ರಾಯಚೂರು ನಗರಸಭೆ ಅಧ್ಯಕ್ಷೆ ನೇತೃತ್ವದಲ್ಲಿ ಸೀರೆ ಮತ್ತು ಬಟ್ಟೆ ವಿತರಣೆ, ನಗರಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಪೌರಕಾರ್ಮಿಕರಿಗೆ ಹೊಸ ಬಟ್ಟೆ ವಿತರಣೆ
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು
ರಾಯಚೂರು(ಅ.02): ರಾಜ್ಯದೆಲ್ಲೆಡೆ ದಸರಾ ಹಬ್ಬವನ್ನು ಸಡಗರ- ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ದಸರಾ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ರಾಯಚೂರು ನಗರಸಭೆ ಹೊಸದೊಂದು ನಿರ್ಧಾರ ತೆಗೆದುಕೊಂಡಿದೆ. ಇದು ರಾಯಚೂರು ನಗರಸಭೆಯ ಇತಿಹಾಸದಲ್ಲೇ ಮೊದಲ ಆಗಿದ್ದು, ಈ ನಿರ್ಧಾರದಿಂದ ಇಡೀ ನಗರಸಭೆಯ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಖುಷ್ ಆಗಿದ್ದಾರೆ. ರಾಯಚೂರು ನಗರಸಭೆಯಲ್ಲಿ ಹತ್ತಾರು ಸಮಸ್ಯೆಗಳು ತಾಂಡವಾಡುತ್ತಿವೆ. ಬೆಳಗ್ಗೆ ಆದ್ರೆ ಕಸ, ಚರಂಡಿ ನೀರಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆ ಗಳು ಇವೆ. ಈ ಸಮಸ್ಯೆ ಗಳ ಮಧ್ಯೆಯೂ ರಾಯಚೂರು ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಲ್ ದಸರಾ ಹಬ್ಬಕ್ಕೆ ಹೊಸ ಪದ್ಧತಿ ಶುರು ಮಾಡಿದ್ದಾರೆ. ನಗರಸಭೆಯಲ್ಲಿ ಹಗಲು - ಇರಳು ಎನ್ನದೇ ಕೆಲಸ ಮಾಡುವ ಕಚೇರಿಯಲ್ಲಿನ ನೌಕರರು ಹಾಗೂ ಸಿಬ್ಬಂದಿ ಮತ್ತು ಪೌರಕಾರ್ಮಿಕರಿಗೆ ದಸರಾ ಹಬ್ಬದ ಉಡುಗೊರೆಯಾಗಿ ಹೊಸ ಬಟ್ಟೆ ನೀಡಿದ್ದಾರೆ.
undefined
ಮಹಿಳೆಯರಿಗೆ ಸೀರೆ ಮತ್ತು ಪುರುಷರಿಗೆ ಪ್ಯಾಂಟ್ ಮತ್ತು ಶರ್ಟ್ ಬಟ್ಟೆ ವಿತರಣೆ:
ಕೋವಿಡ್ ವೇಳೆಯಲ್ಲಿ ಪೌರಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ರು. ಅವರ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸಹ ಗೌರವಿಸಿದರು. ಇಂತಹ ಪೌರಕಾರ್ಮಿಕರಿಗೆ ಪೋತ್ಸಾಹ ನೀಡಬೇಕು ಎಂಬ ಮಹಾದಾಸೆಯಿಂದ ರಾಯಚೂರು ನಗರಸಭೆ ಅಧ್ಯಕ್ಷೆ ಲಲಿತಾ ಆಂಜನೇಯ ಕಡಗೋಲ್ ಮತ್ತು ನಗರಸಭೆ ಉಪಾಧ್ಯಕ್ಷರು ಮತ್ತು ಇತರೆ ಎಲ್ಲಾ ಸದಸ್ಯರು ಸೇರಿ ಹೊಸ ಬಟ್ಟೆ ನೀಡಲು ತೀರ್ಮಾನಿಸಿದರು.
