿಪ್ರಾಯವನ್ನು ಒಪ್ಪದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಾಲಯಕ್ಕೆ ಪತ್ರ ಬರೆದು ಇದರ ನೈಜತೆಯನ್ನು ಅರಿಯಲು ಪ್ರಯತ್ನಿಸಿದ್ದಾಗಿ ಹೇಳಿದರು.

ಪ್ರಧಾನ ಮಂತ್ರಿ ಕಾರ್ಯಾಲಯದವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಕೆ.ಪಿ.ದಯಾನಂದ ಅವರು ಬರೆದಿರುವ ಪತ್ರದ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದ್ದರು. ಅದರಂತೆ ಖನಿಜ ಭವನದಿಂದ ಬಂದಂತಹ ವಿಜ್ಞಾನಿಗಳು ನನ್ನಲ್ಲಿರುವ ವಸ್ತುವನ್ನು ಹೆಮಟೈಟ್ ಎಂದು ಮೌಖಿಕವಾಗಿ ಹೇಳಿದರು. ಜೊತೆಗೆ ಇದನ್ನು ಬೆಂಗಳೂರಿಗೆ ತರುವಂತೆ ಅಲ್ಲಿ ಲ್ಯಾಬ್‌ನಲ್ಲಿ ಸಮಗ್ರವಾಗಿ ಪರಿಶೀಲಿಸುವುದಾಗಿ ತಿಳಿಸಿದ್ದಾಗಿ ನುಡಿದರು.

ಬೆಂಗಳೂರಿಗೆ ಅದನ್ನು ತೆಗೆದುಕೊಂಡು ಹೋದ ಸಮಯದಲ್ಲಿ ಅವರಿಗೆ ಪರಿಶೀಲನೆಗೆ ಒಳಪಡಿಸಲು ಪೂರ್ಣ ವಸ್ತುವನ್ನು ಕೊಡಲಿಲ್ಲ. ಆನಂತರ ಹಲವು ದಿನಗಳು ಕಳೆದ ಬಳಿಕ ಮಂಡ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರ ಮೂಲಕ ಇದು ಕಪ್ಪು ಕಂದು ಬಣ್ಣವನ್ನು ಹೊಂದಿರುವ ಈ ವಸ್ತು ಪೆಬೆಲ್ ರೀತಿಯಲ್ಲಿ ಕಂಡುಬಂದಿದೆ. ಆ ವಸ್ತುವಿನ ಭೌತಿಕ ಲಕ್ಷಣಗಳನ್ನು ಪರಿಶೀಲಿಸಲು ವಸ್ತುವನ್ನು ಹಾಜರುಪಡಿಸುವಂತೆ ಸೂಚಿಸಿದರೂ ಕೊಡುವುದಕ್ಕೆ ನಿರಾಕರಿಸಿದ್ದಾರೆ ಎಂದು ವರದಿಯಲ್ಲಿ ದಾಖಲಿಸಿರುವುದಾಗಿ ಹೇಳಿದರು.

ನಾನು ನನಗೆ ಸಿಕ್ಕಿರುವ ವಸ್ತುವನ್ನು ಕೊಡುವುದಕ್ಕೆ ಸಿದ್ಧನಿದ್ದೇನೆ. ಆದರೆ, ಅದರ ಮೌಲ್ಯವನ್ನು ನಿಗದಿಪಡಿಸಿ ನನಗೆ ಕೊಟ್ಟರೆ ಅದನ್ನು ಕೊಡುವುದಕ್ಕೆ ಸಿದ್ಧನಿದ್ದೇನೆ ಎಂದು ಗೋಷ್ಠಿಯಲ್ಲಿ ತಿಳಿಸಿದರು.

ವಿಜ್ಞಾನಿಗಳು ಹೇಳಿದ್ದೇನು?

ಕೆ.ಪಿ.ದಯಾನಂದ ಅವರು ಅವರಿಗೆ ಸಿಕ್ಕಿರುವ ವಸ್ತುವನ್ನು ಪೂರ್ಣ ಪ್ರಮಾಣದಲ್ಲಿ ಪರಿಶೀಲನೆಗೆ ಒಳಪಡಿಸಲು ನೀಡುತ್ತಿಲ್ಲ. ಅದು ಅಂತರಿಕ್ಷದಿಂದ ಬಿದ್ದಿರುವ ಅಪರೂಪದ ವಸ್ತು. ಅತಿ ಹೆಚ್ಚು ಬೆಲೆ ಬಾಳುತ್ತದೆ ಎಂದು ಅವರಿಗವರೇ ಭಾವಿಸಿದ್ದಾರೆ. ನಮ್ಮ ವಿಜ್ಞಾನಿಗಳ ತಂಡ ಆ ವಸ್ತುವನ್ನು ಪರಿಶೀಲಿಸಿದಾಗ ಅದು ಪೆಬೆಲ್ ರೀತಿಯ ವಸ್ತುವೆಂಬಂತೆ ಕಂಡುಬಂದಿದೆ. ಅದನ್ನು ದಯಾನಂದ್ ಒಪ್ಪುತ್ತಿಲ್ಲ. ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿಕೊಂಡು ಬರುವಂತೆ ತಿಳಿಸಿದರೂ ಅದಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ. ನೀವೇ ಭರಿಸುವಂತೆ ಹೇಳುತ್ತಾರೆ. ನಮಗೂ ಕೊಡದೆ, ಅವರೇ ಪರೀಕ್ಷಿಸಿಕೊಂಡು ಬರದೆ ಆ ವಸ್ತುವನ್ನಿಟ್ಟುಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹಾಗಾಗಿ ವಾಸ್ತವಾಂಶವನ್ನು ಮೇಲಧಿಕಾರಿಗಳಿಗೆ ವರದಿಯ ಮೂಲಕ ನೀಡಿದ್ದೇನೆ.

ಬಿ.ರಶ್ಮಿ, ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ

PREV
Read more Articles on
click me!

Recommended Stories

ಗಿಜಿಗುಡುವ ಬೆಂಗಳೂರಿನಲ್ಲಿ ಪ್ರಶಾಂತ ಜೀವನ: ಯಲಹಂಕದಲ್ಲಿ ತಲೆ ಎತ್ತುತ್ತಿದೆ ವಿನೂತನ 'ಲೋ-ಡೆನ್ಸಿಟಿ' ವಸತಿ ಯೋಜನೆ
ಕರ್ನಾಟಕ ಹವಾಮಾನದಲ್ಲಿ ಮತ್ತೆ ಬದಲಾವಣೆ: ಮುಂದಿನ 7 ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ..!