ರಾಮನಗರ : ಕೈ ತೊರೆದು ಜೆಡಿಎಸ್‌ ಸೇರಿದ ದಲಿತ ಮುಖಂಡರು

By Kannadaprabha NewsFirst Published Apr 22, 2024, 1:02 PM IST
Highlights

ದಲಿತರ ಬಗೆಗೆ ಹೊಂದಿರುವ ನಿರ್ಲಕ್ಷ್ಯ ಭಾವನೆ ಹಾಗೂ ಆ ಪಕ್ಷದ ನಾಯಕರ ನಡವಳಿಕೆಯಿಂದ ಬೇಸತ್ತು ಅನೇಕ ಮುಖಂಡರು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧ್ಯಕ್ಷ ಅಂಜನಾಪುರ ವಾಸು ಮತ್ತು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೊತ್ತೀಪುರ ಗೋವಿಂದರಾಜು ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾದರು.

  ರಾಮನಗರ :  ದಲಿತರ ಬಗೆಗೆ ಹೊಂದಿರುವ ನಿರ್ಲಕ್ಷ್ಯ ಭಾವನೆ ಹಾಗೂ ಆ ಪಕ್ಷದ ನಾಯಕರ ನಡವಳಿಕೆಯಿಂದ ಬೇಸತ್ತು ಅನೇಕ ಮುಖಂಡರು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧ್ಯಕ್ಷ ಅಂಜನಾಪುರ ವಾಸು ಮತ್ತು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೊತ್ತೀಪುರ ಗೋವಿಂದರಾಜು ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾದರು.

ನಗರದ ಜೆಡಿಎಸ್ ಕಚೇರಿಯಲ್ಲಿ ಕಾಂಗ್ರೆಸ್ ದಲಿತ ಮುಖಂಡರು, , ಬುಡಕಟ್ಟು, ಅಲೆಮಾರಿ ಸಮುದಾಯಗಳ ಸಂಘಟನೆಗಳ ಪದಾಧಿಕಾರಿಗಳು ಅಧಿಕೃತವಾಗಿ ಜೆಡಿಎಸ್ ಸೇರಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರ ಗೆಲುವಿಗೆ ಹಗಲಿರುಳು ಶ್ರಮಿಸುವುದಾಗಿ ಘೋಷಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅಂಜನಾಪುರ ವಾಸು, ಸ್ವಾಭಿಮಾನಿ ದಲಿತ ಸಂಘಟನೆಗಳು ಎಂದೂ ಕಾಂಗ್ರೆಸ್ ಪರವಾಗಿಲ್ಲ. ಆದರೂ ಕಾಂಗ್ರೆಸ್ ಅಂದರೆ ದಲಿತರು, ದಲಿತರು ಅಂದರೆ ಕಾಂಗ್ರೆಸ್ ಎನ್ನುವ ಅಪಪ್ರಚಾರ ಮಾಡಲಾಗಿದೆ.

ನಾವು ಅದನ್ನು ರಾಮನಗರದಿಂದಲೇ ನಿರ್ಮೂಲನೆ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷ ದಲಿತರನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಅಷ್ಟಕ್ಕೂ ಸಮುದಾಯಕ್ಕೆ ಏನು ಕೊಡುಗೆ ನೀಡಿದೆ. ಈಗ ದಲಿತರು ವಿದ್ಯಾವಂತ ಮತ್ತು ಪ್ರಜ್ಞಾವಂತರಾಗಿದ್ದಾರೆ. ಇನ್ನು ಮುಂದೆ ಯಾರೂ ಕಾಂಗ್ರೆಸ್ ಜೊತೆಗೆ ಹೋಗುವುದಿಲ್ಲ. ಜೆಡಿಎಸ್ ಮತ್ತು ಬಿಜೆಪಿಯಲ್ಲಿಯೂ ದಲಿತರು ಇದ್ದಾರೆ ಎಂಬ ಸಂದೇಶ ರವಾನಿಸುತ್ತೇವೆ ಎಂದರು.

ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರನ್ನು ಗೆಲ್ಲಿಸುವ ಮೂಲಕ ದೇಶ ಮತ್ತು ರಾಜ್ಯಕ್ಕೆ ಕೊಡುಗೆ ನೀಡಬೇಕಿದೆ. ವಿಧಾನಸಭಾ ಚುನಾವಣೆಯಲ್ಲಿ ವಾಮ ಮಾರ್ಗದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. 5 ಸಾವಿರ ಬೆಲೆ ಬಾಳುತ್ತದೆ ಎಂದು ಗಿಫ್ಟ್ ಕಾರ್ಡ್ ನೀಡಿ ಮತದಾರರ ದಿಕ್ಕು ತಪ್ಪಿಸಿ ಗೆಲುವು ಸಾಧಿಸಿದಿರಿ. ಇನ್ನು ಮುಂದೆ ಕ್ಷೇತ್ರದಲ್ಲಿ ಗಿಫ್ಟ್, ಹಣ ಆಮಿಷ ನಡೆಯಲ್ಲ. ದಲಿತರು ಸ್ವಾಭಿಮಾನಿಗಳಾಗಿದ್ದು, ಆಸೆ ಆಮಿಷಗಳಿಗೆ ಬಲಿಯಾಗಲ್ಲ ಎಂದು ವಾಸು ತಿಳಿಸಿದರು.

ದಲಿತರ ನಡೆ ಮಂಜುನಾಥ್ ಕಡೆ:

ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಗೋವಿಂದರಾಜು ಕೊತ್ತೀಪುರ, ಎನ್‌ಡಿಎ ಮೈತ್ರಿ ಅಭ್ಯರ್ಥಿ ಮಂಜುನಾಥ್ ಅವರಿಗೆ ಸ್ವಾಭಿಮಾನಿ ದಲಿತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಹಳ್ಳಿ ಮತ್ತು ವಾರ್ಡುಗಳಲ್ಲಿ ದಲಿತರ ನಡೆ ಮಂಜುನಾಥ್ ಕಡೆ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದರು.

ದಲಿತ ಸಂಘಟನೆಗಳು ಸಜ್ಜನ ವ್ಯಕ್ತಿಯಾದ ಡಾ.ಸಿ.ಎನ್ .ಮಂಜುನಾಥ್ ಅವರನ್ನು ಗೆಲ್ಲಿಸಲೇ ಬೇಕೆಂದು ತೀರ್ಮಾನ ಮಾಡಿದೆ. ಅಂಬೇಡ್ಕರ್ ರವರು ಮಾನವನನ್ನು ಗುಣದಿಂದ ಗೌರವಿಸಬೇಕೇ ಹೊರತು ಆತನ ಹುಟ್ಟು, ಜಾತಿ, ಧರ್ಮ, ಪಕ್ಷದಿಂದಲ್ಲ ಎಂದು ಹೇಳಿದ್ದಾರೆ. ಆ ಮಾತಿನಂತೆ ಡಾ.ಮಂಜುನಾಥ್ ಅವರನ್ನು ವ್ಯಕ್ತಿತ್ವದಿಂದ ಗುರುತಿಸಬೇಕು. ಸಾವಿರಾರು ಜನರ ಜೀವ ಉಳಿಸಿದವರು. ಅವರನ್ನು ಗೆಲ್ಲಿಸಿ ದೇಶಕ್ಕೆ ಕೊಡುಗೆ ನೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

