ಕಳಪೆ ಕೆಲಸದಿಂದ ಕೆಆರ್‌ಎಸ್‌ ಅಣೆಕಟ್ಟೆ ಕುಸಿತ

By Kannadaprabha NewsFirst Published Jul 21, 2021, 2:22 PM IST
Highlights
  • ಕೆಆರ್‌ಎಸ್ ಅಣೆಕಟ್ಟೆ ಬಳಿ ಮೆಟ್ಟಿಲು ರಸ್ತೆಯ ಗೋಡೆ ಕುಸಿತ
  • ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಮಾನಸದಲ್ಲಿ ಹಲವು ಪ್ರಶ್ನೆ
  •  ಕಳಪೆ ಕಾಮಗಾರಿ ಕಾರಣ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. 

 ಮಂಡ್ಯ (ಜು.21): ಒಂದು ಸಾಧಾರಣ ಮೆಟ್ಟಿಲು ರಸ್ತೆಯ ಗೊಡೆ ನಿರ್ಮಾಣದ ಕಾಮಗಾರಿಯನ್ನೇ ಕಳಪೆಯಿಂದ ನಡೆಸಿರುವ ಕೆಆರ್‌ಎಸ್ ಇಂಜಿನಿಯರ್‌ಗಳು ಇನ್ನು ಅಣೆಕಟ್ಟೆ ನಿರ್ವಹಣೆಯಲ್ಲಿ ಇನ್ನೆಷ್ಟರ ಮಟ್ಟಿಗೆ ಸುರಕ್ಷತೆಯನ್ನು ಕಾಯ್ದುಕೊಂಡಿದ್ದಾರೆ. 

ಭಾನುವಾರ ಕೆಆರ್‌ಎಸ್ ಅಣೆಕಟ್ಟೆ ಬಳಿ ಮೆಟ್ಟಿಲು ರಸ್ತೆಯ ಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಮಾನಸದಲ್ಲಿ ಕೇಳಿಬರುತ್ತಿರುವ ಪ್ರಶ್ನೆ ಇದು. 

ಕೆಆರ್‌ಎಸ್ ಅಣೆಕಟ್ಟು ಮೇಲ್ಬಾಗದಿಂದ ಬೃಂದಾವನವನ್ನು ಸಂಪರ್ಕಿಸುವ  ಮೆಟ್ಟಿಲು ರಸ್ತೆಯ ಗೋಡೆ ಕುಸಿದಿರುವುದಕ್ಕೆ ಕಳಪೆ ಕಾಮಗಾರಿ ಕಾರಣ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಗೋಡೆಗೆ ಕಲ್ಲುಗಳನ್ನು ಜೋಡಿಸುವ ವೇಳೆ ಒಳಭಾಗಕ್ಕೆ  ಮಣ್ಣನ್ನು ತುಂಬಿ ಮೇಲ್ಭಾಗದಲ್ಲಿ ಮಾತ್ರ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿದೆ.

'KRS ಅಣೆಕಟ್ಟೆಯಲ್ಲಿ ನೀರಿನ ಸೋರಿಕೆ ಆರಂಭ'

ಇದರ ಪರಿಣಾಮ ಮಳೆಯಿಂದ ಮಣ್ಣು ಕುಸಿತಗೊಂಡು ಕಲ್ಲುಗಳು ಜಾರಿಬಿದ್ದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅದರೆ ವಾಸ್ತವ ಸತ್ಯ ಇನ್ನೂ ನಿಗೂಢವಾಗಿಯೇ ಇದೆ. 

ಕೆಆರ್‌ಎಸ್ ಅಣೆಕಟ್ಟೆಯಿಂದ ಎಷ್ಟು ನೀರು ಹರಿದುಹೋಗಿದೆಯೋ ಅದರ ನಿರ್ವಹಣೆಗೂ ಅಷ್ಟೆ ಪ್ರಮಾಣದಲ್ಲಿ ಹಣ ಹರಿದು ಬಂದಿದೆ. ಆದರೆ ಈ ಹಣ ಅಣೆಕಟ್ಟೆ ಸುಭದ್ರತೆ ಕಾಪಾಡುವುದಕ್ಕೆ ಎಷ್ಟರಮಟ್ಟಗೆ ಬಳಕೆಯಾಗಿದೆ ಎಂಬ ಬಗ್ಗೆ ಪ್ರಶ್ನೆ ಉದ್ಬವಿಸಿದೆ. ದುರಸ್ತಿ ನೆಪದಲ್ಲಿ  ಕೊಟ್ಯಂತರ ರು.  ಯಾರ ಜೇಬಿಗೆ ಸೇರಿದೆಯೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಗೋಡೆ ಕುಸಿದಿರುವುದಕ್ಕು ಅಣೆಕಟ್ಟು ದುರಸ್ತಿ ಕಾಮಗಾರಿ ತನಿಖೆ ಜೊತೆಗೆ  ಸುರಕ್ಷತೆಯ ಪರಿಶೀಲನೆಯು ನಡೆಯಬೇಕೆಂದು ಒತ್ತಾಯಿಸಿದ್ದಾರೆ. 

ಮೆಟ್ಟಿಲು ರಸ್ತೆಯ ಗೋಡೆ ಕಾಮಗಾರಿಯನ್ನು ಕಳಪೆಯಿಂದ ನಡೆಸಿರುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಗೋಡೆ ಯಾವ ಕಾರಣಕ್ಕೆ ಕುಸಿದಿದೆ ಎಂಬ ಬಗ್ಗೆಯೂ ಸ್ಪಷ್ಟವಾಗಿ ಹೇಳದೆ ಎಲ್ಲವನ್ನೂ ಮರೆಮಾಚಲಾಗುತ್ತಿದೆ. ಅಧಿಕಾರಿಗಳ ನಡೆ ಸಂಶಯಾಸ್ಪದವಾಗಿರುವುದರಿಂದ ಅಣೆಕಟ್ಟೆಯ ಸುಭದ್ರತೆಯ ಬಗ್ಗೆ ನೀಡಿರುವ ಹೇಳಿಕೆಯಲ್ಲೂ ಸತ್ಯಾಂಶವಿದೆ ಎನ್ನುವುದನ್ನು ನಂಬುವುದು ಕಷ್ಟವಾಗಿದೆ. 

ಕೆಆರ್‌ಎಸ್ ಅಣೆಕಟ್ಟು ಮೇಲ್ನೋಟಕ್ಕೆ ಭದ್ರವಾಗಿರುವುದಾಗಿ ನಿರಾವರಿ ನಿಗಮದ ಅಧಿಕಾರಿಗಳು ಹೇಳುತ್ತಿದ್ದಾರೆ. ಅದರೆ ಅಣೆಕಟ್ಟು ಸುತ್ತ ನಡೆಯುತ್ತಿರುವ  ಗಣಿಗಾರಿಕೆಯಿಂದ ಅಣೆಕಟ್ಟು ಸುರಕ್ಷಿತವಾಗಿರಲಿದೆ ಎಂಬ ಬಗ್ಗೆ ತುಟಿ ಬಿಚ್ಚುತ್ತಿಲ್ಲ.  

click me!