Kannada FM ಮುಚ್ಚಲು ರಮಾಕಾಂತ್‌ ಸಂಚು: ಮಾಜಿ ಸಚಿವ ಸುರೇಶ್‌ ಕುಮಾರ್‌

By Kannadaprabha NewsFirst Published Feb 1, 2022, 7:42 AM IST
Highlights

*   ದಕ್ಷಿಣ ವಲಯ ಆಕಾಶವಾಣಿ ಮುಖ್ಯಸ್ಥರ ವಿರುದ್ಧ ಸುರೇಶ್‌ ಕುಮಾರ್‌ ಆರೋಪ
*   ಕೇಂದ್ರ ಸರ್ಕಾರದ ಹೆಸರಿಗೆ ಅನವಶ್ಯಕವಾಗಿ ಮಸಿ ಬಳಿಯುವ ಪ್ರಯತ್ನ ಮಾಡಬಾರದು
*   ನಿಮಗೆ ಸಂಸ್ಕೃತಿ-ಸೊಗಡಿನ ಮೌಲ್ಯ ತಿಳಿದಿದೆಯೇ? 
 

ಬೆಂಗಳೂರು(ಫೆ.01):  ಬೆಂಗಳೂರು ನಗರದ ಸಂಸ್ಕೃತಿಯ ಪ್ರತೀಕ ಹಾಗೂ ವ್ಯಾಪಾರಿ ಮನೋಧರ್ಮವನ್ನು ಮೀರಿ ಅಪ್ಪಟ ಮನೋರಂಜನೆಗೆ ಹೆಸರಾದ ರೇನ್‌ ಬೋ 101.3 ಎಫ್‌ಎಂ(Rainbow 101.3 FM) ವಾಹಿನಿಯನ್ನು ಹಂತ ಹಂತವಾಗಿ ಮುಚ್ಚುವ ಹುನ್ನಾರ ದಕ್ಷಿಣ ವಲಯದ ಆಕಾಶವಾಣಿ ಮುಖ್ಯಸ್ಥರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿರುವ ರಮಾಕಾಂತ್‌ ಅವರದ್ದಾಗಿದೆ ಎಂದು ಮಾಜಿ ಸಚಿವರೂ ಆಗಿರುವ ಆಡಳಿತಾರೂಢ ಬಿಜೆಪಿ ಶಾಸಕ ಎಸ್‌.ಸುರೇಶ್‌(S Suresh Kumar) ಕುಮಾರ್‌ ಗಂಭೀರವಾಗಿ ಆರೋಪಿಸಿದ್ದಾರೆ.

ಈ ಅಧಿಕಾರಿಯ ಭಾಷಾಂಧತೆ ಹಾಗೂ ಸುದ್ದಿಮೂಲದ ಜವಾಬ್ದಾರಿಗಳನ್ನಷ್ಟೇ ಸೇವೆಯುದ್ದಕ್ಕೂ ನಿರ್ವಹಿಸಿ, ಮನೋರಂಜನೆಯ ಕುರಿತಂತೆ ಅವರು ಹೊಂದಿರುವ ಉಪೇಕ್ಷೆ ರಮಾಕಾಂತ್‌ ರವರ ಇಂತಹ ದುಷ್ಟಆಲೋಚನೆಗೆ ಮೂಲವಾಗಿದೆ. ಇದರಲ್ಲಿ ಯಾವುದೇ ಪಾತ್ರವಿರದ ಕೇಂದ್ರ ಸರ್ಕಾರದ(Central Government) ಹೆಸರಿಗೆ ಅನವಶ್ಯಕವಾಗಿ ಮಸಿ ಬಳಿಯುವ ಪ್ರಯತ್ನ ಮಾಡಬಾರದು. ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ, ‘ರಮಾಕಾಂತ್‌ ಗೋ ಬ್ಯಾಕ್‌’ ಚಳವಳಿ ಪ್ರಬಲವಾಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