ದಲಿತ ಸಂಘಟನೆಗಳು ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಲ್ಲ. ಅವರು ಯಾವುದೇ ಪಕ್ಷದ ಪರ ವಿರೋಧಿಗಳಲ್ಲ, ವ್ಯಕ್ತಿಗಳ ಪರವಾಗಿದ್ದಾರೆ. ಮಂಜುನಾಥ್ ರವರು ನಿರ್ದೇಶಕರಾಗಿ ಜಯದೇವ ಆಸ್ಪತ್ರೆಗೆ ಹೊಸ ರೂಪ ನೀಡಿದರು. ಈಗ ದೇಶದ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರುವ ಅವಶ್ಯಕತೆ ಇದೆ. ಮಂಜುನಾಥ್ ಗೆದ್ದರೆ ಕೇಂದ್ರದಲ್ಲಿ ಆರೋಗ್ಯ ಸಚಿವರಾಗುತ್ತಾರೆ. ಆಗ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಾರೆ ಎಂಬುದರಲ್ಲಿ ಅನುಮಾನ ಇಲ್ಲ ಎಂದು ಗೋವಿಂದರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ವಕ್ತಾರ ನರಸಿಂಹ ಮೂರ್ತಿ, ನಗರಸಭೆ ಸದಸ್ಯ ರಮೇಶ್, ಮುಖಂಡರಾದ ಸಬ್ಬಗೆರೆ ಶಿವಲಿಂಗಯ್ಯ, ದೊರೆಸ್ವಾಮಿ, ಜಯಕುಮಾರ್, ಶಂಭೇಗೌಡ, ಕೆಂಪರಾಮು, ಗಿರಿಯಪ್ಪ ಇತರರಿದ್ದರು.

ಜೆಡಿಎಸ್ ಸೇರ್ಪಡೆಯಾದ ಮುಖಂಡರು:

ಕರ್ನಾಟಕ ಅಲೆಮಾರಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ನರಸಿಂಹಯ್ಯ, ಆದಿವಾಸಿ ಯುವಪಡೆಯ ಜಿಲ್ಲಾಧ್ಯಕ್ಷ ಶಿವರಾಜು, ಬೀದಿ ಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಬೈರಲಿಂಗಯ್ಯ, ದಸಂಸ(ಭೀಮವಾದ) ಜಿಲ್ಲಾಧ್ಯಕ್ಷ ಅಶೋಕ್, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ವೆಂಕಟೇಶ್, ಮೇದಾರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಲೋಕೇಶ್, ಭೀಮ್ ಜಿಲ್ಲಾ ಉಪಾಧ್ಯಕ್ಷ ಕಾಂತರಾಜು, ದಸಂಸ(ಬೀಮವಾದ) ಯುವ ಜಿಲ್ಲಾಧ್ಯಕ್ಷ ಅಪ್ಪಾಜಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಬೋವಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ದೇವರಾಜು, ಮಾದಿಗ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸಿದ್ದರಾಜು, ಪ್ರಜಾ ವಿಮೋಚನಾ ಚಳವಳಿಯ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ತಾಲೂಕು ಅಧ್ಯಕ್ಷ ರಾಜಣ್ಣ, ಹಿರಿಯ ದಲಿತ ಹೋರಾಟಗಾರ ಸಿದ್ದರಾಮಯ್ಯ, ಪಟ್ಟಣ ಮಾರಾಟ ಸಮಿತಿಯ ಲಕ್ಷ್ಮೀ, ಬುಡಕಟ್ಟು ಹೋರಾಟ ಸಮಿತಿಯ ಪ್ರಕಾಶ್, ದಸಂಸ ಮುಖಂಡ ಶಿವರಾಜು, ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್, ಅಭಿನಂದನ್, ಕಾರ್ತಿಕ್, ಚೇತನ್ ಕುಮಾರ್, ಮಲ್ಲೇಶ್, ಶಂಕರ್, ರಘು ಸೇರಿದಂತೆ ದಲಿತ, ಬುಡಕಟ್ಟು, ಅಲೆಮಾರಿ ಸಮುದಾಯಗಳ ಸಂಘಟನೆಗಳ ಪದಾಧಿಕಾರಿಗಳು ಜೆಡಿಎಸ್ ಸೇರ್ಪಡೆಗೊಂಡರು.

click me!