ರಮೇಶ್‌ ಕುಮಾರ್‌ಗೆ ಮಹತ್ವದ ಹೊಣೆ : ಸೂಚನೆಯೊಂದು ನೀಡಿದ ಡಿಕೆಶಿ

By Kannadaprabha NewsFirst Published Jul 21, 2021, 3:09 PM IST
Highlights
  •   ಜಿಪಂ ಮತ್ತು ತಾಪಂ ಚುನಾವಣೆಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್‌ ಶಕ್ತಿ ಮೀರಿ ಕೆಲಸ ಮಾಡಲು ಸಿದ್ಧತೆ
  • ಕಾಂಗ್ರೆಸ್‌ನಲ್ಲಿರುವ ಎರಡು ಗುಂಪುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಸರಿ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಸಕ್ತಿ
  • ಜಿಲ್ಲೆಯಲ್ಲಿ ರಮೇಶ್‌ ಕುಮಾರ್‌ ಬಣವು ಮೇಲುಗೈ ಸಾಧಿಸಿ ಪಕ್ಷದ ಮೇಲೆ ಹಿಡಿತ ಸಾಧಿಸುವ ಸಾಧ್ಯತೆ

ವರದಿ : ಸತ್ಯರಾಜ್‌ ಜೆ.

 ಕೋಲಾರ (ಜು.21):  ಜಿಲ್ಲೆಯಲ್ಲಿ ಜಿಪಂ ಮತ್ತು ತಾಪಂ ಚುನಾವಣೆಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್‌ ಶಕ್ತಿ ಮೀರಿ ಕೆಲಸ ಮಾಡಲು ಸಿದ್ಧತೆ ನಡೆಸಿದೆ.

ಜಿಲ್ಲಾ ಕಾಂಗ್ರೆಸ್‌ನಲ್ಲಿರುವ ಎರಡು ಗುಂಪುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಸರಿ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ಹೆಚ್ಚಿನ ಆಸಕ್ತಿ ವಹಿಸಿದ್ದು, ಈಗಾಗಲೇ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರಿಗೆ ಈ ಬಗ್ಗೆ ತಿಳಿ ಹೇಳಿ ಕಳಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ರಮೇಶ್‌ ಕುಮಾರ್‌ ಬಣವು ಮೇಲುಗೈ ಸಾಧಿಸಿ ಪಕ್ಷದ ಮೇಲೆ ಹಿಡಿತ ಸಾಧಿಸುವ ಸಾಧ್ಯತೆ ಇದೆ.

ಗುಂಪುಗಾರಿಕೆಯಿಂದ ಪಕ್ಷಕ್ಕೆ ಹಾನಿ :  ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಒಳ್ಳೆಯ ಅವಕಾಶವಿದೆ, ಜಿಲ್ಲೆಯ ಎಲ್ಲ 6 ಸ್ಥಾನಗಳನ್ನು ಗೆಲ್ಲಬಹುದಾದ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ಗುಂಪುಗಳನ್ನು ಮಾಡಿಕೊಂಡು ಪಕ್ಷವನ್ನು ಹಾಳು ಮಾಡುವುದು ಬೇಡ. ಜಿ.ಪಂ.ಮತ್ತು ತಾ.ಪಂ. ಚುನಾವಣೆಗಳಲ್ಲಿ ನೀವು ತಲೆ ಹಾಕಬೇಡಿ, ನಿಮ್ಮ ಪಾಡಿಗೆ ನೀವು ಇರಿ, ನಿಮಗೆ ಏನು ಬೇಕೋ ಅದನ್ನು ಮಾಡೋಣ ಎಂದು ಮುನಿಯಪ್ಪ ಅವರಿಗೆ ಡಿಕೆಶಿ ಸೂಚಿಸಿದ್ದಾರೆ ಎನ್ನಲಾಗಿದೆ.

