ಧರ್ಮವನ್ನ ಉಳಿಸುವುದಕ್ಕಾಗಿ ಹೋರಾಟ ಮಾಡಬೇಕಿದೆ. ತಾವು ಮುಂದೆ ನಿಂತು ಹೋರಾಟ ಮಾಡಬೇಕಿದೆ. ರಂಭಾಪುರಿ ಶ್ರೀಗಳು ಹೋರಾಟದ ನಾಯಕತ್ವ ವಹಿಸಬೇಕು ಅಂತ ವೇದಿಕೆಯಲ್ಲಿ ರಂಭಾಪುರಿ ಶ್ರೀಗಳಿಗೆ ಮನವಿ ಸಲ್ಲಿಸಿದ ಸಚಿವ ಆರಗ ಜ್ಞಾನೇಂದ್ರ
ಹಾಸನ(ಅ.02): ಒಂದು ಮಠ, ಒಬ್ಬ ಧರ್ಮಗುರುಗಳು ಏನನ್ನ ಮಾಡಬೇಕು ಅಂತ ಜನ ನಿರೀಕ್ಷೆ ಮಾಡಿದ್ದಾರೋ, ಅದನ್ನ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳು ಮಾಡಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಧರ್ಮ ರಕ್ಷಣೆಗೆಗಾಗಿ ಹೋರಾಡುತ್ತಿದ್ದಾರೆ. ಧರ್ಮ ಪ್ರಚಾರಕ್ಕೆ ರಾಜ್ಯ ಪ್ರವಾಸ ಮಾಡ್ತಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ ಹಿಂದೂ ಧರ್ಮದ ಧರ್ಮವಾಣಿಯಾಗಿದೆ. ನಾವೆಲ್ಲರೂ ಮಹಾನ್ ಧರ್ಮದ ಅಂಗಗಳು. ಇಂತಹ ಧರ್ಮ ಉಳಿಯಬೇಕು ಹಾಗೂ ಬೆಳೆಯಬೇಕು. ಇಂದು ಧರ್ಮಕ್ಕೆ ಸವಾಲಿನ ದಿನಗಳಾಗಿವೆ. ನನ್ನ ಧರ್ಮವೇ ಶ್ರೇಷ್ಠ, ನನ್ನ ಧರ್ಮಗುರುವೇ ವಿಶ್ವಗುರು ಅಂತೇಳಿ, ಮಾಡಬಾರಬಾರಂದಹ ಕೆಲಸಗಳನ್ನು ಮಾಡುತ್ತಿದ್ದಾರೆ. ರಕ್ತಪಾತಗಳು, ಕೊಲೆಗಳು, ಬಾಂಬ್ ಹಾಕುವಂತಹ ಪ್ರಯತ್ನಗಳು ನಡೆಯುತ್ತಿವೆ. ಒಂದು ಸಾಯಿಸುವ ಧರ್ಮ, ಅದು ಧರ್ಮವೇ ಅಲ್ಲ ನೀವೇ ಹೇಳಿ, ಭಾರತದ ಉದ್ದಗಲಕ್ಕೂ ನನ್ನ ಧರ್ಮವೇ ಜಾಸ್ತಿಯಾಗಬೇಕು ಅಂತ ಇಂತಹವನ್ನು ಮಾಡುತ್ತಿದ್ದಾರೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.
ಇಂದು(ಭಾನುವಾರ) ಬಾಳೆಹೊನ್ನೂರು ರಂಭಾಪುರಿ ಶ್ರೀ ನೇತೃತ್ವದಲ್ಲಿ ನಡೆಯುತ್ತಿರುವ ದಸರಾ ಧರ್ಮಸಮ್ಮೇಳದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಮತಾಂತರದ ಪಿಡುಗು ಹೆಚ್ಚಾಗುತ್ತಿದೆ. ಮೊನ್ನೆ ನಮ್ಮ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನ ಜಾರಿಗೆ ತಂದಿದೆ. ಕಾಯ್ದೆ ಜಾರಿಯಾದ ಬಳಿಕ ಕ್ರೈಸ್ತ, ಮುಸ್ಲಿಂ ಧರ್ಮಗುರುಗಳು ನನ್ನ ಬಳಿ ಬಂದು ನಿಷೇಧ ಕಾಯ್ದೆಯಿಂದ ನಮಗೆ ತೊಂದರೆಯಾಗುತ್ತದೆ ಅಂತ ಕೇಳಿದ್ದರು. ನಿಮಗೆ ಏನು ತೊಂದರೆಯಾಗುತ್ತಿದೆ ಅಂತ ನಾನು ಕೇಳಿದೆ. ಈ ಕಾಯ್ದೆ ಯಾವುದೇ ಧಾರ್ಮಿಕ ಆಚರಣೆಗೆ ತೊಂದರೆ ಮಾಡೋದಿಲ್ಲ. ಮತಾಂತರ ಆಗುವವನು ಹಾಗೂ ಮಾಡುವವನು ಯಾರು ಅಂತ ತಿಳಿಸಬೇಕು. ಬಲವಂತದ ಮತಾಂತರ ಮಾಡಿದರೆ ಶಿಕ್ಷೆಯನ್ನು ಕೊಡುವುದೇ ಕಾನೂನಿನಲ್ಲಿದೆ. ಮತಾಂತರ ಮಾಡಿದವರು, ಆದವನು ಐದು ವರ್ಷ ಜೈಲಿಗೆ ಹೋಗಬೇಕು. ಮತಾಂತರ ಆದವನು ಮೂಲ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾನೆ. ದಲಿತ, ಮುಸ್ಲಿಂ, ಕ್ರೈಸ್ತ ಯಾರೇ ಆಗಲಿ ಮೂಲ ಸೌಲಭ್ಯ ಕಳೆದುಕೊಳ್ಳುತ್ತಾನೆ. ಆತ ಯಾವ ಧರ್ಮಕ್ಕೆ ಹೋಗುತ್ತಾನೆ ಆ ಸೌಲಭ್ಯವನ್ನು ಮಾತ್ರ ಪಡೆದುಕೊಳ್ಳುತ್ತಾನೆ. ದಲಿತರನ್ನು ಮುಖ್ಯವಾಹಿನಿಗೆ ತರಬೇಕೆಂದು ಮಾಡಿರೋ ಸೌಲಭ್ಯವನ್ನು ಮತಾಂತರವಾದರೆ ಕಳೆದುಕೊಳ್ಳುತ್ತಾರೆ ಅಂತ ತಿಳಿಸಿದ್ದಾರೆ.
