ವಿಜಯಪುರ (ಸೆ.29): ತಾವು 45 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದು, ಬಿಜೆಪಿಗೆ (BJP) ಬಂದು 17 ವರ್ಷವಾಗಿದೆ. ಆದರೂ ಬಿಜೆಪಿ ತನ್ನ ಸಾಮರ್ಥ್ಯವನ್ನು ಬಳಸಿಕೊಂಡಿಲ್ಲ ಎಂದು ಪಕ್ಷದ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ನಗರದಲ್ಲಿ ಬಿಜೆಪಿ ರಾಜ್ಯಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸಮ್ಮುಖದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ (Ramesh Jigajinagi) ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
undefined
ಪಕ್ಷ ನನ್ನನ್ನು ಯಾಕೆ ಬಳಸಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಜಿಗಜಿಣಗಿ, ನನ್ನ ಅಭಿಪ್ರಾಯವನ್ನು ಪಕ್ಷದ ವರಿಷ್ಠರಿಗೆ ತಿಳಿಸಬೇಕು ಎಂದು ವೇದಿಕೆಯಲ್ಲಿ ಘಂಟಾಘೋಷವಾಗಿ ಹೇಳಿದರು.
ಜಿಗಜಿಣಗಿ ಮುನಿಸು, ನಿರೂಪಕನಿಗೆ ತರಾಟೆ, ಮನವೊಲಿಸಿದ ಶಶಿಕಲಾ ಜೊಲ್ಲೆ
ನೀನೊಬ್ಬ ಲೋಕಸಭೆ (Loksabha) ಸದಸ್ಯನಾಗಿ ಜವಾಬ್ದಾರಿ ಜವಾಬ್ದಾರಿ ಕೆಲಸ ಮಾಡುವಂತೆ ಯಾವೊಬ್ಬ ನಾಯಕರು ನನ್ನನ್ನು ಕರೆದಿಲ್ಲ. ನಾನು ಪಕ್ಷಕ್ಕೆ ಬಂದು 17 ವರ್ಷ ಕಳೆದರೂ ಯಾವ ನಾಯಕರೂ ನನಗೆ ಜವಾಬ್ದಾರಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಪಕ್ಷವನ್ನು ಕೆಳಗಿಟ್ಟು ಎಂದಿಗೂ ಮಾತನಾಡಿಲ್ಲ. ನನಗೂ ವಯಸ್ಸಾಗಿದೆ. ನಾನು ಕಾರ್ಯಕರ್ತರ ಜೊತೆಗೆ ಕಾರ್ಯಕರ್ತನಾಗಿ ಇರುತ್ತೇನೆ ಎಂದು ಅವರು ನೊಂದು ನುಡಿದರು.
ನನಗೇನೂ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇಲ್ಲ. 45 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದರೂ ಯಾವುದೇ ಉದ್ಯಮ ನಡೆಸುತ್ತಿಲ್ಲ. ರಾಜಕಾರಣ ಬಿಟ್ಟರೆ ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದೇನೆ. ಆದರೆ ಬಿಜೆಪಿ ಬಂದು 17 ವರ್ಷಗಳಾದರೂ ಯಾವುದೇ ಜವಾಬ್ದಾರಿ ನೀಡಿಲ್ಲ. ಹೀಗಾಗಿ ಈ ಸಂದೇಶವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರು ಹೈಕಮಾಂಡ್‌ಗೆ ತಲುಪಿಸಲು ನನ್ನ ನೋವನ್ನು ತೋಡಿಕೊಂಡಿದ್ದೇನೆ ಎಂದರು.
ನಾನು ಬೇಡವಾಗಿದ್ದರೆ ಸ್ಪಷ್ಟವಾಗಿ ನೇರವಾಗಿ ಬೇಡ ಎಂದು ಹೇಳಿ ಬಿಡಲಿ ಎಂದು ಸಂಸದ ರಮೇಶ ಜಿಗಜಿಣಗಿ ನೀಡಿದ ಹೇಳಿಕೆ ಸಿಂದಗಿ ಮತ್ತು ಹಾನಗಲ್ ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರಲ್ಲಿ ಯಾವ ರೀತಿಯ ಸಂಚಲನ ಮೂಡಿಸುತ್ತದೆ ಎಂಬುವುದು ಕುತೂಹಲ ಮೂಡಿಸಿದೆ.