ಪ್ರತಾಪಗೌಡ ಗೆದಿದ್ದರೆ ಕೋಟ್ಯಂತರ ಅನುದಾನದಿಂದ ಅಭಿವೃದ್ಧಿ: ಶ್ರೀರಾಮುಲು
ಕಳೆದ ಎರಡು - ಮೂರು ವರ್ಷಗಳಿಂದ ದಸರಾ ಸಡಗರ ಸಂಭ್ರಮದಿಂದ ಆಚರಣೆ ಮಾಡಲು ಆಗಿರಲಿಲ್ಲ. ಹೀಗಾಗಿ ಈ ವರ್ಷ ನಾಡಹಬ್ಬ ದಸರಾ ಸಡಗರ ಸಂಭ್ರಮದಿಂದ ಆಚರಣೆ ಮಾಡಲು ರಾಯಚೂರು ನಗರಸಭೆ ನಿರ್ಧಾರ ಮಾಡಿದೆ. ಹಬ್ಬದ ವೇಳೆಯಲ್ಲಿ ಎಲ್ಲರೂ ಹೊಸ ಬಟ್ಟೆ ಹಾಕಿದಂತೆ ನಗರಸಭೆ ಸಿಬ್ಬಂದಿಯೂ ಸಹ ಹೊಸ ಬಟ್ಟೆ ಧರಿಸಿ ಹಬ್ಬ ಆಚರಣೆ ಮಾಡಬೇಕು ಎಂಬ ಮಹಾದಾಸೆಯಿಂದ ನಗರಸಭೆ ಅಧ್ಯಕ್ಷೆ ಲಲಿತಾ ಆಂಜನೇಯ ಕಡಗೋಲ್ ಸ್ವಂತ ಹಣದಲ್ಲಿ ಪೌರಕಾರ್ಮಿಕರಿಗೆ ಮತ್ತು ಸಿಬ್ಬಂದಿ ಹೊಸ ಬಟ್ಟೆ ಖರೀದಿಸಿ ವಿತರಣೆ ಮಾಡಿದ್ರು.
ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಂದ ಬಟ್ಟೆ ವಿತರಣೆ:
ಇಂದು ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆ ರಾಯಚೂರು ಆವರಣದಲ್ಲಿ ಸ್ವಚ್ಚತಾ ಕಾರ್ಯ ಮುಗಿಸಿಕೊಂಡು ಬಂದ 187 ಮಹಿಳಾ ಪೌರಕಾರ್ಮಿಕರಿಗೆ ಸೀರೆ ಹಾಗೂ 580ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ ಮಾಡಲಾಯ್ತು. ಈ ವೇಳೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಹಾಗೂ ಸಂಸದ ರಾಜಾ ಅಮರೇಶ್ವರ ನಾಯಕ ನೇತೃತ್ವದಲ್ಲಿ ಪೌರಕಾರ್ಮಿಕರಿಗೆ ಹೂ ಹಾಕಿ ಹೊಸ ಬಟ್ಟೆ ನೀಡಿ ಸನ್ಮಾನಿಸಲಾಯಿತು.
ಹೊಸ ಬಟ್ಟೆ ಪಡೆದ ಪೌರಕಾರ್ಮಿಕರು ಫುಲ್ ಖುಷ್:
ನಾಡಹಬ್ಬ ದಸರಾ ಪ್ರತಿಯೊಬ್ಬರ ಜೀವನದಲ್ಲಿ ಸುಖ - ಶಾಂತಿ - ನೆಮ್ಮದಿ ತರುವ ಹಬ್ಬವಾಗಿದೆ. ಈ ಹಬ್ಬಕ್ಕೆ ಪ್ರತಿಯೊಬ್ಬರೂ ಹೊಸ ಬಟ್ಟೆ ಧರಿಸಿ ಬನ್ನಿ ಹಂಚಿಕೆ ಮಾಡುವುದು ಹಬ್ಬದ ವಿಶೇಷವಾಗಿತ್ತು. ಹಬ್ಬದ ದಿನ ಎಲ್ಲಾ ಪೌರಕಾರ್ಮಿಕರು ಸಹ ಹೊಸ ಬಟ್ಟೆ ಧರಿಸಬೇಕು ಎಂಬ ಉದ್ದೇಶದಿಂದ ಹೊಸದಾಗಿ ಆಯ್ಕೆಗೊಂಡ ನಗರಸಭೆ ಅಧ್ಯಕ್ಷೆ ತಮ್ಮ ಸ್ವಂತ ಹಣದಲ್ಲಿ ಬಟ್ಟೆ ವಿತರಣೆಗೆ ಪ್ಲಾನ್ ಮಾಡಿ ಎಲ್ಲರಿಗೂ ಹೊಸ ಬಟ್ಟೆ ವಿತರಣೆ ಮಾಡಿದ್ರು. ನಗರಸಭೆ ಅಧ್ಯಕ್ಷೆ ಲಲಿತಾ ಆಂಜನೇಯ ಕಡಗೋಲ್ ಅವರ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಒಟ್ಟಿನಲ್ಲಿ ರಾಯಚೂರು ನಗರಸಭೆ ಇತಿಹಾಸದಲ್ಲೇ ದಸರಾ ವೇಳೆ ಯಾರು ಪೌರಕಾರ್ಮಿಕರಿಗೆ ಹೊಸ ಬಟ್ಟೆ ವಿತರಣೆ ಮಾಡಿರಲಿಲ್ಲ. ಈಗಿನ ಅಧ್ಯಕ್ಷರು ಹೊಸ ಬಟ್ಟೆ ವಿತರಣೆ ಮಾಡಿದ್ದು ಪೌರಕಾರ್ಮಿಕರು ಖುಷ್ ಆಗಿದ್ದಾರೆ.