'ಸಿದ್ದರಾಮಯ್ಯರನ್ನು ಮಾಜಿ ಸಿಎಂ ಅಂತ ಕರೆದ್ರೆ ಅಪಮಾನ ಮಾಡಿದಂತೆ'

ಆದರೆ ಇದಕ್ಕೆ ಸುಮ್ಮನಾಗದ ಮುನಿಯಪ್ಪ ಜಿ.ಪಂ.ಚುನಾವಣೆಯಲ್ಲಿ ನನಗೆ ಮುಳಬಾಗಿಲು ಮತ್ತು ಕೋಲಾರದ ವಿಧಾನ ಸಭಾ ಕ್ಷೇತ್ರಗಳ ಜವಾಬ್ದಾರಿಯನ್ನು ಕೊಡಿ ಎರಡೂ ಕ್ಷೇತ್ರಗಳಲ್ಲಿರುವ ಜಿ.ಪಂ.ನ ಎಲ್ಲ ಕ್ಷೇತ್ರಗಳ ಟಿಕೆಟ್‌ ಆಯ್ಕೆ ನನಗೆ ಕೊಡಿ, ನಾನು ಸಮರ್ಥ ಅಭ್ಯರ್ಥಿಗಳನ್ನು ಹಾಕಿಕೊಂಡು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಅವರ ಮುಂದೆ ಹೇಳಿದ್ದಾರೆ.

ಸಿದ್ದು, ಡಿಕೆಶಿ ಇಬ್ಬರಿಗೂ ರಾಹುಲ್‌ ಬುಲಾವ್‌

ನಿಮ್ಮ ಪಾಡಿಗೆ ನೀವು ಸುಮ್ಮನಿರಿ :  ಇದಕ್ಕೆ ಒಪ್ಪದ ಡಿಕೆಶಿ, ಮುನಿಯಪ್ಪನವರೆ ನೀವು ಯಾವುದೇ ಕ್ಷೇತ್ರಕ್ಕೂ ತಲೆ ಹಾಕಬೇಡಿ. ಎಲ್ಲಿಯೂ ಪರ್ಯಾಯ ಅಭ್ಯರ್ಥಿ ರೆಡಿಮಾಡಬೇಡಿ ನಿಮಗೆ ವಯಸ್ಸೂ ಆಗಿದೆ. ಜತೆಗೆ ಕಳೆದ ಬಾರಿ ಲೋಕಸಭೆಯಲ್ಲಿ ಸೋತಿದ್ದೀರಿ. ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಹೊರತು ಪಡಿಸಿದರೆ ಬೇರಾವುದೇ ಪಕ್ಷಗಳಿಗೆ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಅವಕಾಶ ಇಲ್ಲ. ನಿಮ್ಮ ಪಾಡಿಗೆ ನೀವು ಸುಮ್ಮನಿದ್ದರೆ ಸಾಕು ಮುಂದೆ ನಮ್ಮ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಆಗ ನಿಮಗೆ ಒಳ್ಳೆಯ ಸ್ಥಾನವನ್ನು ಕೊಡುತ್ತೇವೆ. ನಿಮ್ಮ ಮಗಳೂ ಶಾಸಕಿಯಾಗಿದ್ದಾರೆ. ಅವರ ಭವಿಷ್ಯವನ್ನೂ ನೋಡಿ ಎಂದು ತಿಳಿ ಹೇಳಿದರಂತೆ.

ಈ ಮಧ್ಯೆ ರಮೇಶ್‌ ಕುಮಾರ್‌ ಅವರ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಅವರಿಗೆ ನಿರ್ದೇಶನ ನೀಡಿ ಜಿ.ಪಂ.ಮತ್ತು ತಾ.ಪಂ.ನ ಚುನಾವಣೆಗಳಲ್ಲಿ ಕಾಂಗ್ರೆಸ್‌ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು ಎಂದಿದ್ದಾರಂತೆ.

ರಮೇಶ್‌ ಕುಮಾರ್‌ ಬಣದಲ್ಲಿ ನಂಜೇಗೌಡ

ಇತ್ತೀಚಿನ ಈ ಎಲ್ಲ ಬೆಳವಣಿಗೆಗಳ ಮಧ್ಯದಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರೂ ರಮೇಶ್‌ ಕುಮಾರ್‌ ಜತೆ ಕೈಜೋಡಿಸಿದ್ದಾರೆಂಬ ಸುದ್ದಿ ಕೇಳಿ ಬಂದಿದೆ.