Suresh Kumar Simplicity : ಸ್ನೇಹಿತರೊಂದಿಗೆ ಬಿಎಂಟಿಸಿ ಏರಿದ ಸುರೇಶ್ ಕುಮಾರ್

ಈ ಸಂಬಂಧ ಸೋಮವಾರ ಆಕಾಶವಾಣಿ(Akashvani) ಮುಖ್ಯಸ್ಥರಾದ ರಮಾಕಾಂತ್‌ ಅವರಿಗೆ ಪತ್ರದ ಮೂಲಕ ಕೆಲವು ಪ್ರಶ್ನೆಗಳನ್ನು ಕೇಳಿರುವ ಸುರೇಶ್‌ ಕುಮಾರ್‌, ಅವುಗಳಿಗೆ ಕೂಡಲೇ ಉತ್ತರವನ್ನು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

ವಾಹಿನಿಯ ಹೆಚ್ಚುವರಿ ಅಪರ ಮಹಾ ನಿರ್ದೇಶಕರಾಗಿ ತಮಗೆ ಲಭ್ಯವಿರುವ ವಿವೇಚನಾಧಿಕಾರವನ್ನು ಬಳಸಿಕೊಂಡು ವ್ಯಾಪಾರಿ ಮನೋಧರ್ಮದ ವಾಹಿನಿಗಳ ನಡುವೆ ಉತ್ತಮ ಮನೋರಂಜನೆಯ ಧ್ಯೇಯದೊಂದಿಗೆ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಿರುವ ಹಾಗೂ ಬೆಂಗಳೂರು(Bengaluru) ನಗರ ಸಂಸ್ಕೃತಿಯ ಪ್ರತೀಕವಾಗಿ ರೂಪುಗೊಳ್ಳುತ್ತಿರುವ ಎಫ್‌.ಎಂ.ರೇನ್‌ ಬೋ 101.3 ಚಾನೆಲ್‌ ಅನ್ನು ವಿರೂಪಗೊಳಿಸುವ ದುಷ್ಕೃತ್ಯಕ್ಕೆ ಮುಂದಾಗಬಾರದು ಎಂದು ಸುರೇಶ್‌ ಕುಮಾರ್‌ ತಾಕೀತು ಮಾಡಿದ್ದಾರೆ.

ನಿಮ್ಮ ಸೇವೆಯುದ್ದಕ್ಕೂ ವಾರ್ತಾ ವಿಭಾಗಗಳಲ್ಲಿ ಕೆಲಸವಷ್ಟೇ ಮಾಡಿ ಅನುಭವ ಇರುವ ತಮಗೆ ಮನೋರಂಜನೆಯ, ಸಂಸ್ಕೃತಿ-ಸೊಗಡಿನ ಮೌಲ್ಯ ತಿಳಿದಿದೆಯೇ? ಬೆಂಗಳೂರು ರೇನ್‌ ಬೋ ವಾಹಿನಿ, ಸ್ಥಳೀಯ ಪ್ರತಿಭೆಗಳಿಗೆ ನೀಡುತ್ತಿರುವ ಪೋತ್ಸಾಹಕ್ಕೆ ನಿಮ್ಮ ಪರ್ಯಾಯ ಆಲೋಚನೆ ಮಾರಕವಾಗಿದೆ ಎಂದು ನಿಮಗೆ ಗೊತ್ತಿದೆಯೇ? ರಾತ್ರಿ 9-11ರವರೆಗೆ ರೇನ್‌ ಬೋ ವಾಹಿನಿಯಲ್ಲಿ ಬಿತ್ತರಗೊಂಡು ಎಲ್ಲರ ಮೆಚ್ಚುಗೆ ಗಳಿಸಿದ್ದ ಕನ್ನಡ ಹಳೆಯ ಚಿತ್ರಗೀತೆಗಳನ್ನು ತೆಗೆದು ಪ್ರೈಮರಿ ಚಾನೆಲ್‌ನ ರಸಹೀನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಉದ್ದೇಶವಾದರೂ ಏನು? ಹೇಗಾದರೂ ಜನ ಈ ವಾಹಿನಿಯಿಂದ ವಿಮುಖರಾಗಲಿ ಎಂಬ ದುರುದ್ದೇಶವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಹಂಸಲೇಖ ಪತ್ನಿಗೆ ಅಭಿನಂದನೆ ಹೇಳಿದ ಸುರೇಶ್ ಕುಮಾರ್