ರಾಜ್ಯದಲ್ಲಿ 110 ಪಿಎಫ್‌ಐ ಮುಖಂಡರ ಬಂಧನ: ಗೃಹ ಸಚಿವ ಅರಗ ಜ್ಞಾನೇಂದ್ರ
ದೇಶ ಧರ್ಮವನ್ನ ಗಟ್ಟಿಗೊಳಿಸುವ ಅವಶಕ್ಯತೆ ಇದೆ. ಸ್ವಾತಂತ್ರ್ಯ ಬಳಿಕ ದೇಶ ವಿಭಜಿಸೋವಾಗ ಗಾಂಧೀಜಿಯವರು ವಿರೋಧ ಮಾಡಿದ್ರು ಆದರೂ ಭಾರತ - ಪಾಕಿಸ್ತಾನ ಧರ್ಮದ ಆಧಾರದಲ್ಲಿ ವಿಭಜನೆ ಆಯ್ತು. ಅಖಂಡವಾಗಿದ್ದ ಭಾರತ ಛಿದ್ರವಾಯಿತು. ಈಗ ನಮ್ಮೂರುಗಳನ್ನೇ ಛಿದ್ರಗೊಳಿಸುವ ಹುನ್ನಾರ ನಡೀತಾ ಇದೆ. ಮೊನ್ನೆ ಒಂದು ಸಂಘಟನೆಯನ್ನು ಬ್ಯಾನ್ ಮಾಡಿದ್ವಿ, ಯಾಕೆ ಬ್ಯಾನ್ ಮಾಡಿದ್ವಿ, ಶಿವಮೊಗ್ಗದಲ್ಲಿ ಒಬ್ಬನಿಗೆ ಚಾಕು ಹಾಕ್ತಾರೆ. ಆ ಪ್ರಕರಣದ ಆರೋಪಿಗಳನ್ನ ಪೊಲೀಸರು ತನಿಖೆ ಮಾಡುತ್ತಾರೆ. ತನಿಖೆಯಲ್ಲಿ ಬಾಂಬ್‌ಗಳನ್ನ ತಯಾರು ಮಾಡ್ತಾರೆ ಅನ್ನೋದು ಗೊತ್ತಾಗುತ್ತೆ. ಶಿವಮೊಗ್ಗ ಪೊಲೀಸರು ಸರಿಯಾದ ತನಿಖೆ ಮಾಡದೇ ಹೋಗಿದ್ದರೆ ಇನ್ನೆಷ್ಟು ಬಲಿತಾಗುತ್ತಿದ್ದವೋ. ಇವರವನ್ನ ನಾವು ಎಂದಿಗೂ ಸಹಿಸಬಾರದು. ನಮಗೆ ಓಟಿನ ಆಸೆ, ಸತ್ಯ ಹೇಳೋದಕ್ಕೆ ಭಯ. ಆ ಓಟಿನ ಆಸೆಗಾಗಿ ಒಂದೇ ಬಾರಿಗೆ ಓಟು ಬೀಳ್ತಾವೆ ಅಂತ ಅವರ ಬಳಿಗೇ ಹೋಗಿ ಏನೆಲ್ಲಾ ನೀಡೋದಕ್ಕೆ ಪ್ರಯತ್ನ ಮಾಡ್ತಿದ್ದೇವೆ. ಧರ್ಮವನ್ನ ಉಳಿಸುವುದಕ್ಕಾಗಿ ಹೋರಾಟ ಮಾಡಬೇಕಿದೆ. ತಾವು ಮುಂದೆ ನಿಂತು ಹೋರಾಟ ಮಾಡಬೇಕಿದೆ. ರಂಭಾಪುರಿ ಶ್ರೀಗಳು ಹೋರಾಟದ ನಾಯಕತ್ವ ವಹಿಸಬೇಕು ಅಂತ ವೇದಿಕೆಯಲ್ಲಿ ರಂಭಾಪುರಿ ಶ್ರೀಗಳಿಗೆ ಸಚಿವ ಆರಗ ಜ್ಞಾನೇಂದ್ರ ಮನವಿ ಸಲ್ಲಿಸಿದ್ದಾರೆ.
ನೀವು ಮುಂದೆ ಬರಬೇಕು, ನಾವು ನಿಮ್ಮ ಹಿಂದೆ ಇರುತ್ತೇವೆ. ಇನ್ನಷ್ಟು ದಿನಗಳು ಸವಾಲಿನ ದಿನಗಳು ನಮ್ಮ ಮುಂದೆ ಇದೆ. ನನ್ನ ವಿನಂತಿ ಇದೆ, ಧರ್ಮ ರಕ್ಷಣೆಗೆ ಮುಂಚೂಣಿ ವಹಿಸಬೇಕು ಎಂದ ಗೃಹ ಸಚಿವರು ಮನವಿ ಮಾಡಿದ್ದಾರೆ.