ಜಿಲ್ಲೆಯ ರಾಜಕೀಯ ಬೆಳವಣಿಗೆ ಮತ್ತು ರಾಜ್ಯದ ಕಾಂಗ್ರೆಸ್‌ ನಾಯಕರ ಚಟುವಟಿಕೆಗಳನ್ನು ಗಮನಿಸಿರುವ ನಂಜೇಗೌಡರು ರಾಜ್ಯದ ಕಾಂಗ್ರೆಸ್‌ ಮುಖಂಡರೊಂದಿಗೆ ರಮೇಶ್‌ ಕುಮಾರ್‌ ಅವರೇ ಹೆಚ್ಚು ಪ್ರಭಾವ ಶಾಲಿಯಾಗಿದ್ದಾರೆ. ಮುನಿಯಪ್ಪ ಅವರನ್ನು ನಂಬಿ ಕೂತರೆ ನಾಳೆ ವಿಧಾನ ಸಭೆ ಚುನಾವಣೆ ಹೊತ್ತಿಗೆ ಏನೇನು ಏರುಪೇರಾಗುತ್ತೋವೋ ಎಂಬುದನ್ನು ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ನಂಜೇಗೌಡರು ಜತೆ ಹೊಂದಾಣಿಕೆ ಮಾಡಿಕೊಂಡು ಹೋಗಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಿಂದ ಕೇಳಿ ಬಂದಿವೆ.

ನಂಜೇಗೌಡ ಷರತ್ತು:  ಈ ಸಂಬಂಧ ಜಿಲ್ಲಾ ಮಟ್ಟದಲ್ಲಿ ನಡೆದ ಸಭೆಗಳಲ್ಲಿ ಪಾಲ್ಗೊಂಡ ನಂಜೇಗೌಡರು ಕೋಲಾರ ಹಾಲು ಒಕ್ಕೂಟದಲ್ಲಿ ಅಧ್ಯಕ್ಷ ಸ್ಥಾನದ ಪೂರ್ಣ ಅವಧಿಯನ್ನು ತಮಗೆ ಬಿಟ್ಟು ಕೊಡಬೇಕೆಂಬ ಷರತ್ತನ್ನು ಇಟ್ಟಿದ್ದು ಇದಕ್ಕೆ ರಮೇಶ್‌ ಕುಮಾರ್‌ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರೂ ಸಮ್ಮತಿ ಸೂಚಿಸಿದ್ದಾರೆ ಕಾಂಗ್ರೆಸ್‌ ಮೂಲಗಳು ಹೇಳಿವೆ.

ಇದರ ಜತೆಗೆ ಶಾಸಕ ನಂಜೇಗೌಡರ ಮೇಲೆ ಉರಿದು ಬೀಳುತ್ತಿದ್ದ ಸಂಸದ ಮುನಿಸ್ವಾಮಿ ಅವರನ್ನೂ ತಣ್ಣಗೆ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.

ನಂಜೇಗೌಡರು ಅವರು ರಮೇಶ್‌ ಕುಮಾರ್‌ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರ ತಂಡದ ಮತ್ತೊಂದು ವಿಕೆಟ್‌ ಪಥನದಂತಾಗಿದೆ. ಮುನಿಯಪ್ಪ ಅಷ್ಟುಸಲೀಸಾಗಿ ರಮೇಶ್‌ ಕುಮಾರ್‌ ಕೈಗೆ ಪಕ್ಷವನ್ನು ಒಪ್ಪಿಸಿ ಸುಮ್ಮನೆ ಕೂರುವವರಲ್ಲ. ಇತ್ತೀಚಿನ ಈ ಬೆಳವಣಿಗೆಗಳಿಂದ ಸ್ವಲ್ಪ ಸುಸ್ತಾದಂತೆ ಕಂಡು ಬರುತ್ತಿರುವ ಅವರು ಮುಂದೆ ಏನು ಮಾಡುತ್ತಾರೋ ಕಾದು ನೋಡಬೇಕಾಗಿದೆ.

click me!