ಪ್ರೈಮರಿ ಚಾನೆಲ್‌ನಲ್ಲಿನ ಹಿಂದಿ -ಅನ್ಯಭಾಷಾ ಸುದ್ದಿ ಕಾರ್ಯಕ್ರಮಗಳನ್ನು ಸಹ ರೇನ್‌ ಬೋ ಮೂಲಕ ಪ್ರಸಾರ ಮಾಡುವ ಹುನ್ನಾರ ನೀವು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವ ರೀತಿಯೇ? ಕನ್ನಡ(Kannada) ಸುದ್ದಿಗಳನ್ನು ಹೊರತುಪಡಿಸಿ, ಹಿಂದಿ(Hindi) ಮತ್ತಿತರೆ ಭಾಷೆಗಳ ಸುದ್ದಿಗಳ ಬಿತ್ತರದ ಅವಶ್ಯಕತೆ ಏನಿದೆ? ಹಿಂದಿ, ತಮಿಳು(Tamil), ತೆಲುಗು(Telugu) ಭಾಷೆಗಳ ಸುದ್ದಿಗಳನ್ನು ಕೂಡಾ ಪ್ರಸಾರ ಮಾಡಿ ಬಹುತ್ವವನ್ನು ಮೆರೆಯಲು ಉದ್ದೇಶಿಸಿರುವ ತಮ್ಮ ದುರಾಲೋಚನೆಯನ್ನು ನಾವೆಲ್ಲರೂ ಗೌರವಿಸಬೇಕೇ? ರೇನ್‌ ಬೋ ಮನೋರಂಜನಾ ಕಾರ್ಯಕ್ರಮಗಳ ಬಹುಮುಖ್ಯ ಗುಣವಾಗಿದ್ದ ಕೇಳುಗರ ಪ್ರತಿಕ್ರಿಯಾತ್ಮಕ ನಿರೂಪಣೆಗಳನ್ನು ಸ್ಥಗಿತಗೊಳಿಸಿ ಮುದ್ರಿತ ಕಾರ್ಯಕ್ರಮಗಳ ಪ್ರಸಾರಕ್ಕೆ ಒತ್ತುಕೊಡುವುದು ಯಾವ ಪುರುಷಾರ್ಥಕ್ಕೆ ಎಂದು ಸುರೇಶ್‌ ಕುಮಾರ್‌ ಅವರು ಪತ್ರದಲ್ಲಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು: ಕೇಂದ್ರದ ವಿರುದ್ಧ HDK ಕೆಂಡಾಮಂಡಲ

ಬೆಂಗಳೂರು: ಕನ್ನಡದ(Kannada) ಕೆಚ್ಚನ್ನು ಮಣಿಸಿ, ಕರ್ನಾಟಕವನ್ನು(Karnataka) ಸಾಂಸ್ಕೃತಿಕವಾಗಿ ಬೆಂಗಾಡು ಮಾಡುವ ಸಕಲ ಪ್ರಯತ್ನವನ್ನು ಕೇಂದ್ರ ಸರ್ಕಾರ(Central Government) ಮಾಡುತ್ತಿದೆ ಎನ್ನುವುದಕ್ಕೆ ಇನ್ನೊಂದು ಸಾಕ್ಷಿ ಇಲ್ಲಿದೆ. ಈಗ ನೇರವಾಗಿ ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಕಿಡಿಕಾರಿದ್ದರು.
 

click me!